ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಅಮರನಾಥ ಯಾತ್ರೆಗೆ ತೆರಳಿದ ಜಿಲ್ಲೆಯ 10 ಜನ ಸುರಕ್ಷಿತ

Last Updated 9 ಜುಲೈ 2022, 14:38 IST
ಅಕ್ಷರ ಗಾತ್ರ

ಬೀದರ್‌/ಕಮಲನಗರ: ಹಿಮಾಲಯದ ಪ್ರಸಿದ್ಧ ಯಾತ್ರಾ ಸ್ಥಳ ಅಮರನಾಥ ದರ್ಶನಕ್ಕೆ ತೆರಳಿದ್ದ ಹತ್ತು ಜನರಿದ್ದ ಬೀದರ್‌ ಜಿಲ್ಲೆಯ ತಂಡ ಶನಿವಾರ ಸುರಕ್ಷಿತವಾಗಿ ದಕ್ಷಿಣ ಕಾಶ್ಮೀರಕ್ಕೆ ಮರಳಿದೆ.

ಕಮಲನಗರ ತಾಲ್ಲೂಕಿನ ಮದನೂರ ಗ್ರಾಮದ ವೈಜಿನಾಥ ದಾಬಕೆ, ರಾಹುಲ್ ಪೀಚರಟೆ, ಬಾಲಾಜಿ ಪೀಚರಟೆ, ಅಶೋಕ ಮಂಗಳೂರೆ, ಮನೋಜ್ ಬಳತೆ, ರಾಹುಲ್, ಬಾಳು ನರಸಿಂಗ್, ಭಾಲ್ಕಿಯ ಸಂಗಮೇಶ, ರಾಹುಲ್‌ ದಿಗಂಬರ್, ಬಸವಕಲ್ಯಾಣದ ಬಾಲಾಜಿ ಪಾಟೀಲ ಹಾಗೂ ಚೆನ್ನೈ ಮೋಹನ್ ಸುರಕ್ಷಿತ ಸ್ಥಳಕ್ಕೆ ತಲುಪಿದ್ದಾರೆ.

ಯುವಕರು ಜುಲೈ 2ರಂದು ಬೀದರ್ ನಿಂದ ಹೊರಟು 6ರಂದು ಅಮರನಾಥದ ಪಾಲಗಾಮ ತಲುಪಿದ್ದರು. ಜುಲೈ 7ರಂದು ಪಾಲಗಾಮದಿಂದ ಅಮರನಾಥ ಗುಹೆ ಕಡೆಗೆ ಪಾದಯಾತ್ರೆಯ ಮೂಲಕ ಹೊರಟು 8ರಂದು ಸಂಜೆ 4 ಗಂಟೆಗೆ ದರ್ಶನ ಪಡೆದು ಬರುವಾಗ ಅನಾಹುತ ಸಂಭವಿಸಿದೆ.

ಜುಲೈ 8ರಂದು ಸಂಜೆ ಮರಳಿ ಬರುತ್ತಿದ್ದಾಗ ಧಾರಾಕಾರ ಮಳೆ ಸುರಿಯಲು ಆರಂಭಿಸಿ ಮಣ್ಣು ಹಾಗೂ ಕಲ್ಲು ಬಂಡೆಗಳು ಉರುಳಿ ಬಿದ್ದವು. ಕೆಲವೇ ನಿಮಿಷಗಳಲ್ಲಿ ಕೆಲ ಭಕ್ತರು ನೀರಿನಲ್ಲಿ ಕೊಚ್ಚಿಕೊಂಡು ಹೋದರು. ಆತಂಕದಲ್ಲಿ ರಾತ್ರಿ 18 ಕಿ.ಮೀ ಕ್ರಮಿಸಿ ಬೆಳಗಿನ ಜಾವ 2 ಗಂಟೆಗೆ ಬಾಲಟಾಲ್‌ ತಲುಪಿ ಜೀವ ಉಳಿಸಿಕೊಂಡಿದ್ದಾರೆ.

ಕಮಲನಗರ ತಾಲ್ಲೂಕಿನ ಮದನೂರಿನ 6 ಯುವಕರು, ಭಾಲ್ಕಿ ತಾಲ್ಲೂಕಿನ ಇಬ್ಬರು, ಬಸವಕಲ್ಯಾಣ ಹಾಗೂ ಚೆನೈ ಮೂಲದ ಒಬ್ಬರು ಸೇರಿ 10 ಯುವಕರು ತಂಡ ರಚಿಸಿಕೊಂಡು ಅಮರನಾಥ ಯಾತ್ರೆಗೆ ತೆರಳಿದ್ದರು. ಭಾರೀ ಮಳೆಯಿಂದಾಗಿ ಐವರಿಗೆ ಮಾತ್ರ ದರ್ಶನ ಪಡೆಯಲು ಸಾಧ್ಯವಾಯಿತು. ಇನ್ನುಳಿದ ಐವರು ಅರ್ಧ ದಾರಿಯಲ್ಲೇ ಮರಳಬೇಕಾಯಿತು.

‘ನಾವು ನಡೆದುಕೊಂಡು ಮೊದಲೇ ಮುಂದೆ ಬಂದ ಕಾರಣ ದರ್ಶನ ಸಾಧ್ಯವಾಯಿತು. ಮಳೆಗೆ ಗುಡ್ಡ ಕುಸಿಯಲು ಆರಂಭಿಸಿದ್ದರಿಂದ ರಕ್ಷಣಾ ಪಡೆಯವರು ಮರಳಿ ಕಳಿಸಿದರು. ಹೀಗಾಗಿ ಕೆಲವರಿಗೆ ದರ್ಶನ ಸಾಧ್ಯವಾಗಲಿಲ್ಲ. ಆದರೆ, ಸುರಕ್ಷಿತವಾಗಿ ಬಂದಿದ್ದೇವೆ’ ಎಂದು ಅಶೋಕ ಶಿವರಾಜ್ ಮಂಗಳೂರೆ ತಿಳಿಸಿದರು.

‘ಕಣ್ಣೆದುರೇ ಗುಡ್ಡ ಕುಸಿಯುವುದನ್ನು ಕಂಡು ಆತಂಕಕ್ಕೆ ಒಳಗಾಗಿದ್ದೇವು. ದೇವರ ಕೃಪೆಯಿಂದ ನಮಗೆ ಏನೂ ಆಗಿಲ್ಲ. ಕುಟುಂಬದ ಸದಸ್ಯರಿಗೂ ಕರೆ ಮಾಡಿ ತಿಳಿಸಿದ್ದೇವೆ. ಸುರಕ್ಷಿತವಾಗಿ ಊರಿಗೆ ಮರಳಲಿದ್ದೇವೆ’ ಎಂದರು.

‘ನಾನು ಹೈದರಾಬಾದ್‌ನಲ್ಲಿ ಎಲೆಕ್ಟ್ರಿಷಿಯನ್‌ ಆಗಿದ್ದೇನೆ. ಉಳಿದವರು ಬೀದರ್‌ ಜಿಲ್ಲೆಯಲ್ಲಿ ಕೆಲಸ ಮಾಡಿಕೊಂಡು ಇದ್ದಾರೆ. ಸದ್ಯ ದಕ್ಷಿಣ ಕಾಶ್ಮೀರದಲ್ಲಿ ಸುರಕ್ಷಿತವಾಗಿ ಇದ್ದೇವೆ. ವೈಷ್ಣೋದೇವಿ ದರ್ಶನ ಮಾಡಿಕೊಂಡು ದೆಹಲಿ, ಹೈದರಾಬಾದ್‌ ಮಾರ್ಗವಾಗಿ ರೈಲಿನಲ್ಲಿ (ಜುಲೈ 10) ಭಾನುವಾರದ ಹೊತ್ತಿಗೆ ಊರು ತಲುಪಲಿದ್ದೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT