ನೆರೆ ಸಂತ್ರಸ್ಥರಿಗೆ ಮಿಡಿದ ಬಿಡದಿ ಜನತೆ

7
₨1ಲಕ್ಷಕ್ಕೂ ಹೆಚ್ಚು ದೇಣಿಗೆ: ವಿವಿಧ ಸಾಮಗ್ರಿ ಸಂಗ್ರಹ

ನೆರೆ ಸಂತ್ರಸ್ಥರಿಗೆ ಮಿಡಿದ ಬಿಡದಿ ಜನತೆ

Published:
Updated:
Deccan Herald

ಬಿಡದಿ (ರಾಮನಗರ): ಕೊಡಗು ಜಿಲ್ಲೆಯಾದ್ಯಂತ ಅತಿವೃಷ್ಟಿಯಿಂದ ತತ್ತರಿಸುತ್ತಿರುವ ಜನರಿಗಾಗಿ ಬಿಡದಿಯ ನಾಗರಿಕರು ಮಿಡಿದಿದ್ದಾರೆ. ಈವರೆಗೆ ₨ 1ಲಕ್ಷಕ್ಕೂ ಹೆಚ್ಚು ನಗದು ಸಂಗ್ರಹವಾಗಿದ್ದು, ಯಥೇಚ್ಛ ಪ್ರಮಾಣದ ಆಹಾರ ಮತ್ತು ದಿನಬಳಕೆ ಸಾಮಗ್ರಿಗಳನ್ನೂ ಕಲೆಹಾಕಲಾಗಿದೆ.

ಭಾನುವಾರ ಪಟ್ಟಣದಲ್ಲಿ ವಿವಿಧ ಮುಖಂಡರ ನೇತೃತ್ವದಲ್ಲಿ ಪಕ್ಷಾತೀತವಾಗಿ ದೇಣಿಗೆ ಸಂಗ್ರಹ ಕಾರ್ಯವು ನಡೆಯಿತು. ಸಾರ್ವಜನಿಕರ ಬಳಿಗೆ ತೆರಳಿ ನೆರವು ಕೋರಲಾಯಿತು. ಸಾಕಷ್ಟು ಮಂದಿ ಸ್ವಯಂಪ್ರೇರಿತವಾಗಿ ನೆರವು ನೀಡಿದರು. ಕೆಲವರು ಧನ ಸಹಾಯ ಮಾಡಿದರೆ, ಇನ್ನೂ ಕೆಲವರು ನಿರಾಶ್ರಿತರಿಗೆ ಅವಶ್ಯವಾದ ಸಾಮಗ್ರಿಗಳನ್ನು ನೀಡಿದರು.

‘ಈವರೆಗೆ ಸುಮಾರು 15 ಕ್ವಿಂಟಲ್‌ನಷ್ಟು ಅಕ್ಕಿ, 1 ಕ್ವಿಂಟಲ್‌ನಷ್ಟು ಉಪ್ಪು, 2ಸಾವಿರ ಬಾಟಲ್‌ನಷ್ಟು ಕುಡಿಯವ ನೀರು ಸೇರಿದಂತೆ ವಿವಿಧ ಸಾಮಗ್ರಿಗಳನ್ನು ಸಂಗ್ರಹಿಸಲಾಗಿದೆ’ ಎಂದು ದೇಣಿಗೆ ಸಂಗ್ರಹ ಕಾರ್ಯದ ನೇತೃತ್ವ ವಹಿಸಿರುವ ತಾಲ್ಲೂಕು ಪಂಚಾಯಿತಿ ಸದಸ್ಯ ಗಾಣಕಲ್‌ ನಟರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

‘ನೆರೆಯಿಂದ ಕಂಗೆಟ್ಟಿರುವ ಪ್ರತಿ ಕುಟುಂಬಕ್ಕೆ ಕಿಟ್‌ ರೂಪದಲ್ಲಿ ನೆರವು ನೀಡಲು ಯೋಜನೆ ಹಮ್ಮಿಕೊಳ್ಳಲಾಗಿದೆ. ತಲಾ ಐದು ಕೆ.ಜಿ. ಅಕ್ಕಿ, ಉಪ್ಪು, ಪಡಿತರ, ಟೂತ್‌ಪೇಸ್ಟ್, ಸೋಪ್‌ ಮೊದಲಾದ ಸಾಮಗ್ರಿಗಳನ್ನು ಇದು ಒಳಗೊಳ್ಳಲಿದೆ. ಮಂಗಳವಾರ ಅಥವಾ ಬುಧವಾರ ಈ ಎಲ್ಲ ಸಾಮಗ್ರಿಗಳನ್ನು ಕೊಡಗಿಗೆ ಸಾಗಿಸಲಾಗುವುದು’ ಎಂದು ಅವರು ತಿಳಿಸಿದರು.

‘ಪಟ್ಟಣದ ವರ್ತಕರ ಸಂಘ, ಗೆಳೆಯರ ಬಳಗ, ರೋಟರಿ, ಮಹಿಳಾ ಸಂಘಗಳೂ ಸೇರಿದಂತೆ ಹತ್ತಾರು ಸಂಘ–ಸಂಸ್ಥೆಗಳು ಈ ಕಾರ್ಯದಲ್ಲಿ ಕೈ ಜೋಡಿಸಿವೆ. ಸದ್ಯ ಸಂಗ್ರಹವಾಗಿರುವ ಸಾಮಗ್ರಿಗಳನ್ನು ಬಿಡದಿಯ ರಾಮಮಂದಿರದಲ್ಲಿ ಇರಿಸಲಾಗಿದೆ. ಆಸಕ್ತರು ನೆರವು ನೀಡುವ ಮೂಲಕ ನಮ್ಮ ಸಹೋದರರ ಕಷ್ಟದಲ್ಲಿ ಭಾಗಿಯಾಗಬೇಕು’ ಎಂದು ಮನವಿ ಮಾಡಿದರು.

ನೆರೆ ಸಂತ್ರಸ್ಥರಿಗಾಗಿ ಪರೋಟ ತಯಾರು
ಮನೆ ಕಳೆದುಕೊಂಡು ಕಂಗೆಟ್ಟಿರುವ ಜನರ ಹಸಿವು ನೀಗಿಸುವ ಸಲುವಾಗಿ ಬಿಡದಿಯ ವನಿತೆಯರು ಪರೋಟಗಳನ್ನು ಸಿದ್ಧಪಡಿಸುತ್ತಿದ್ದಾರೆ.
ಇಲ್ಲಿನ ಮಹಿಳಾ ಸ್ವಸಹಾಯ ಸಂಘಗಳು, ಬ್ಯೂಟಿಪಾರ್ಲರ್ ಕಾರ್ಮಿಕರ ಸಂಘದವರು ಸೇರಿಕೊಂಡು ಸುಮಾರು ಒಂದು ಸಾವಿರ ಪರೋಟಾ ಸಿದ್ಧಪಡಿಸಿದ್ದು, ಅವುಗಳನ್ನು ನೆರೆ ಸಂತ್ರಸ್ಥರಿಗೆ ರವಾನಿಸಲು ಸಿದ್ಧತೆ ನಡೆದಿದೆ.

ವಿದ್ಯಾರ್ಥಿಗಳಿಂದ ದೇಣಿಗೆ ಸಂಗ್ರಹಕ್ಕೆ ಮನವಿ
ಕೊಡಗಿನ ಜನರ ಕಷ್ಟದಲ್ಲಿ ಭಾಗಿಯಾಗುವ ಸಲುವಾಗಿ ಜಿಲ್ಲೆಯಲ್ಲಿನ ಶಾಲೆ–ಕಾಲೇಜು ವಿದ್ಯಾರ್ಥಿಗಳು ಸಾರ್ವಜನಿಕರಿಂದ ದೇಣಿಗೆ ಸಂಗ್ರಹಕ್ಕೆ ಮುಂದಾಗಬೇಕು ಎಂದು ತಾ.ಪಂ. ಸದಸ್ಯ ಗಾಣಕಲ್‌ ನಟರಾಜು ಮನವಿ ಮಾಡಿದರು. ಹೀಗೆ ಸಂಗ್ರಹವಾದ ಹಣವನ್ನು ಜಿಲ್ಲಾಧಿಕಾರಿ ಮುಂದಿಟ್ಟು ಅದನ್ನು ನೆರೆ ಸಂತ್ರಸ್ಥರಿಗೆ ತಲುಪಿಸುವ ಪ್ರಯತ್ನ ಮಾಡಬಹುದು. ಸೋಮವಾರ ಒಂದು ಗಂಟೆ ಸಮಯವನ್ನು ಎಲ್ಲ ವಿದ್ಯಾರ್ಥಿಗಳನ್ನು ಇದಕ್ಕಾಗಿ ಮೀಸಲಿಡಬೇಕು ಎಂದು ಕೋರಿದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !