ಆರಂಭದಲ್ಲಿ ಕ್ಯಾನ್ಸರ್ ಪತ್ತೆ ಹಚ್ಚಿ: ಡಾ. ಬಿಪಿನ್ ಗೋಯಲ್

ಬೀದರ್: ‘ಪ್ರಾಥಮಿಕ ಹಂತದಲ್ಲೇ ರೋಗ ಪತ್ತೆ ಹಚ್ಚಿ, ಚಿಕಿತ್ಸೆ ಪಡೆದರೆ ಕ್ಯಾನ್ಸರ್‌ನಿಂದ ಗುಣಮುಖರಾಗಲು ಸಾಧ್ಯ’ ಎಂದು ಹೈದರಾಬಾದ್‍ನ ಕ್ಯಾನ್ಸರ್ ತಜ್ಞ ಡಾ. ಬಿಪಿನ್ ಗೋಯಲ್ ಹೇಳಿದರು.
ಇಲ್ಲಿಯ 100 ಹಾಸಿಗೆಗಳ ಪ್ರಸೂತಿ ಆರೈಕೆ ಆಸ್ಪತ್ರೆಯಲ್ಲಿ ಶನಿವಾರ ಆಯೋಜಿಸಿದ ಕ್ಯಾನ್ಸರ್ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.
ಕ್ಯಾನ್ಸರ್ ಬಗ್ಗೆ ಅರಿಯುವುದು ಹಾಗೂ ಮುಂಜಾಗ್ರತೆ ವಹಿಸುವುದು ಬಹಳ ಅವಶ್ಯಕ ಎಂದು ತಿಳಿಸಿದರು.
ತಂಬಾಕು ಹಾಗೂ ತಂಬಾಕಿನ ಉತ್ಪನ್ನಗಳ ಸೇವನೆಯು ಕ್ಯಾನ್ಸರ್‌ಗೆ ಮುಖ್ಯ ಕಾರಣವಾಗಿದೆ. ಇದರಿಂದ ಎಲ್ಲರೂ ದೂರ ಇರಬೇಕು ಎಂದು ಸಲಹೆ ನೀಡಿದರು.
ಶಿಬಿರ ಉದ್ಘಾಟಿಸಿದ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್., ಮಾತನಾಡಿ, ‘ಆಧುನಿಕ ಜೀವನ ಶೈಲಿ, ಆಹಾರ ಪದ್ಧತಿ, ಕಡಿಮೆ ಪೋಷಕಾಂಶ ಹೊಂದಿರುವ ಆಹಾರ ಹಾಗೂ ತಂಬಾಕು ಸೇವನೆಯಿಂದ ಕ್ಯಾನ್ಸರ್ ಪ್ರಮಾಣ ಎಲ್ಲ ವಯೋಮಾನದವರಲ್ಲೂ ಹೆಚ್ಚುತ್ತಿದೆ. ಇದು ಕಳವಳಕಾರಿಯಾಗಿದೆ’ ಎಂದರು.
ಜಿಲ್ಲೆಯ ರೋಗಿಗಳಿಗೆ ನೆರವಾಗಲು ಉಚಿತ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಬರುವ ದಿನಗಳಲ್ಲಿ ಇಂತಹ ಶಿಬಿರಗಳು ಜಿಲ್ಲೆಯ ಎಲ್ಲ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ನಡೆಯುವಂತಾಗಬೇಕು ಎಂದು ಹೇಳಿದರು.
ಸಾರ್ವಜನಿಕರು ಕ್ಯಾನ್ಸರ್ ಶಿಬಿರಗಳ ಪ್ರಯೋಜನ ಪಡೆಯಬೇಕು. ರೋಗ ಪೀಡಿತರು ಚಿಕಿತ್ಸೆಗೆ ಒಳಗಾಗಿ, ಆರೋಗ್ಯವಂತ ಬದುಕು ಕಟ್ಟಿಕೊಳ್ಳಬೇಕು ಎಂಬುವುದು ಸರ್ಕಾರದ ಆಶಯ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಜಹೀರಾ ನಸೀಮ್ ಮಾತನಾಡಿ, ಕ್ಯಾನ್ಸರ್ ತಪಾಸಣೆ ಮಾಡಿಸಿಕೊಳ್ಳುವುದು ಹಾಗೂ ಆತಂಕಕ್ಕೆ ಒಳಗಾಗದೆ ಚಿಕಿತ್ಸೆ ಪಡೆಯುವುದು ಇಂದಿನ ಅನಿವಾ ರ್ಯತೆಯಾಗಿದೆ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವಿ.ಜಿ. ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಬ್ರಿಮ್ಸ್ ನಿರ್ದೇಶಕ ಡಾ.ಚಂದ್ರಕಾಂತ ಚಿಲ್ಲರ್ಗಿ, ಭಾರತೀಯ ವೈದ್ಯಕೀಯ ಸಂಘದ ಡಾ.ವಿ.ವಿ. ನಾಗರಾಜ, ಸ್ತ್ರೀರೋಗ ತಜ್ಞೆ ಡಾ. ಉಮಾ ದೇಶಮುಖ, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಸಂಗಾರೆಡ್ಡಿ, ಡಾ. ಮಹಮ್ಮದ್ ಸೊಹೆಲ್ ಇದ್ದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸಂಗಪ್ಪ ಕಾಂಬಳೆ ನಿರೂಪಿಸಿದರು. ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಶ್ರಾವಣ ಜಾಧವ್ ವಂದಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.