ಶನಿವಾರ, ಫೆಬ್ರವರಿ 27, 2021
31 °C
‘ಶತಮಾನದ ಸಂತ ಶಿವಕುಮಾರ ಸ್ವಾಮೀಜಿ’ ವಿಚಾರ ಸಂಕಿರಣ

ಸಿದ್ಧಗಂಗಾ ಮಠದಲ್ಲಿ 123 ಜಾತಿ ಮಕ್ಕಳು: ಸಾಹಿತಿ ಶ್ರೀದೇವಿ ಹೂಗಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೀದರ್: ‘ತುಮಕೂರಿನ ಸಿದ್ಧಗಂಗಾ ಮಠ ಜಾತ್ಯತೀತ ಮಠವಾಗಿದೆ. 123 ಜಾತಿಗಳ ಮಕ್ಕಳು ಮಠದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ’ ಎಂದು ಸಾಹಿತಿ ಶ್ರೀದೇವಿ ಹೂಗಾರ ಹೇಳಿದರು.

ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳು ಮತ್ತು ಹಿತೈಶಿಗಳ ಸಂಘ ಹಾಗೂ ಶರಣ ಸಂಸ್ಕೃತಿ ಪ್ರಸಾರ ವೇದಿಕೆಯ ಆಶ್ರಯದಲ್ಲಿ ನೌಬಾದ್‌ನ ಬಸವ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಶತಮಾನದ ಸಂತ ಶಿವಕುಮಾರ ಸ್ವಾಮೀಜಿ’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘700 ವರ್ಷಗಳ ಇತಿಹಾಸ ಹೊಂದಿರುವ ಮಠವು ತ್ರಿವಿಧ ದಾಸೋಹಕ್ಕೆ ಹೆಸರಾಗಿದೆ. ಮಠದಲ್ಲಿ 10 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಇದ್ದಾರೆ. ನಿತ್ಯ 3 ಸಾವಿರ ಪಾಲಕರು ಭೇಟಿ ಕೊಡುತ್ತಾರೆ. ಪ್ರತಿದಿನ ಸುಮಾರು 13 ಸಾವಿರ ಜನರಿಗೆ ಅನ್ನ ದಾಸೋಹ ನಡೆಯುತ್ತದೆ’ ಎಂದು ತಿಳಿಸಿದರು.

‘ಶಿವಕುಮಾರ ಸ್ವಾಮೀಜಿ ಅವರು ಅಸಂಖ್ಯಾತ ಬಡ ಹಾಗೂ ನಿರ್ಗತಿಕ ಮಕ್ಕಳಿಗೆ ಉಚಿತ ಶಿಕ್ಷಣ ಕೊಡುವ ಮೂಲಕ ಅವರ ಬಾಳು ಹಸನಾಗಿಸಿದ್ದಾರೆ. ಮಠದಲ್ಲಿ ಓದಿದ ವಿದ್ಯಾರ್ಥಿಗಳು ಇಂದು ವಿವಿಧ ಉನ್ನತ ಹುದ್ದೆಗಳಲ್ಲಿ ಇದ್ದಾರೆ’ ಎಂದು ಹೇಳಿದರು.

‘ಸ್ವಾಮೀಜಿ ಅವರ ಸಾಮಾಜಿಕ ಕಳಕಳಿ ಅನುಕರಣೀಯವಾಗಿದೆ. ಅವರ ಆದರ್ಶ ಎಲ್ಲರಿಗೂ ಮಾದರಿಯಾಗಿದೆ’ ಎಂದರು.

‘ಸಿದ್ಧಗಂಗಾ ಮಠ ಬಡ ಮತ್ತು ಅನಾಥ ಮಕ್ಕಳ ಆಶ್ರಯ ತಾಣವಾಗಿದೆ’ ಎಂದು ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವಕುಮಾರ ಪಾಟೀಲ ತೇಗಂಪುರ ಹೇಳಿದರು.

‘ಸರ್ಕಾರ ಮಾಡಬೇಕಾದ ಕಾರ್ಯವನ್ನು ಶಿವಕುಮಾರ ಸ್ವಾಮೀಜಿ ಮಾಡುತ್ತಿದ್ದಾರೆ. ಭಾರತ ರತ್ನ ಪ್ರಶಸ್ತಿಗೆ ಎಲ್ಲ ರೀತಿಯಿಂದಲೂ ಅರ್ಹರಾಗಿದ್ದಾರೆ. ಅವರಿಗೆ ಪ್ರಶಸ್ತಿ ನೀಡಿದರೆ ಭಾರತರತ್ನದ ಗೌರವವೇ ಹೆಚ್ಚಾಗಲಿದೆ. ಕೇಂದ್ರ ಸರ್ಕಾರ ಅವರ ಜೀವಿತಾವಧಿಯಲ್ಲೇ ಪ್ರಶಸ್ತಿ ನೀಡಿದರೆ ಅದಕ್ಕೆ ಅರ್ಥ ಬರುತ್ತದೆ’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳು ಇದ್ದಾರೆ. ಎಲ್ಲರೂ ಒಂದುಗೂಡಿ ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಸಂಘದ ಜಿಲ್ಲಾ ಘಟಕ ಅಸ್ತಿತ್ವಕ್ಕೆ ತರಲಾಗಿದೆ. ಶಿವಕುಮಾರ ಸ್ವಾಮೀಜಿ ಅವರ ಆಶಯದಂತೆ ಎರಡು ವರ್ಷಗಳಿಂದ ವಿವಿಧ ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ’ ಎಂದು ಹೇಳಿದರು.

‘ಸಿದ್ಧಗಂಗಾ ಮಠ ಸಮಾಜೋಧಾರ್ಮಿಕ ಕಾರ್ಯಗಳ ಮೂಲಕ ಇಡೀ ದೇಶದ ಗಮನ ಸೆಳೆದಿದೆ. ಒಂದು ಮಠ ಮನಸ್ಸು ಮಾಡಿದರೆ ಸಮಾಜದಲ್ಲಿ ಏನೆಲ್ಲ ಬದಲಾವಣೆ ತರಬಹುದು ಎನ್ನುವುದಕ್ಕೆ ಉದಾಹರಣೆಯಾಗಿದೆ’ ಎಂದು ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ದೇವೇಂದ್ರ ಕರಂಜೆ ತಿಳಿಸಿದರು.

‘ಸಮಾಜದ ಉದ್ಧಾರಕ್ಕಾಗಿಯೇ ಬದುಕು ಸವೆಸುತ್ತಿರುವ ಶಿವಕುಮಾರ ಸ್ವಾಮೀಜಿ ಅವರಿಗೆ ಯಾರೂ ಸರಿಸಾಟಿ ಇಲ್ಲ. ಅವರಿಗೆ ಅವರೇ ಸಾಟಿ ಆಗಿದ್ದಾರೆ’ ಎಂದರು.

ಪತ್ರಕರ್ತ ನಾಗೇಶ ಪ್ರಭಾ ಕಾರ್ಯಕ್ರಮ ಉದ್ಘಾಟಿಸಿದರು. ಶಿಕ್ಷಕ ಕಲ್ಯಾಣರಾವ್ ಚಳಕಾಪುರೆ ಅವರನ್ನು ಸನ್ಮಾನಿಸಲಾಯಿತು.

ಶರಣ ಸಂಸ್ಕೃತಿ ಪ್ರಸಾರ ವೇದಿಕೆಯ ಅಧ್ಯಕ್ಷ ಸಿದ್ರಾಮಪ್ಪ ಕಪಲಾಪುರ ಸಾನ್ನಿಧ್ಯ ವಹಿಸಿದ್ದರು. ನಿವೃತ್ತ ಶಿಕ್ಷಕ ವಿಠ್ಠಲರೆಡ್ಡಿ ಉಪಸ್ಥಿತರಿದ್ದರು. ದೇವೇಂದ್ರ ಕೊಳಾರ ನಿರೂಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು