ನಗರದಲ್ಲಿ 15 ಸಾವಿರ ಅಕ್ರಮ ಕಟ್ಟಡಗಳು

5
ಬೆಳೆಯುತ್ತಿರುವ ನಗರ, 30 ಉದ್ಯಾನ ಸ್ಥಳಗಳಲ್ಲಿ ಮಂದಿರ ನಿರ್ಮಾಣ

ನಗರದಲ್ಲಿ 15 ಸಾವಿರ ಅಕ್ರಮ ಕಟ್ಟಡಗಳು

Published:
Updated:
Deccan Herald

ಬೀದರ್‌: ನಗರ ಪ್ರದೇಶ ನಿಧಾನವಾಗಿ ವಿಸ್ತರಣೆಯಾಗುತ್ತಿದ್ದು, ಹತ್ತು ವರ್ಷಗಳ ಅವಧಿಯಲ್ಲಿ ಭೂಗಳ್ಳರ ಹಾವಳಿ ಹೆಚ್ಚಾಗಿದೆ. ನಗರದಲ್ಲಿ 15 ಸಾವಿರ ಅಕ್ರಮ ಕಟ್ಟಡಗಳು ತಲೆ ಎತ್ತಿವೆ.

ಗುಂಪಾ ರಸ್ತೆ, ಶಿವನಗರ ಹಾಗೂ ಭವಾನಿ ಕಾಲೊನಿ ಪ್ರದೇಶದಲ್ಲಿ ಬಹುಮಹಡಿ ಕಟ್ಟಡಗಳು ನಿರ್ಮಾಣಗೊಂಡಿವೆ. ಬಹುತೇಕ ಕಟ್ಟಡಗಳ ಮಾಲೀಕರು ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ನಗರಸಭೆಯ ಅನುಮತಿಯನ್ನೇ ಪಡೆದಿಲ್ಲ. ನಗರಸಭೆಯ ಅಧಿಕಾರಿಗಳಿಗೆ ಗೊತ್ತಿದ್ದರೂ ಜಾಣ ಮೌನ ವಹಿಸಿದ್ದಾರೆ.

ನಗರಸಭೆ ಜಾಗದಲ್ಲಿ ಕಟ್ಟಡ ನಿರ್ಮಿಸಿ ಬಾಡಿಗೆ ಕೊಡುವ ಮೂಲಕ ಭೂಗಳ್ಳರು ತಿಂಗಳಿಗೆ ಲಕ್ಷಾಂತರ ರೂಪಾಯಿ ಆದಾಯ ಪಡೆದುಕೊಳ್ಳುತ್ತಿದ್ದಾರೆ. ನಗರಸಭೆಗೆ ಸೇರಿದ ಉದ್ಯಾನದಲ್ಲಿ ಮಂದಿರಗಳು ನಿರ್ಮಾಣವಾಗಿವೆ. ಪ್ರಾರ್ಥನಾ ಸ್ಥಳಗಳು ತಲೆ ಎತ್ತಿವೆ. ಸಾರ್ವಜನಿಕವಾಗಿಯೇ ಅತಿಕ್ರಮಣ ನಡೆದರೂ ಅಧಿಕಾರಿಗಳು ಅತಿಕ್ರಮಣಕಾರರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ.

ನಗರಸಭೆಯಿಂದ ಅನುಮತಿ ಪಡೆಯದೇ ಕಟ್ಟಡ ನಿರ್ಮಿಸಿದರೆ ಮೂಲಸೌಕರ್ಯ ಕಲ್ಪಿಸಬಾರದು ಎನ್ನುವ ನಿಯಮ ಇದೆ. ಬಿಲ್ಡರ್‌ಗಳು ಕೆಳಹಂತದ ಕೆಲ ಅಧಿಕಾರಿಗಳ ಕೈ ಬಿಸಿ ಮಾಡಿ ನಗರಸಭೆಯ ಸೌಲಭ್ಯಗಳನ್ನು ಪಡೆದುಕೊಂಡಿದ್ದಾರೆ. ಹೀಗಾಗಿ ಅಕ್ರಮ ಬಡಾವಣೆಗಳು ಸೃಷ್ಟಿಯಾಗಿವೆ. ಈ ಬಡಾವಣೆಗಳಲ್ಲಿನ ರಸ್ತೆಗಳು ಕಿರಿದಾಗಿವೆ. ಗಟಾರ ನೀರು ಹರಿದು ಹೋಗುತ್ತಿಲ್ಲ.

‘ನಗರಸಭೆಯಿಂದ ಅನುಮತಿ ಪಡೆಯದೆ ಮನೆ ಕಟ್ಟಿರುವುದು, ಎರಡು ಅಂತಸ್ತಿನ ಅನುಮತಿ ಪಡೆದು ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಿರುವುದು ನಮ್ಮ ಗಮನಕ್ಕೆ ಬಂದಿದೆ. ನಗರದಲ್ಲಿ ಒಟ್ಟು 15 ಸಾವಿರ ಅಕ್ರಮ ಕಟ್ಟಡಗಳನ್ನು ಗುರುತಿಸಲಾಗಿದೆ’ ಎಂದು ನಗರಸಭೆಯ ಆಯುಕ್ತ ಮನೋಹರ ಹೇಳುತ್ತಾರೆ.

‘ನಗರಸಭೆಯ ಸಿಬ್ಬಂದಿ ಹಿಂದೆ ದುಪ್ಪಟ್ಟು ತೆರಿಗೆ ವಿಧಿಸಿ ಕೆಲವರಿಗೆ ಅನುಮತಿ ಕೊಟ್ಟಿದ್ದಾರೆ. ಹಾಗಂತ ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ಒಂದು ಕಟ್ಟಡದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎನ್ನುವುದು ಮನವರಿಕೆಯಾದರೆ ಯಾವುದೇ ಸಂದರ್ಭದಲ್ಲಿ ಕಟ್ಟಡ ನೆಲಸಮಗೊಳಿಸಲಾಗುವುದು’ ಎಂದು ತಿಳಿಸುತ್ತಾರೆ.

‘ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಒಟ್ಟು 15 ಕಟ್ಟಡಗಳ ಮಾಲೀಕರಿಗೆ ನೋಟಿಸ್‌ ಜಾರಿ ಮಾಡಿದ್ದೇವೆ. ಶಿವನಗರದಲ್ಲಿ ಪೆಟ್ರೋಲ್‌ ಬಂಕ್‌ ನೆಲಸಮಗೊಳಿಸಲಾಗಿದೆ. ಇನ್ನುಳಿದ ಕಟ್ಟಡಗಳನ್ನು 15 ದಿನಗಳಲ್ಲಿ ನೆಲಸಮಗೊಳಿಸಲಾಗುವುದು. ಈಗಾಗಲೇ ನಗರಸಭೆಯ ಎರಡು ಜೆಸಿಬಿ ಹಾಗೂ ಸಿಬ್ಬಂದಿಯನ್ನು ಸಿದ್ಧಗೊಳಿಸಿದ್ದೇವೆ. ಯಾವುದೇ ಸಂದರ್ಭದಲ್ಲಿ ಕಾರ್ಯಾಚರಣೆ ಆರಂಭಿಸಲಿದ್ದೇವೆ’ ಎಂದು ಹೇಳುತ್ತಾರೆ.

2016ರಲ್ಲಿ ಜಿಲ್ಲಾಧಿಕಾರಿ ಆಗಿದ್ದ ಅನುರಾಗ ತಿವಾರಿ ಅವರು ನಗರಸಭೆಯ ಅಧಿಕಾರಿಗಳ ಕಾರ್ಯವೈಖರಿಗೆ ಬೇಸತ್ತು. ಪ್ರೊಬೆಷನರಿ ಐಎಎಸ್‌ ಅಧಿಕಾರಿ ಗುರುದತ್ತ ಹೆಗಡೆ ಅವರಿಗೆ ವಿಶೇಷ ಅಧಿಕಾರ ನೀಡಿ ಅಕ್ರಮ ಕಟ್ಟಡಗಳ ಮಾಲೀಕರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದರು. ಗುರುದತ್ತ ಅವರು ಬಹುಮಹಡಿ ಕಟ್ಟಡಗಳ ಮಾಲೀಕರನ್ನು ಕರೆಸಿ ದಾಖಲೆಗಳನ್ನು ಪರಿಶೀಲಿಸಿದ್ದರು. ದಾಖಲೆ ಇಲ್ಲದ ಕಟ್ಟಡಗಳನ್ನು ತೆರವುಗೊಳಿಸಿದ್ದರು.

‘ಅನುರಾಗ ತಿವಾರಿ ಅವರ ನಂತರ ಇಬ್ಬರು ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ನಗರಸಭೆಯ ಇಬ್ಬರು ಆಯುಕ್ತರು ವರ್ಗವಾಗಿ ಬೇರೆ ಕಡೆಗೆ ಹೋಗಿದ್ದಾರೆ. ಎರಡು ವರ್ಷಗಳಲ್ಲಿ ಮೂರನೆಯವರು ಆಯುಕ್ತರಾಗಿ ಬಂದಿದ್ದಾರೆ. ಅಧಿಕಾರಿಗಳು ಬದಲಾಗುತ್ತಿದ್ದಾರೆಯೇ ಹೊರತು ನಗರದಲ್ಲಿ ಅತಿಕ್ರಮಣ ನಿಂತಿಲ್ಲ’ ಎಂದು ಸಮಾಜ ಸೇವಕ ಮುಬಾಶಿರ್‌ ಶಿಂದೆ ಬೇಸರ ವ್ಯಕ್ತಪಡಿಸುತ್ತಾರೆ.
**
ಬೀದರ್‌ ನಗರದಲ್ಲಿರುವ ವಕ್ಫ್‌ ಮಂಡಳಿಯ ಆಸ್ತಿಯನ್ನೂ  ಕೆಲ ಪ್ರಭಾವಿಗಳು ಕಬಳಿಸಿದ್ದಾರೆ. ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು.
ಮುಬಾಶಿರ್‌ ಶಿಂದೆ, ಸಮಾಜ ಸೇವಕ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !