ಸೋಮವಾರ, ನವೆಂಬರ್ 30, 2020
21 °C
ಭಾಲ್ಕಿ ವಸತಿ ಯೋಜನೆ ಅವ್ಯವಹಾರ: ಇಂದು ಬಿಜೆಪಿ ಮೆರವಣಿಗೆ

15 ಸಾವಿರ ಜನ ಭಾಗಿ: ಸಂಸದ ಖೂಬಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ವಸತಿ ಯೋಜನೆ ಅವ್ಯವಹಾರದಿಂದ ಭಾಲ್ಕಿ ತಾಲ್ಲೂಕಿನ ಜನರಿಗೆ ಆಗಿರುವ ಅನ್ಯಾಯ ಸರಿಪಡಿಸಲು ಒತ್ತಾಯಿಸಿ ನಗರದಲ್ಲಿ ಗುರುವಾರ (ನ.5) ನಡೆಯಲಿರುವ ಮೆರವಣಿಗೆಯಲ್ಲಿ 15 ಸಾವಿರ ಜನ ಭಾಗವಹಿಸಲಿದ್ದಾರೆ ಎಂದು ಸಂಸದ ಭಗವಂತ ಖೂಬಾ ತಿಳಿಸಿದ್ದಾರೆ.

ಬಿಜೆಪಿ ಕಾರ್ಯಕರ್ತರು ಬೆಳಿಗ್ಗೆ 10.30ಕ್ಕೆ ಗಣೇಶ ಮೈದಾನದಲ್ಲಿ ಸೇರಲಿದ್ದಾರೆ. ಬಳಿಕ ಅಲ್ಲಿಂದ ಕೊರೊನಾ ನಿಯಮಗಳ ಪಾಲನೆಯೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.

ಪೊಲೀಸರು ಜನರೊಂದಿಗೆ ಸಭ್ಯತೆಯಿಂದ ವರ್ತಿಸಬೇಕು. ಪಕ್ಷದ ಕಾರ್ಯಕರ್ತರು ಕೂಡ ಸೌಜನ್ಯದಿಂದ ನಡೆದುಕೊಳ್ಳಬೇಕು. ಯಾವುದೇ ಆವೇಶಕ್ಕೆ ಒಳಗಾಗಬಾರದು. ಶಾಂತಿಯುತವಾಗಿ ಬಂದು ಮನವಿ ಸಲ್ಲಿಕೆ ಮುಗಿಸಿಕೊಂಡು ಮರಳಬೇಕು ಎಂದು ಮನವಿ ಮಾಡಿದ್ದಾರೆ.

ವಸತಿ ಯೋಜನೆಯಲ್ಲಿ ಭಾಲ್ಕಿ ತಾಲ್ಲೂಕಿನಲ್ಲಿ ಅತಿದೊಡ್ಡ ಅವ್ಯವಹಾರ ನಡೆದಿದೆ. ಇದರಿಂದ ವಸತಿ ರಹಿತ ಅದೆಷ್ಟೋ ಬಡವರು ಕಂಗಾಲಾಗಿದ್ದಾರೆ. 2018 ರ ಚುನಾವಣೆಯಲ್ಲಿ ಗೆಲ್ಲಲೇಬೇಕೆಂಬ ಉದ್ದೇಶದಿಂದ ಭಾಲ್ಕಿ ಶಾಸಕರು ವಸತಿ ಯೋಜನೆಯಡಿ ಸರ್ಕಾರ ಮಂಜೂರು ಮಾಡಿದ್ದಕ್ಕಿಂತ ಹೆಚ್ಚು ಮನೆ ಹಂಚಿಕೆ ಮಾಡಿದ್ದಾರೆ ಎಂದು ಆಪಾದಿಸಿದ್ದಾರೆ.

ಭಾವಚಿತ್ರ ಹಾಗೂ ಸಹಿ ಉಳ್ಳ ಮನೆ ಮಂಜೂರಾತಿ ಹಾಗೂ ಕಾಮಗಾರಿ ಆದೇಶ ಪತ್ರ ನೀಡಿದ್ದಾರೆ. ಒಟ್ಟು 9 ಸಾವಿರಕ್ಕೂ ಹೆಚ್ಚು ಜನರಿಗೆ ಮೋಸ ಮಾಡಿದ್ದಾರೆ. ಬಡವರಿಗೆ ಆದ ಅನ್ಯಾಯದ ಕುರಿತು ಸರ್ಕಾರದ ಗಮನ ಸೆಳೆದು ವಸತಿ ರಹಿತರು ಹಾಗೂ ಬಡವರಿಗೆ ನ್ಯಾಯ ದೊರಕಿಸಿಕೊಡಲು ಹೋರಾಟ ನಡೆಸುತ್ತಿದ್ದರೆ, ಶಾಸಕರು ಸರ್ಕಾರದ ಮೇಲೆಯೇ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಟುವಾಗಿ ಟೀಕಿಸಿದ್ದಾರೆ.

ಬಡವರಿಗಾದ ಅನ್ಯಾಯದ ವಿರುದ್ಧದ ಹೋರಾಟ ನಿರಂತರವಾಗಿರಲಿದೆ. ಶಾಸಕರ ದಮನಕಾರಿ ನೀತಿಯ ವಿರುದ್ಧ ಮುಂದಿನ ದಿನಗಳಲ್ಲಿಯೂ ಸಂಘರ್ಷ ಮುಂದುವರಿಯಲಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.