ವಿಜಯಪುರ: ಭಾರತ್‌ ಬಂದ್; ಸರ್ಕಾರಿ ಬಸ್‌ಗಳಿಗಷ್ಟೇ ಸೀಮಿತ..!

7
ಕೇಂದ್ರ ಸರ್ಕಾರದ ವಿರುದ್ಧ ಪ್ರತ್ಯೇಕವಾಗಿ ಬೀದಿಗಿಳಿದ ಕಾಂಗ್ರೆಸ್‌, ಎಡಪಕ್ಷಗಳು ಹಾಗೂ ಸಂಘಟನೆಗಳು

ವಿಜಯಪುರ: ಭಾರತ್‌ ಬಂದ್; ಸರ್ಕಾರಿ ಬಸ್‌ಗಳಿಗಷ್ಟೇ ಸೀಮಿತ..!

Published:
Updated:
Deccan Herald

ವಿಜಯಪುರ: ಪೆಟ್ರೋಲ್‌, ಡೀಸೆಲ್‌ ಬೆಲೆ ದಿನದಿಂದ ದಿನಕ್ಕೆ ಗಗನಮುಖಿಯಾಗುತ್ತಿರುವುದನ್ನು ಖಂಡಿಸಿ, ಕಾಂಗ್ರೆಸ್‌ ನೇತೃತ್ವದಲ್ಲಿ ದೇಶಾದ್ಯಂತ ವಿರೋಧ ಪಕ್ಷಗಳು ಸೋಮವಾರ ಕರೆ ನೀಡಿದ್ದ ಭಾರತ್‌ ಬಂದ್‌ ವಿಜಯಪುರ ಜಿಲ್ಲೆಯ ವ್ಯಾಪ್ತಿಯಲ್ಲಿ ಪ್ರತಿಭಟನೆಗಷ್ಟೇ ಸೀಮಿತವಾಯ್ತು. ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಖಾಸಗಿ ವಾಹನಗಳ ಸಂಚಾರ ಎಂದಿನಂತಿತ್ತು. ಖಾಸಗಿ ಬಸ್, ಆಟೊ, ಟಂಟಂ, ಕ್ಯಾಬ್ ನಿರಾತಂಕವಾಗಿ ಸಂಚರಿಸಿದವು. ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಒಕ್ಕೂಟ ಸರ್ಕಾರಿ ಬಸ್ ಸಂಚಾರ ಸೇವೆಯನ್ನು ಸಂಪೂರ್ಣ ಸ್ಥಗಿತಗೊಳಿಸಿದ್ದರಿಂದ ಪ್ರಯಾಣಿಕರು ಪರದಾಡಿದರು.

ವಿಜಯಪುರದಿಂದ ಹೊರಡುವ ಎಲ್ಲ ಸಾರಿಗೆ ಸಂಸ್ಥೆಯ ಬಸ್‌ಗಳು ತಮ್ಮ ಸೇವೆ ಸ್ಥಗಿತಗೊಳಿಸಿದ್ದವು. ಇದರಿಂದ ನೆರೆಯ ಮಹಾರಾಷ್ಟ್ರ, ಗೋವಾ ಮತ್ತು ಅನ್ಯ ಜಿಲ್ಲೆಗಳಿಗೆ ಯಾವೊಂದು ಬಸ್‌ ಸಂಚರಿಸಲಿಲ್ಲ. ಜಿಲ್ಲೆ ವ್ಯಾಪ್ತಿಯೊಳಗೂ ಸರ್ಕಾರಿ ಸಾರಿಗೆ ಸೇವೆ ಸಂಪೂರ್ಣ ಬಂದ್‌ ಆಗಿತ್ತು.

ಎಪಿಎಂಸಿ ಮಾರುಕಟ್ಟೆ ವಹಿವಾಟು ಸ್ಥಗಿತಗೊಂಡಿತ್ತು. ಲಾಲ್ ಬಹಾದ್ದೂರ್ ಶಾಸ್ತ್ರಿ ಮಾರುಕಟ್ಟೆ ಪ್ರಾಂಗಣದಲ್ಲಿ ಅರ್ಧ ಅಂಗಡಿಗಳು ತೆರೆದಿದ್ದರೆ, ಉಳಿದರ್ಧ ಬಂದ್‌ ಆಗಿದ್ದವು. ಸಿದ್ಧೇಶ್ವರ ದೇಗುಲದಿಂದ ಕಾಂಗ್ರೆಸ್‌ ಕಾರ್ಯಕರ್ತರ ಮೆರವಣಿಗೆ ತೆರಳಿದ ಬಳಿಕ, ಹಿಂದೆಯೇ ಎಲ್ಲಾ ಅಂಗಡಿಗಳು ತೆರೆದು ತಮ್ಮ ವಹಿವಾಟು ನಡೆಸಿದವು.

ಮಧ್ಯಾಹ್ನ 3ರವರೆಗೂ ಚಲನಚಿತ್ರ ಪ್ರದರ್ಶನವೂ ಬಂದ್‌ ಆಗಿತ್ತು. ಕೆಲ ಪೆಟ್ರೋಲ್‌, ಡೀಸೆಲ್‌ ಬಂಕ್‌ಗಳು ಸೇವೆ ಸ್ಥಗಿತಗೊಳಿಸಿದ್ದರೆ, ಹಲವು ಎಂದಿನಂತೆ ಕಾರ್ಯ ನಿರ್ವಹಿಸಿದ ದೃಶ್ಯ ನಗರದಲ್ಲಿ ಗೋಚರಿಸಿತು.

ಬಿಕೋ ಎಂದ ಬಸ್‌ ನಿಲ್ದಾಣ

ಶಾಲಾ–ಕಾಲೇಜುಗಳಿಗೆ ಮುಂಚಿತವಾಗಿಯೇ ರಜೆ ಘೋಷಿಸಲಾಗಿತ್ತು. ಬೆಳಿಗ್ಗೆ 8 ಗಂಟೆ ಬಳಿಕ ಜಿಲ್ಲೆಯ ಎಲ್ಲೆಡೆ ಸರ್ಕಾರಿ ಸಾರಿಗೆ ಬಸ್‌ ರಸ್ತೆಗಿಳಿಯದಿದ್ದರಿಂದ ದೂರದೂರಿನ ಪ್ರಯಾಣಿಕರು ಪರದಾಡುವಂತಾಯ್ತು. ಬಸ್‌ ನಿಲ್ದಾಣದೊಳಗೆ ತೆರೆದಿದ್ದ ಹೋಟೆಲ್‌ಗಳಲ್ಲೇ ಊಟ–ಉಪಾಹಾರ ನಡೆಸಿದರು.

ವಿಜಯಪುರ ನಗರ ಸೇರಿದಂತೆ ವಿವಿಧ ಪಟ್ಟಣಗಳ ಬಸ್‌ ನಿಲ್ದಾಣಗಳಿಂದ ಬೇರೆ ಊರುಗಳಿಗೆ ಪ್ರಯಾಣಿಸಬೇಕಿದ್ದ ಪ್ರಯಾಣಿಕರು ಸಾರಿಗೆ ವ್ಯವಸ್ಥೆಗಾಗಿ ಪರದಾಡಿದರು. ಇದನ್ನೇ ಬಳಸಿಕೊಂಡ ಖಾಸಗಿ ವಾಹನಗಳ ಮಾಲೀಕರು, ಚಾಲಕರು ದುಬಾರಿ ದರಕ್ಕೆ ಇಂಡಿ, ಸಿಂದಗಿ, ಜಮಖಂಡಿ, ಅಥಣಿ ಪಟ್ಟಣಗಳಿಗೆ ಪ್ರಯಾಣಿಕರನ್ನು ಕರೆದೊಯ್ದ ಚಿತ್ರಣ ಗೋಚರಿಸಿತು.

ಮುಂಜಾನೆಯಿಂದಲೇ ನಗರ ಸಾರಿಗೆ ಬಸ್‌ಗಳು ರಸ್ತೆಗಿಳಿಯದಿದ್ದರಿಂದ ಬಹುತೇಕ ಆಟೊ ಚಾಲಕರು ಮೂರು ಪಟ್ಟು ದರ ವಸೂಲಿ ಮಾಡಿದ ದೃಶ್ಯಾವಳಿ ವಿವಿಧೆಡೆ ಕಂಡು ಬಂತು. ಹೆಚ್ಚು ದರ ನೀಡಲಾಗದ ಪ್ರಯಾಣಿಕರು, ಬಸ್‌ ಸಂಚಾರ ಆರಂಭಗೊಳ್ಳುವ ತನಕವೂ ಬಸ್‌ ನಿಲ್ದಾಣಗಳಲ್ಲೇ ಬೀಡು ಬಿಟ್ಟು ವಿರಮಿಸಿದರು. ಕೆಲವರು ನಿದ್ರೆಗೂ ಶರಣಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !