ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1 ಕೋಟಿ ಸಸಿ ನೆಡುವ ಗುರಿ: ವಿಕಾಸ ಅಕಾಡೆಮಿ ಸಂಯೋಜಕ ಬಸವರಾಜ ಪಾಟೀಲ

Last Updated 10 ಮೇ 2019, 10:10 IST
ಅಕ್ಷರ ಗಾತ್ರ

ಬೀದರ್: ‘2025ರೊಳಗೆ ಕಲ್ಯಾಣ ಕರ್ನಾಟಕವನ್ನು ಮಾದರಿ ಪ್ರದೇಶವನ್ನಾಗಿ ರೂಪಿಸುವ ದಿಸೆಯಲ್ಲಿ ಯೋಜನೆ ರೂಪಿಸಲಾಗಿದೆ. ಇದರ ಭಾಗವಾಗಿ ಒಂದುಕೋಟಿ ಸಸಿ ನೆಡುವ ಗುರಿ ಇಟ್ಟುಕೊಳ್ಳಲಾಗಿದೆ’ ಎಂದು ವಿಕಾಸ ಅಕಾಡೆಮಿ ಸಂಯೋಜಕ ಬಸವರಾಜ ಪಾಟೀಲ ಸೇಡಂ ಹೇಳಿದರು.

ನಗರದ ಹಾರೂರಗೇರಿ ಬಡಾವಣೆಯಲ್ಲಿರುವ ಮಹೇಶ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ವಿಕಾಸ ಅಕಾಡೆಮಿ ವತಿಯಿಂದ ಬೀದರ್, ಭಾಲ್ಕಿ, ಕಮಲನಗರ ಹಾಗೂ ಔರಾದ್ ತಾಲ್ಲೂಕುಗಳ ಅಕಾಡೆಮಿ ಸಂಚಾಲಕರ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು.

‘10 ಕೋಟಿ ಸಾಹಿತ್ಯ ಮಾರಾಟ, 5 ಸಾವಿರ ರೈತರನ್ನು ಸಾವಯವ ಕೃಷಿಗೆ ಪರಿವರ್ತನೆ, 10 ಲಕ್ಷ ದೇಶಿ ಗೋವುಗಳು ಸಾಕಾಣಿಕೆ, 100 ಗೋಸಂವರ್ಧನಾ ಕೇಂದ್ರಗಳನ್ನು ಸ್ಥಾಪನೆ, 5 ಲಕ್ಷ ಜನರಿಗೆ ಉದ್ಯೋಗ ಒದಗಿಸುವ ಗುರಿ ಹೊಂದಲಾಗಿದೆ’ ಎಂದು ತಿಳಿಸಿದರು.

‘ಐದು ವರ್ಷಗಳ ಹಿಂದೆ ಕಲಬುರ್ಗಿಯಲ್ಲಿ ಕಲಬುರ್ಗಿ ಕಂಪು ಕಾರ್ಯಕ್ರಮ ನಡೆಸಿ ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ಕರೆಯುವ ಮೂಲಕ 10 ವರ್ಷಗಳ ವಿವಿಧ ಯೋಜನೆಗಳನ್ನು ಸಿದ್ದಪಡಿಸಲಾಯಿತು. ಈ ಭಾಗದ 1 ಕೋಟಿ ಜನರು ಇಡಿ ದೇಶದಲ್ಲಿ ಮಾದರಿ ಎನಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಕ್ರಮ ಸಿದ್ದಪಡಿಸಲಾಗಿದೆ’ ಎಂದು ಹೇಳಿದರು.

‘2025ರ ಗುರಿ ಸಫಲವಾಗಲು ನಾವು ನಮ್ಮ ಕಾರ್ಯದ ವೇಗ ನಾಲ್ಕು ಪಟ್ಟು ಹೆಚ್ಚಿಸಬೇಕು. ನಮ್ಮ ಆದಾಯದ ಎರಡು ಪ್ರತಿಶತವನ್ನು ಈ ಭಾಗದ ಅಭಿವೃದ್ಧಿಗಾಗಿ ಖರ್ಚು ಮಾಡಬೇಕು. ಕೆಲಸದ ಅವಧಿಯೂ ಎರಡು ತಾಸು ಹೆಚ್ಚಾಗಬೇಕು. ಜೀವನ ಅತ್ಯಂತ ಸರಳವಾಗಲು 20 ಪ್ರತಿಶತ ಖರ್ಚು ವೆಚ್ಚಗಳು ಕಡಿಮೆಯಾಗಬೇಕು’ ಎಂದರು.

‘ಅಂಗವಿಕಲ ಹಾಗೂ ಬುದ್ದಿಮಾಂಧ್ಯ ಮಕ್ಕಳಿಗಾಗಿ ವಿವಿಧ ಯೋಜನೆಗಳು ರೂಪಿಸಬೇಕು. ಸಮಾಜ ಅಭಿವೃದ್ಧಿಗಾಗಿ ಸರ್ಕಾರದ ಮೇಲಿನ ಅವಂಬನೆ ನಿಲ್ಲಬೇಕು. ಪ್ರತಿ ಮನೆಯಲ್ಲಿ ಹನುಮಾನ, ತಾಯಿ ಮತ್ತು ಮಗು ಹಾಗೂ ಸರ್ದಾರ ವಲ್ಲಭಭಾಯಿ ಭಾವಚಿತ್ರ ಅಳವಡಿಸಬೇಕು. ಪ್ರತಿ ಶಾಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಮಿಂಚುವ 10 ಮಕ್ಕಳ ಭಾವಚಿತ್ರ ಹಾಕಬೇಕು. ಅದರಲ್ಲಿ ಹೆಚ್ಚು ಅಂಕ ಪಡೆದ ಕೇವಲ ಒಬ್ಬ ವಿದ್ಯಾರ್ಥಿಯ ಭಾವಚಿತ್ರ ಮಾತ್ರ ಇರಬೇಕು’ ಎಂದು ಅಭಿಪ್ರಾಯಪಟ್ಟರು.

‘2025ರ ಜನವರಿ 29ರಿಂದ ಫೆಬ್ರುವರಿ 6 ರ ವರೆಗೆ 7ನೇ ಭಾರತ ಸಂಸ್ಕೃತಿ ಉತ್ಸವ ಹಮ್ಮಿಕೊಳ್ಳಲಾಗುತ್ತಿದೆ. ಅದರಲ್ಲಿ 25 ಲಕ್ಷ ಜನರು ಸೇರುವ ನಿರಿಕ್ಷೆ ಇದೆ. ಒಂದು ಸಾವಿರ ಸಾಧಕರನ್ನು ಒಂದೇ ವೇದಿಕೆಯಲ್ಲಿ ಕುಳ್ಳಿರಿಸಿ ಅಭಿವೃದ್ಧಿಪರ ವಿಚಾರವಾಗಿ ಚರ್ಚೆ ನಡೆಯಲಿವೆ. ಈ ನಮ್ಮ ಗುರಿ ತಲುಪಲು ಈ ಜಿಲ್ಲೆಯ ಎಲ್ಲ ಸಂಚಾಲಕರು, ಮುಖಂಡರು ಕಾರ್ಯದಕ್ಷತೆ ಹೆಚ್ಚಿಸಬೇಕು’ ಎಂದು ಹೇಳಿದರು.

ಚಟ್ನಳ್ಳಿಯ ಪ್ರಗತಿಪರ ರೈತ ಮಹಾದೇವ ನಾಗೂರೆ ಮಾತನಾಡಿ, ‘ಮಕ್ಕಳು ಮಾನಸಿಕವಾಗಿ ಹಾಗೂ ದೈಹಿಕವಾಗಿ ಬಲಿಷ್ಠರಾಗಿ ಬೆಳೆಯಲು ಪ್ರತಿ ಮನೆಯಲ್ಲಿ ದೇಶಿ ಆಕಳು ಸಾಕಬೇಕು. ಜಲ, ಜಾನುವಾರು, ಜಂಗಲ್’ ಎಂಬ ಘೋಷವಾಕ್ಯ ಸಧೃಢವಾಗಬೇಕು. ವಿಜ್ಞಾನ ಎಷ್ಟೇ ಮುಂದುವರಿದರೂ ಪಂಚಭೂತ, ನವಗೃಹ ಹಾಗೂ 27 ನಕ್ಷತ್ರಗಳ ಅಧ್ಯಯನ ನಮ್ಮದಾಗಬೇಕು’ ಎಂದು ತಿಳಿಸಿದರು.

ವಿಕಾಸ ಅಕಾಡೆಮಿ ಜಿಲ್ಲಾ ಸಂಚಾಲಕ ರೇವಣಸಿದ್ದಪ್ಪ ಜಲಾದೆ ಪ್ರಾಸ್ತಾವಿಕ ಮಾತನಾಡಿ, ‘ಕಲ್ಯಾಣ ಕರ್ನಾಟಕದಲ್ಲಿ 5 ಜಿಲ್ಲೆಗಳು, 42 ತಾಲೂಕುಗಳಿವೆ. ನಮ್ಮ ಜಿಲ್ಲೆಯನ್ನು ಅಭಿವೃದ್ಧಿ ದೃಷ್ಟಿಯಿಂದ ಬೀದರ್ ಹಾಗೂ ಹುಮನಾಬಾದ್ ಹೀಗೆ ಎರಡು ವಿಭಾಗಗಳಲ್ಲಿ ವಿಂಗಡಿಸಲಾಗಿದೆ’ ಎಂದು ಹೇಳಿದರು.

‘ಒಂದು ವಿಭಾಗದಲ್ಲಿ 9 ತಾಲ್ಲೂಕುಗಳನ್ನು ಜೋಡಿಸಲಾಗಿದೆ. ಈ ವರ್ಷ ಎಸ್ಸೆಸ್ಸೆಲ್ಲಿಯಲ್ಲಿ ಜಿಲ್ಲೆಯ ಏಳು ಶಾಲೆಗಳು ಹಾಗೂ 20 ಖಾಸಗಿ ಶಾಲೆಗಳು ಸೇರಿ 27 ಶಾಲೆಗಳ ಶತ ಪ್ರತಿಶತದಷ್ಟು ಫಲಿತಾಂಶ ಪಡೆದಿವೆ. ಈ ಎಲ್ಲ ಶಾಲೆಗಳ ಮುಖ್ಯಸ್ಥರನ್ನು ಅಕಾಡೆಮಿ ವತಿಯಿಂದ ಸನ್ಮಾನಿಸಲಾಗುವುದು’ ಎಂದು ತಿಳಿಸಿದರು.

ವಿಕಾಸ ಅಕಾಡೆಮಿ ಜಿಲ್ಲಾಧ್ಯಕ್ಷ ಕರ್ನಲ್ ಶರಣಪ್ಪ ಸಿಕೆನಪೂರೆ, ಉಪಾಧ್ಯಕ್ಷರಾದ ಬಿ.ಜಿ.ಶಟಕಾರ ಹಾಗೂ ಡಾ.ಅಬ್ದುಲ ಖದೀರ್ ಇದ್ದರು.

ಬೀದರ್ ಗ್ರಾಮೀಣ ಸಂಚಾಲಕ ರವಿಂದ್ರ ಶಂಭು, ಭಾಲ್ಕಿ ಸಂಚಾಲಕ ಸುಧಾಕರ ದೇಶಪಾಂಡೆ, ಔರಾದ್ ಸಂಚಾಲಕ ಗುರುನಾಥ ವಟಗೆ, ಕಮಲನಗರ ಸಂಚಾಲಕ ಐಶವಂತರಾವ್ ಬಿರಾದಾರ, ಹಿರಿಯರಾದ ಜಿಲ್ಲಾ ಸಹ ಸಂಚಾಲಕ ಕಾಮಶೆಟ್ಟಿ ಚಿಕಬಸೆ, ಪ್ರಮುಖರಾದ ರಾಜಶೇಖರ ನಾಗಮೂರ್ತಿ, ಸಂಗಮೇಶ ನಾಸಿಗಾರ, ಬಸವರಾಜ ಭರಶೆಟ್ಟಿ, ಪ್ರೊ.ದೇವೇಂದ್ರ ಕಮಲ್, ಎಸ್.ಬಿ ಕುಚಬಾಳ, ಶಿವಯ್ಯ ಸ್ವಾಮಿ, ರಾಜಕುಮಾರ ಹೆಬ್ಬಾಳೆ, ಸಿದ್ದು ಫುಲಾರಿ, ಮಲ್ಲಮ್ಮ ಸಂತಾಜಿ ಭಾಗವಹಿಸಿದ್ದರು. ಧನರಾಜ ರೆಡ್ಡಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT