ಆರು ಪ್ರಕರಣಗಳಲ್ಲಿ ₹ 60 ಲಕ್ಷ ಮೌಲ್ಯದ ಅಕ್ಕಿ ವಶ

7
ಎರಡು ಗೋದಾಮುಗಳಲ್ಲಿ ಮುಂದುವರಿದ ಪರಿಶೀಲನೆ

ಆರು ಪ್ರಕರಣಗಳಲ್ಲಿ ₹ 60 ಲಕ್ಷ ಮೌಲ್ಯದ ಅಕ್ಕಿ ವಶ

Published:
Updated:
Deccan Herald

ಬೀದರ್‌: ಇಪ್ಪತ್ತು ದಿನಗಳ ಅವಧಿಯಲ್ಲಿ ಹುಮನಾಬಾದ್‌ ಹಾಗೂ ಬೀದರ್‌ನ ಗೋದಾಮುಗಳ ಮೇಲೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಆರು ಪ್ರಕರಣಗಳನ್ನು ದಾಖಲಿಸಿಕೊಂಡು ಅಂದಾಜು ₹ 60 ಲಕ್ಷ ಮೌಲ್ಯದ ಅಕ್ಕಿ ವಶಪಡಿಸಿಕೊಂಡಿದ್ದಾರೆ.

ಕೇಂದ್ರ ಸರ್ಕಾರ ಪೂರೈಕೆ ಮಾಡುವ ಮಧ್ಯಾಹ್ನದ ಬಿಸಿಯೂಟ, ಆಶ್ರಮ, ಸರ್ಕಾರಿ ವಸತಿ ನಿಲಯಗಳಿಗೆ ಪೂರೈಕೆ ಮಾಡುವ ಅಕ್ಕಿ ಇದಾಗಿದೆ. ನೆರೆಯ ಜಿಲ್ಲೆಗಳಿಂದ ಅಕ್ರಮವಾಗಿ ಅಕ್ಕಿ ತಂದು ಬೀದರ್‌ ಹಾಗೂ ಹುಮನಾಬಾದ್‌ನ ಖಾಸಗಿ ಗೋದಾಮುಗಳಲ್ಲಿ ದಾಸ್ತಾನು ಮಾಡಿ ಇಲ್ಲಿಂದ ಮಹಾರಾಷ್ಟ್ರ ಹಾಗೂ ಗುಜರಾತ್‌ಗೆ ಸಾಗಣೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಜಿಲ್ಲೆಯ ಆರು ಗೋದಾಮುಗಳಲ್ಲಿ ಒಂದೇ ಬಗೆಯ ಅಕ್ಕಿಗಳು ಇವೆ. ಅಕ್ರಮವಾಗಿ ಸಂಗ್ರಹಿಸಿದ ಸರ್ಕಾರದ ಅಕ್ಕಿಯನ್ನು ಪಾಲಿಶ್‌ ಮಾಡಿ ಬೇರೆ ಬೇರೆ ಬ್ರಾಂಡ್‌ಗಳಲ್ಲಿ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಜಾಲ ಸಕ್ರಿಯವಾಗಿದೆ. ಹುಮನಾಬಾದ್‌ನಲ್ಲಿ ಪತ್ತೆಯಾದ ಒಂದು ಸಾವಿರ ಖಾಲಿ ಚೀಲಗಳು ಹಾಗೂ ಹೊಲಿಗೆ ಯಂತ್ರಗಳು ಇದಕ್ಕೆ ಪುಷ್ಟಿ ನೀಡಿವೆ.

‘ಅಕ್ರಮ ಅಕ್ಕಿಯ ಜತೆಯಲ್ಲಿ ಗೋಧಿ, ತೊಗರಿ ಬೇಳೆ, ರವೆ ಹಾಗೂ ಹಾಲಿನ ಪಾಕೆಟ್‌ಗಳನ್ನು ಸಹ ಗೋದಾಮುಗಳಲ್ಲಿ ಸಂಗ್ರಹಿಸಲಾಗಿದೆ. ಅಕ್ರಮ ಚಟುವಟಿಕೆಯಲ್ಲಿ ದೊಡ್ಡ ಜಾಲವೇ ಇದೆ. ಕಲಬುರ್ಗಿ ಹಾಗೂ ಯಾದಗಿರಿ ಜಿಲ್ಲೆಯಿಂದಲೇ ಅತಿ ಹೆಚ್ಚು ಅಕ್ಕಿಯನ್ನು ಅಕ್ರಮ ಸಾಗಣೆ ಮಾಡುತ್ತಿರುವುದು ತನಿಖೆಯ ವೇಳೆ ತಿಳಿದು ಬಂದಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಶ್ರೀಧರ್‌ ತಿಳಿಸಿದರು.

‘ಬೀದರ್‌ನ ಎರಡು ಖಾಸಗಿ ಗೋದಾಮುಗಳಲ್ಲಿ ಅಂದಾಜು ₹ 20 ಲಕ್ಷ ಮೌಲ್ಯದ ಅಕ್ಕಿ ಇರಬಹುದು. ಆಹಾರ ಇಲಾಖೆ ಹಾಗೂ ಪೊಲೀಸ್‌ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಭಾನುವಾರ ನಿಖರ ಮಾಹಿತಿ ಲಭ್ಯವಾಗಲಿದೆ’ ಎಂದು ಹೇಳಿದರು.

ಅಕ್ಟೋಬರ್ 4 ರಂದು ಹುಮನಾಬಾದ್‌ ಪಟ್ಟಣದ ಎಪಿಎಂಸಿ ಗೋದಾಮೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ಅಂದಾಜು ₹ 6.42 ಲಕ್ಷ ಮೌಲ್ಯದ 305 ಕ್ವಿಂಟಲ್‌ ಅಕ್ಕಿ, ಅ.5 ರಂದು ₹ 7.32 ಲಕ್ಷ ಮೌಲ್ಯದ 293 ಕ್ವಿಂಟಲ್‌ ಅಕ್ಕಿ, ₹ 34 ಸಾವಿರ ಮೌಲ್ಯದ 17.5 ಕ್ವಿಂಟಲ್‌ ಗೋಧಿ, ₹ 12 ಸಾವಿರ ಮೌಲ್ಯದ ಹಾಲಿನ ಪೌಡರ್ ಪಾಕೆಟ್‌ಗಳು ಪತ್ತೆಯಾಗಿವೆ.

ಸೆಪ್ಟೆಂಬರ್ 30 ರಂದು ಚಿಟಗುಪ್ಪದ ಎಪಿಎಂಸಿ ಯಾರ್ಡ್‌ನಲ್ಲಿರುವ ಮಧುಕರ ವೀರಶೆಟ್ಟೆಪ್ಪ ಅವರ ಗೋದಾಮಿನಲ್ಲಿ ₹ 3.47 ಲಕ್ಷ ಮೌಲ್ಯದ 136 ಕ್ವಿಂಟಲ್‌ ಅಕ್ಕಿ, ₹ 2.32 ಲಕ್ಷ ಮೌಲ್ಯದ 105 ಕ್ವಿಂಟಲ್‌ ಗೋಧಿ, ₹ 32 ಸಾವಿರ ಮೌಲ್ಯದ ₹ 6.5 ಕ್ವಿಂಟಲ್‌ ತೊಗರಿ, ₹ 40 ಸಾವಿರ ಮೌಲ್ಯದ 4 ಕ್ವಿಂಟಲ್‌ ಹಾಲಿನ ಪೌಡರ್ ಪಾಕೆಟ್‌, ಮೂರು ಹೊಲಿಗೆಯಂತ್ರ ಹಾಗೂ ಬುಲೆರೊ ವಶಪಡಿಸಿಕೊಂಡಿದ್ದಾರೆ. ಸೆ.14 ರಂದು ಹುಮನಾಬಾದ್‌ ತಾಲ್ಲೂಕಿನ ಗಡಂವತಿ ಫಾರ್ಮಹೌಸ್‌ನಲ್ಲಿ ಇಡಲಾಗಿದ್ದ ₹ 1.50 ಲಕ್ಷ ಮೌಲ್ಯದ 11 ಕ್ವಿಂಟಲ್‌ ಅಕ್ಕಿ ಹಾಗೂ ₹ 9 ಸಾವಿರ ಮೌಲ್ಯದ 75 ಕೆಜಿ ಹಾಲಿನ ಪಾಕೆಟ್‌ಗಳು ದೊರೆತಿವೆ.

‘ಅಕ್ರಮ ವ್ಯವಹಾರ ನಡೆಸುತ್ತಿರುವವರು ಸರ್ಕಾರದ ವಿವಿಧ ಯೋಜನೆಗಳಿಗೆ ಪೂರೈಸುವ ಅಕ್ಕಿಯ ಜತೆಗೆ ಹಾಲಿನ ಪೌಡರ್‌ ಪಾಕೆಟ್‌ ಹಾಗೂ ತೊಗರಿ ಬೇಳೆ ಮಾರಾಟ ಮಾಡಿರುವ ಸಾಧ್ಯತೆ ಇದೆ. ಪೊಲೀಸ್‌ ತನಿಖೆಯ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ’ ಎಂದು ಜಿಲ್ಲಾಧಿಕಾರಿ ಎಚ್‌.ಆರ್. ಮಹಾದೇವ ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !