ಮಧುಮೇಹ, ಸ್ತನ ಕ್ಯಾನ್ಸರ್ ತಪಾಸಣೆ ಉಚಿತ

7
ನಾಗಮಾರಪಳ್ಳಿ ಆಸ್ಪತ್ರೆ ವಾರ್ಷಿಕ ಮಹಾಸಭೆ: ಸೂರ್ಯಕಾಂತ ಘೋಷಣೆ

ಮಧುಮೇಹ, ಸ್ತನ ಕ್ಯಾನ್ಸರ್ ತಪಾಸಣೆ ಉಚಿತ

Published:
Updated:
Deccan Herald

ಬೀದರ್: ‘ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸುಪರ್ ಸ್ಪೆಷಾಲಿಟಿ ಸಹಕಾರ ಆಸ್ಪತ್ರೆಯಲ್ಲಿ ಮಧುಮೇಹ, ಸ್ತನ ಕ್ಯಾನ್ಸರ್ ಹಾಗೂ ಗರ್ಭಿಣಿಯರ ಉಚಿತ ತಪಾಸಣೆ ನಡೆಸಲಾಗುವುದು’ ಎಂದು ಆಸ್ಪತ್ರೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಘೋಷಿಸಿದರು.

ನಗರದಲ್ಲಿ ಶುಕ್ರವಾರ ನಡೆದ ಆಸ್ಪತ್ರೆಯ ಐದನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಥರ್ಮೋಸ್ಕ್ಯಾನ್ ಯಂತ್ರ ಬಳಸಿ ಮಧುಮೇಹ ಹಾಗೂ ಸ್ತನ ಕ್ಯಾನ್ಸರ್ ತಪಾಸಣೆ ಮಾಡಲಾಗುವುದು. ಒಂಬತ್ತು ತಿಂಗಳ ಕಾಲ ಗರ್ಭಿಣಿಯರ ಮಾಸಿಕ ತಪಾಸಣೆ ಉಚಿತವಾಗಿ ನಡೆಸಲಾಗುವುದು’ ಎಂದು ತಿಳಿಸಿದರು.

‘ಆಸ್ಪತ್ರೆಯು 2017-18ನೇ ಸಾಲಿನಲ್ಲಿ ₹ 1.20 ಕೋಟಿ ನಿವ್ವಳ ಲಾಭ ಗಳಿಸಿದೆ. 70 ಸಾವಿರ ರೋಗಿಗಳ ತಪಾಸಣೆ ನಡೆಸಿದ್ದು, ಈ ವರ್ಷ 1 ಲಕ್ಷ ರೋಗಿಗಳ ತಪಾಸಣೆಯ ಗುರಿ ಹೊಂದಿದೆ’ ಎಂದು ಹೇಳಿದರು.

‘ಮಾಜಿ ಸಚಿವ ದಿ. ಗುರುಪಾದಪ್ಪ ನಾಗಮಾರಪಳ್ಳಿ ಅವರ ಆಶಯದಂತೆ ಲಾಲಬಾಗ್‌ ಸಮೀಪ 350 ಹಾಸಿಗೆಗಳ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜು ಸ್ಥಾಪನೆಗೆ ಎಲ್ಲ ಪ್ರಯತ್ನ ನಡೆಸಲಾಗುತ್ತಿದೆ. ನಿಸರ್ಗ ಚಿಕಿತ್ಸಾಲಯ, ನರ್ಸಿಂಗ್ ಹಾಗೂ ಫಾರ್ಮಸಿ ಕಾಲೇಜುಗಳನ್ನೂ ಸ್ಥಾಪಿಸಲು ಆಯೋಜಿಸಲಾಗಿದೆ’ ಎಂದು ತಿಳಿಸಿದರು.

‘ಆಸ್ಪತ್ರೆಗಾಗಿ ಜಿಲ್ಲೆಯ 13,811 ಜನರಿಂದ ₹ 30.68 ಕೋಟಿ ಷೇರು ಸಂಗ್ರಹಿಸಲಾಗಿದೆ. ಈಗಾಗಲೇ ಕೆಲ ಷೇರುದಾರರಿಗೆ ಸ್ಮಾರ್ಟ್‌ಕಾರ್ಡ್ ನೀಡಿದ್ದು, ಬರುವ ದಿನಗಳಲ್ಲಿ ಎಲ್ಲ ಷೇರುದಾರರಿಗೂ ಕೊಡಲಾಗುವುದು’ ಎಂದರು.

ಅತ್ಯಾಧುನಿಕ ಸೌಕರ್ಯ ಹೊಂದಿರುವ ಆಸ್ಪತ್ರೆಯಲ್ಲಿ ಎಲ್ಲ ಬಗೆಯ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. ಹೈದರಾಬಾದ್‌ನ ತಜ್ಞ ವೈದ್ಯರ ಸೇವೆ ಪಡೆಯಲಾಗುತ್ತಿದೆ. ಆಸ್ಪತ್ರೆಯಲ್ಲಿ 860 ರೋಗಿಗಳು ಯಶಸ್ವಿನಿ ಯೋಜನೆಯ ಲಾಭ ಪಡೆದಿದ್ದಾರೆ’ ಎಂದರು.

‘ಷೇರುದಾರರಿಗೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಾಲಕ, ಬಾಲಕಿಯರ ವಸತಿ ನಿಲಯಗಳ ವಿದ್ಯಾರ್ಥಿಗಳಿಗೆ ಚಿಕಿತ್ಸೆಯಲ್ಲಿ ಶೇ 20 ರಷ್ಟು ರಿಯಾಯಿತಿ ಒದಗಿಸಲಾಗುತ್ತಿದೆ’ ಎಂದು ಹೇಳಿದರು.

ಆಸ್ಪತ್ರೆಯ ನಿರ್ದೇಶಕರಾದ ಚಂದ್ರಕಾಂತ ಗುದಗೆ, ಡಿ.ಕೆ. ಸಿದ್ರಾಮ, ಕಾಶಪ್ಪ ಧನ್ನೂರ, ಭೀಮರಾವ್ ಬಿ. ಪಾಟೀಲ, ವಿಜಯಕುಮಾರ ಕೋಟೆ, ವಿಜಯಕುಮಾರ ಪಾಟೀಲ ಗಾದಗಿ, ಶಕುಂತಲಾ ಬೆಲ್ದಾಳೆ, ಆಕಾಶ ಪಾಟೀಲ ಅಯಾಸಪುರ, ವಿಜಯಲಕ್ಷ್ಮಿ ಹೂಗಾರ, ರಾಮರಾವ್ ವರವಟ್ಟಿ, ರಾಮದಾಸ ತುಳಸಿರಾಮ, ಡಾ. ರಜನೀಶ ವಾಲಿ, ಸೈಯದ್ ಖಿಜರುಲ್ಲಾ ಹುಸೇನ್, ಸಂತೋಷ ತಾಳಂಪಳ್ಳಿ, ಜಯಕುಮಾರ ಕಾಂಗೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣಾರೆಡ್ಡಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !