ಸೋಮವಾರ, ಜುಲೈ 4, 2022
25 °C
ಕಂದಾಯ ಸಚಿವ ಆರ್.ಅಶೋಕ ಘೋಷಣೆ

ವಡಗಾಂವ(ಡಿ) ಗ್ರಾಮದ ಅಭಿವೃದ್ಧಿಗೆ ₹ 1 ಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ವಡಗಾಂವ(ಡಿ) ಗ್ರಾಮದ ಅಭಿವೃದ್ಧಿಗೆ ಅನುಕೂಲವಾಗುವಂತೆ ಕಂದಾಯ ಇಲಾಖೆಯಿಂದ ₹ 1 ಕೋಟಿ ಅನುದಾನ ಒದಗಿಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ ಘೋಷಣೆ ಮಾಡಿದರು.

ಔರಾದ್ ತಾಲ್ಲೂಕಿನ ವಡಗಾಂವ(ಡಿ) ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ, ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮಸಭೆಯಲ್ಲಿನ ಬೇಡಿಕೆ ಹಾಗೂ ಪಂಚಾಯಿತಿ ಮೂಲಕ ಬಂದ ಪ್ರಸ್ತಾವಗಳಿಗೆ ಅನುಮೋದನೆ ಕೊಡಲಾಗುವುದು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ಅಂದರೆ ಅತಿಥಿ ಗೃಹದಲ್ಲಿ ಅಥವಾ ಯಾರದೋ ಮನೆಯಲ್ಲಿ ಮಲಗುವುದಲ್ಲ. ಜನರ ಕಷ್ಟ ಗೊತ್ತಾಗಬೇಕು. ಅದಕ್ಕೆಂದೇ ಜಿಲ್ಲಾಧಿಕಾರಿ ಶಾಲೆಯಲ್ಲೇ ಮಲಗಬೇಕು ಎಂದು ಸೂಚಿಸಲಾಗಿದೆ. ಅಧಿಕಾರಿಗಳಿಗೆ ಹೊಸ ಅನುಭವ ದೊರೆಯಲಿದೆ ಎಂದರು.

ಜಮೀನು ದಾಖಲೆ ಪಡೆಯಲು ಜನ 70 ವರ್ಷ ತಹಶೀಲ್ದಾರ್ ಕಚೇರಿಗೆ ಅಲೆದಾಡಿದ್ದಾರೆ. ಈಗ ಅಧಿಕಾರಿಗಳೇ ಮನೆ ಬಾಗಲಿಗೆ ಬಂದು ಸೇವೆ ಕೊಡುವ ವ್ಯವಸ್ಥೆ ಮಾಡಲಾಗಿದೆ. ನಾನು ಗ್ರಾಮ ವಾಸ್ತವ್ಯ ಮಾಡುತ್ತಿರುವ ಏಳನೇ ಗ್ರಾಮ ಇದಾಗಿದೆ. ಇದರಿಂದಾಗಿ 44 ಸಾವಿರ ಫಲಾನುಭವಿಗಳಿಗೆ ಹಕ್ಕು ಪತ್ರ ಸಿಕ್ಕಿದೆ. 18,600 ಪಿಂಚಣಿ, 4,188 ಪಹಣಿ, 1,785 ಪಡಿತರ ಚೀಟಿ ಹಾಗೂ 5,098 ಆಧಾರ್ ಕಾರ್ಡ್ ತಿದ್ದುಪಡಿ ಮಾಡಲಾಗಿದೆ ಎಂದರು.
ಲಂಬಾಣಿ ತಾಂಡಾ, ಕುರುಬರ ಹಟ್ಟಿಗಳನ್ನು ಗ್ರಾಮಗಳನ್ನಾಗಿ ಮಾಡಿರಲಿಲ್ಲ. 800 ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲಾಗಿದೆ. ಇನಾಮ್ ಕಾಯ್ದೆ ರದ್ದು ಮಾಡಲಾಗಿದೆ. ಅರ್ಜಿ ಸಲ್ಲಿಸಿದವರಿಗೆ ಕಡತಗಳನ್ನು ಪರಿಶೀಲಿಸಿ ಜಮೀನು ಹಕ್ಕುಪತ್ರ ಕೊಡಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ 50 ಸಾವಿರ ಕಂದಾಯ ದಾಖಲೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲಾಗಿದೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಲಾಗಿದೆ ಎಂದರು.

ರಾಜ್ಯದ 18 ಲಕ್ಷ ರೈತರಿಗೆ ₹ 130 ಕೋಟಿ ಬೆಳೆ ಪರಿಹಾರ ಕೊಡಲಾಗಿದೆ. ವಿಧವೆಯರು ಮಾಸಾಶನಕ್ಕೆ ಎರಡು- ಮೂರು ವರ್ಷ ಅಲೆಯಬೇಕಾಗಿತ್ತು. ಆದರೆ, ಮೂರು ದಿನಗಳಲ್ಲೇ ವಿಧವೆಯರ ಮನೆ ಬಾಗಿಲಿಗೆ ಮಾಸಾಶನ ಆದೇಶ ಪತ್ರ ಬರುವಂತೆ ಮಾಡಲಾಗಿದೆ ಎಂದು ತಿಳಿಸಿದರು.
ಆ್ಯಸಿಡ್ ದಾಳಿಗೆ ಒಳಗಾದ ಮಹಿಳೆಯರಿಗೆ ಪ್ರತಿ ತಿಂಗಳು ₹ 10 ಸಾವಿರ ಬದುಕಿರುವ ವರೆಗೂ ಕೊಡಲಾಗುವುದು. ಇದಲ್ಲದೇ
ಸಂತ್ರಸ್ತರಿಗೆ ತ್ವರಿತವಾಗಿ ನಿವೇಶನ ಅಥವಾ ಮನೆ ಮಂಜೂರು ಮಾಡಬೇಕು ಎಂದು ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಬಿಜೆಪಿ ಸರ್ಕಾರ ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದೆ. ನಾನು ಚುನಾವಣಾ ಪ್ರಚಾರಕ್ಕೆ ಬಂದಿಲ್ಲ. ಸರ್ಕಾರ ಜನರಿಗಾಗಿ ಜಾರಿಗೆ ತಂದಿರುವ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡಲು ಇಲ್ಲಿದೆ ಬಂದಿದ್ದೇನೆ ಎಂದು ತಿಳಿಸಿದರು.

ಅಧಿಕಾರಿಗಳು ಸಚಿವರು ಇಲ್ಲಿಗೆ ಬಂದಿದ್ದಾರೆ ಎಂದು ಕೆಲಸ ಮಾಡಿದರೆ ಸಾಲದು. ಸಚಿವರು ಇಲ್ಲದ ವೇಳೆಯಲ್ಲೂ ಮಾತೃಹೃದಯದಿಂದ ಜನರಿಗೆ ಸೇವೆ ಒದಗಿಸಬೇಕು. ಈ ಮೂಲಕ ಜನರ ಪ್ರೀತಿ ಉಳಿಸಿಕೊಳ್ಳಬೇಕು ಎಂದು ಸೂಚಿಸಿದರು.

ಶನಿವಾರ ಬೆಳಿಗ್ಗೆ ಲಂಬಾಣಿಗಳ ಮನೆಯಲ್ಲೇ ತಿಂಡಿ ತಿನ್ನುವೆ. ಹೋಟೆಲ್‍ನಿಂದ ತರಿಸಿ ತಿನ್ನುತ್ತಿಲ್ಲ. ಅವರ ಮನೆಯಲ್ಲಿ ಏನು ಸಿದ್ಧ ಪಡಿಸಿರುತ್ತಾರೆಯೋ ಅದನ್ನೇ ಸೇವಿಸಲಾಗುವುದು ಎಂದು ತಿಳಿಸಿದರು.

ಪಶು ಸಂಗೋಪನೆ ಸಚಿವ ಪ್ರಭು ಚವಾಣ್ ಮಾತನಾಡಿ, ಬೀದರ್–ಬೆಂಗಳೂರು ಮಧ್ಯೆ ಈಗಾಗಲೇ ರೈಲುಗಳು ಸಂಚರಿಸುತ್ತಿವೆ. ಜೂನ್ 15 ರಿಂದ ಬೀದರ್– ಬೆಂಗಳೂರು ಮಧ್ಯೆ ವಿಮಾನ ಸಂಚಾರವೂ ಆರಂಭವಾಗಲಿದೆ. ಪ್ರಯಾಣಿಕರ ಕೊರತೆಯಿಂದ ನಿಂತು ಹೋಗಿದ್ದ ವಿಮಾನ ಸೇವೆ ಮತ್ತೆ ಶುರುವಾಗಲಿದೆ.  ಜಿಲ್ಲೆಯ ಜನ ವಿಮಾನದಲ್ಲಿ ಪ್ರಯಾಣಿಸುವ ಮೂಲಕ ಅದರ ಪೂರ್ಣ ಲಾಭ ಪಡೆಯಬೇಕು ಎಂದರು.

ಬೀದರ್–ಔರಾದ್ ರೈಲು ಮಾರ್ಗ ಮಂಜೂರಾಗಿದೆ. ಬೀದರ್–ಔರಾದ್ ಹೆದ್ದಾರಿ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಬೀದರ್ ಜಿಲ್ಲೆಗೆ ಜಲ ಜೀವನ ಮಿಷನ್‍ನಲ್ಲಿ ₹ 182 ಕೋಟಿ, ಸಿಪೆಟ್ ಮಂಜೂರಾಗಿದೆ. ಔರಾದ್–ಕಮಲನಗರ ನಡುವೆ ದ್ವಿಪಥ ರಸ್ತೆ ನಿರ್ಮಾಣಕ್ಕೆ ₹ 100 ಕೋಟಿ ಮಂಜೂರಾಗಿದೆ. ಔರಾದ್ ತಾಲ್ಲೂಕಿಗೆ ಅನುಕೂಲವಾಗುವಂತೆ ₹ 72 ಕೋಟಿ ವೆಚ್ಚದಲ್ಲಿ ಬ್ಯಾರೇಜ್ ನಿರ್ಮಿಸಲಾಗುವುದು ಎಂದು ತಿಳಿಸಿದರು.

ಹೆಡಗಾಪುರದಲ್ಲಿ ₹ 34 ಕೋಟಿ ವೆಚ್ಚದಲ್ಲಿ ಜಾನುವಾರು ತಳಿ ಅಭಿವೃದ್ಧಿ ಕೇಂದ್ರ ನಿರ್ಮಿಸಲಾಗುವುದು ಎಂದು ಹೇಳಿದರು.

ಔರಾದ್ ಕ್ಷೇತ್ರದಿಂದ ಮೂರು ಬಾರಿ ಶಾಸಕನಾಗಿದ್ದೇನೆ. ಎರಡನೇ ಬಾರಿ ಸಚಿವನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಇದು, ಔರಾದ್ ಕ್ಷೇತ್ರದ ಭಾಗ್ಯವಾಗಿದೆ. ಜನರ ಸೇವೆಯೇ ನನ್ನ ಧ್ಯೇಯ. ಜನರಿಗಾಗಿ ಪ್ರಾಣ ಸಹ ಕೊಡಲು ಸಿದ್ಧ ಎಂದು ತಿಳಿಸಿದರು.

ಶಾಸಕ ಶರಣು ಸಲಗರ, ಪಂಚಾಯಿತಿ ಅಧ್ಯಕ್ಷೆ ತ್ರಿಶುಬಾಯಿ, ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ಜಹೀರಾ ನಸೀಮ್, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿμÁ್ಠಧಿಕಾರಿ ಮಹೇಶ ಮೇಘಣ್ಣವರ್, ಸೂರ್ಯಕಾಂತ ನಾಗಮಾರಪಳ್ಳಿ, ವಡಗಾಂವ(ಡಿ) ಗ್ರಾಮದ ಮುಖಂಡರಾದ ಬಸವರಾಜ ದೇಶಮುಖ, ಶರಣಬಸಪ್ಪ ದೇಶಮುಖ ಇದ್ದರು. ಚನ್ನಬಸವ ಹೇಡೆ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.