ಬೀದರ್: ರಾಜ್ಯ ಸರ್ಕಾರ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಗಣನಾಯಕನ ಪ್ರತಿಷ್ಠಾಪನೆಗೆ ಅನುಮತಿ ನೀಡಿದ ನಂತರ ನಗರದ ಮಾರುಕಟ್ಟೆಯಲ್ಲಿ ವ್ಯವಹಾರ ಗರಿ ಬಿಚ್ಚಿಕೊಂಡಿದೆ. ಎರಡು ದಿನಗಳಲ್ಲೇ ಗಣಪತಿ ಮೂರ್ತಿಗಳಿಗೆ ಬೇಡಿಕೆ ಹೆಚ್ಚಿದೆ. ಮೂರ್ತಿ, ಪೂಜಾ ಸಾಮಗ್ರಿ ಹಾಗೂ ಹಣ್ಣಿನ ಬೆಲೆಯಲ್ಲೂ ಹೆಚ್ಚಳವಾಗಿದೆ.
ಕಳೆದ ವರ್ಷ ಕೋವಿಡ್ ಕಾರಣ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡಿರಲಿಲ್ಲ. ಅನೇಕ ದೊಡ್ಡ ಗಣಪತಿಗಳು ಮಾರಾಟವಾಗದೇ ಗೋದಾಮುಗಳಲ್ಲಿ ಉಳಿದುಕೊಂಡಿದ್ದವು. ಮೂರ್ತಿಕಾರರು ಹಾಗೂ ಮಾರಾಟ ವ್ಯವಹಾರದಲ್ಲಿ ತೊಡಗಿದವರು ನಷ್ಟ ಅನುಭವಿಸಿದ್ದರು. ಹೀಗಾಗಿ ಕಳೆದ ವರ್ಷದ ಮೂರ್ತಿಗಳಿಗೆ ಮತ್ತೊಮ್ಮೆ ಬಣ್ಣ ಬಳಿದು ಮಾರಾಟಕ್ಕೆ ಇಡಲಾಗಿದೆ.
ಗಣೇಶ ಪ್ರತಿಮೆಗಳ ಕಚ್ಚಾ ಸಾಮಗ್ರಿಗಳ ಬೆಲೆ ಏರಿಕೆಯಾಗಿದೆ. ಕಳೆದ ವರ್ಷದ ದೊಡ್ಡ ಗಣಪತಿ ಮೂರ್ತಿಗಳಿಗೆ ಬೆಲೆ ಕಡಿಮೆ ನಿಗದಿಪಡಿಸಲಾಗಿದೆ. ಹೊಸದಾಗಿ ನಿರ್ಮಿಸಲಾಗಿರುವ ಮೂರ್ತಿಗಳ ಬೆಲೆಯಲ್ಲಿ ₹ 500ರಿಂದ ₹ 1 ಸಾವಿರ ಹೆಚ್ಚಳವಾಗಿದೆ.
ಮನೆ ಗಣಪತಿಗಳು ₹250 ರಿಂದ ₹1,500 ವರೆಗೆ ಮಾರಾಟವಾಗಿವೆ. ಉತ್ತಮ ವಿನ್ಯಾಸದ ಸ್ವಲ್ಪ ದೊಡ್ಡದಾದ ಗಣಪತಿಗಳು ಎರಡು ಸಾವಿರ ರೂಪಾಯಿ ವರೆಗೆ ಮಾರಾಟವಾಗಿವೆ. ಮಧ್ಯಮ ಗಾತ್ರದ ಗಣಪತಿಗಳನ್ನು ₹ 6 ಸಾವಿರದಿಂದ ₹ 7 ಸಾವಿರಕ್ಕೆ ಕೊಡಲಾಗಿದೆ’ ಎಂದು ಮೂರ್ತಿಕಾರ ಶಂಕರ ತಿಳಿಸಿದರು.
‘ದೊಡ್ಡ ಗಣಪತಿ ಮೂರ್ತಿಗಳ ಬೆಲೆ ₹ 25 ಸಾವಿರದಿಂದ ₹17 ಸಾವಿರಕ್ಕೆ ಕುಸಿದಿದೆ. ದೊಡ್ಡ ಗಣಪತಿಗಳಿಗೆ ನಿಷೇಧವೂ ಇರುವ ಕಾರಣ ಅನಿವಾರ್ಯವಾಗಿ ಕಡಿಮೆ ಬೆಲೆಗೆ ಮಾರಾಟ ಮಾಡಿದ್ದೇವೆ’ ಎಂದು ಕಲಾವಿದರು ಹೇಳಿದರು.
ನಗರದ ರೋಟರಿ ವೃತ್ತ ಸಮೀಪದ ಸಾಯಿ ಆದರ್ಶ ಶಾಲಾ ಮೈದಾನದಲ್ಲಿ ಒಂದೆರಡು ಪಟಾಕಿ ಅಂಗಡಿಗಳು ತೆರೆದುಕೊಳ್ಳುತ್ತಿದ್ದವು. ಈ ವರ್ಷ ಒಂದು ಅಂಗಡಿಯೂ ತೆರೆದುಕೊಂಡಿಲ್ಲ. ಮೋಹನ್ ಮಾರ್ಕೆಟ್‌ನಲ್ಲಿ ಒಂದೆರಡು ಅಂಗಡಿಗಳಲ್ಲಿ ಮಾತ್ರ ಪಟಾಕಿ ಮಾರಾಟವಾಗುತ್ತಿದೆ. ಪಟಾಕಿ ಮಾರಾಟ ಸಹ ಕಡಿಮೆ ಇದೆ.
ಹಣ್ಣಿನ ಬೆಲೆಯಲ್ಲಿ ಹೆಚ್ಚಳ:ಭಕ್ತರು ಗುರುವಾರ ಏಕದಂತನ ಪೂಜೆಗೆ ಹಣ್ಣು, ಕಾಯಿ ಖರೀದಿಸಿದರು. ಗ್ರಾಹಕರಿಗೆ ಹಬ್ಬದ ಬೆಲೆ ಏರಿಕೆಯ ಬಿಸಿ ತಟ್ಟಿತು. ಸೇಬು ಪ್ರತಿ ಕೆಜಿ ಬೆಲೆ ₹ 100ರಿಂದ 140, ಮೊಸಂಬಿ, ಚಿಕ್ಕು ₹ 60ರಿಂದ 80 ಹಾಗೂ ಬಾಳೆ ಹಣ್ಣು 35ರಿಂದ ₹45ಕ್ಕೆ ಹೆಚ್ಚಿದೆ. ಹಣ್ಣಿನ ಬೆಲೆಯಲ್ಲಿ ಪ್ರತಿ ಕೆ.ಜಿಗೆ ₹ 50 ಹೆಚ್ಚಳವಾದರೆ, ಹೂವಿನ ಬೆಲೆ ಪ್ರತಿ ಕೆಜಿಗೆ ₹ 50 ಏರಿಕೆಯಾಗಿದೆ.
ಚೆಂಡು ಹಾಗೂ ಸೇವಂತಿ ಹೂವು ಪ್ರತಿ ಕೆ.ಜಿ ಬೆಲೆ ₹ 100ರಿಂದ 150 ಹೆಚ್ಚಳವಾಗಿದೆ. ಹೂವಿನ ಮಾಲೆಯ ಬೆಲೆಯಲ್ಲೂ ಏರಿಕೆಯಾಗಿದೆ. ಅಲಂಕಾರಿಕ ವಿದ್ಯುತ್ ದೀಪಗಳು, ಇನ್ನಿತರ ಅಲಂಕಾರಿಕ ವಸ್ತುಗಳ ಬೆಲೆಯೂ ಹೆಚ್ಚಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.