ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ‘ಬಿದಾಯಿ’ ಯೋಜನೆ ಫಲಾನುಭವಿಗಳಿಗೆ ₹ 7.50 ಕೋಟಿ ಬಾಕಿ

2013ರಲ್ಲಿ ಯೋಜನೆ ಆರಂಭ; 3,242 ಫಲಾನುಭವಿಗಳು
Last Updated 7 ಜೂನ್ 2019, 19:45 IST
ಅಕ್ಷರ ಗಾತ್ರ

ವಿಜಯಪುರ: ‘ಬಿದಾಯಿ’ ಯೋಜನೆಯ ಫಲಾನುಭವಿಗಳಿಗೆ ಸರ್ಕಾರ ಸಕಾಲಕ್ಕೆ ಹಣ ಬಿಡುಗಡೆ ಮಾಡದ್ದರಿಂದ ಜಿಲ್ಲೆಯಲ್ಲಿ ಬರೋಬ್ಬರಿ ₹7.50 ಕೋಟಿ ಬಾಕಿ ಉಳಿದುಕೊಂಡಿದೆ.

2013–14ರಿಂದ 2018–19ರ ವರೆಗೆ ಒಟ್ಟು 4,900 ಅರ್ಜಿಗಳು ಸ್ವೀಕೃತಗೊಂಡಿವೆ. 3,700 ಮುಸ್ಲಿಂ, 5 ಕ್ರೈಸ್ತ, 30 ಜೈನ ಹಾಗೂ ಒಬ್ಬರು ಬೌದ್ಧ ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ 142 ಅರ್ಜಿಗಳು ತಿರಸ್ಕೃತಗೊಂಡಿವೆ. ಸದ್ಯ 1,500 ಫಲಾನುಭವಿಗಳಿಗೆ ತಲಾ ₹50 ಸಾವಿರದಂತೆ ₹7.50 ಕೋಟಿ ಹಣವನ್ನು ಸರ್ಕಾರ ಬಿಡುಗಡೆ ಮಾಡಬೇಕಾಗಿದೆ.

ಆರ್ಥಿಕವಾಗಿ ಹಿಂದುಳಿದ ಮುಸ್ಲಿಂ, ಕ್ರೈಸ್ತ, ಬೌದ್ಧ, ಸಿಖ್ ಮತ್ತು ಪಾರ್ಸಿ ಸಮುದಾಯಗಳ ಮಹಿಳೆಯರಿಗೆ ವಿವಾಹ ಸಂದರ್ಭದಲ್ಲಿ ಬಿದಾಯಿ ಯೋಜನೆಯಡಿ ₨50 ಸಾವಿರ ಧನ ಸಹಾಯ ನೀಡಲಾಗುತ್ತದೆ.

ಮುಸ್ಲಿಂ, ಜೈನ, ಕ್ರೈಸ್ತ ಫಲಾನುಭವಿಗಳು ಧನ ಸಹಾಯಕ್ಕೆ ಅರ್ಜಿ ಸಲ್ಲಿಸಿದ್ದು, ಈ ಪೈಕಿ ಮುಸ್ಲಿಮರು ಅತೀ ಹೆಚ್ಚು ಸಂಖ್ಯೆಯಲ್ಲಿ ಇದ್ದಾರೆ. ಆದರೆ, ಸಿಖ್, ಬೌದ್ಧ ಮತ್ತು ಪಾರ್ಸಿ ಸಮುದಾಯದಿಂದ ಯಾರೂ ಅರ್ಜಿ ಸಲ್ಲಿಸಿಲ್ಲ.

‘ಆರ್ಥಿಕವಾಗಿ ತೊಂದರೆ ಎದುರಿಸುತ್ತಿರುವ ಅಲ್ಪಸಂಖ್ಯಾತ ಮಹಿಳೆಯರಿಗೆ ಸಹಾಯವಾಗಲೆಂದು ಸರ್ಕಾರ ಬಿದಾಯಿ ಯೋಜನೆ ಆರಂಭಿಸಿದೆ. ಆದರೆ, ಸಕಾಲಕ್ಕೆ ಧನ ಸಹಾಯ ನೀಡದಿದ್ದರೆ ಏನು ಪ್ರಯೋಜನ. ನಾನು ಅರ್ಜಿ ಸಲ್ಲಿಸಿ ವರ್ಷವಾದರೂ ಇನ್ನೂ ಹಣ ಕೈಸೇರಿಲ್ಲ. ಈಗಲಾದರೂ ಸರ್ಕಾರ ಸಕಾಲಕ್ಕೆ ಧನ ಸಹಾಯ ನೀಡಬೇಕು’ ಎಂದು ಹೆಸರು ಹೇಳಲು ಇಚ್ಛಿಸದ ಯೋಜನೆಯ ಫಲಾನುಭವಿಯೊಬ್ಬರು ಒತ್ತಾಯಿಸಿದರು.

‘ಫಲಾನುಭವಿಗಳು ಮದುವೆಯ ದಿನಾಂಕದ 7 ದಿನಕ್ಕೂ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಮದುವೆಗೆ 7 ದಿನ ಅಥವಾ 6 ದಿನ ಇದ್ದಾಗ ಅರ್ಜಿ ಸಲ್ಲಿಸಲು ಬರುವುದಿಲ್ಲ’ ಎಂದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿ ಸುರೇಶ ಕೋಕರೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅರ್ಜಿ ಸಲ್ಲಿಸಿದ ಬಳಿಕ ಮದುವೆಯ ಆಹ್ವಾನ ಪತ್ರ, ಆದಾಯ ಪ್ರಮಾಣಪತ್ರ, ವಯಸ್ಸು ದೃಢೀಕರಣ ಪತ್ರ, ಮದುವೆ ನೋಂದಣಿ ಪತ್ರ, ಈ ಹಿಂದೆ ಯೋಜನೆಯ ಲಾಭ ಪಡೆದಿಲ್ಲ ಎಂಬ ಕರಾರು ಪತ್ರ, ಫೋಟೊಗಳನ್ನು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಕಚೇರಿಗೆ ಸಲ್ಲಿಸಬೇಕು. ಒಂದು ಬಾರಿ ಅರ್ಜಿ ಸಲ್ಲಿಸಿದರೆ, ಫಲಾನುಭವಿಯ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಸಂದಾಯವಾಗುತ್ತದೆ. ಅವರು ಮತ್ತೆ ಕಚೇರಿಗೆ ಅಲೆಯುವ ಅವಶ್ಯತೆ ಇಲ್ಲ’ ಎಂದು ಮಾಹಿತಿ ನೀಡಿದರು.

‘ಧಾರವಾಡ, ಹಾವೇರಿ ಮತ್ತು ಬೀದರ್‌ನಲ್ಲಿ ಅತೀ ಹೆಚ್ಚು ಅರ್ಜಿಗಳು ಬಾಕಿ ಇವೆ. ಹೀಗಾಗಿ ಆ ಜಿಲ್ಲೆಗಳಿಗೆ ಸರ್ಕಾರ ಹೆಚ್ಚು ಅನುದಾನ ಬಿಡುಗಡೆ ಮಾಡುತ್ತದೆ. ಮದುವೆಯಾದವರ ಜೇಷ್ಠತೆಯ ಆಧಾರದ ಮೇಲೆ ನಾವು ಧನ ಸಹಾಯ ನೀಡುತ್ತೇವೆ. ಮಾರ್ಚ್‌ನಿಂದ ಮೇ ವರೆಗೆ ಅತೀ ಹೆಚ್ಚು ಮದುವೆಗಳು ಆಗುತ್ತವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT