ಏಳು ಶಾಲೆಗಳಿಗೆ 155 ಡೆಸ್ಕ್‌ ವಿತರಣೆ ಶೀಘ್ರ

7
ರೋಟರಿ ಕಲ್ಯಾಣ ಝೋನ್ ಸಹಾಯಕ ಗವರ್ನರ್ ಬಸವರಾಜ ಧನ್ನೂರ ಹೇಳಿಕೆ

ಏಳು ಶಾಲೆಗಳಿಗೆ 155 ಡೆಸ್ಕ್‌ ವಿತರಣೆ ಶೀಘ್ರ

Published:
Updated:
ಬಸವರಾಜ ಧನ್ನೂರು

ಬೀದರ್‌: ಅಂತರರಾಷ್ಟ್ರೀಯ ರೋಟರಿ ಸಂಸ್ಥೆಯ ವತಿಯಿಂದ ಜಿಲ್ಲೆಯ ಏಳು ಶಾಲೆಗಳಿಗೆ ₹ 4.5 ಲಕ್ಷ ವೆಚ್ಚದಲ್ಲಿ 155 ಡೆಸ್ಕ್‌ಗಳನ್ನು ವಿತರಿಸಲಾಗುವುದು ಎಂದು ರೋಟರಿ ಕಲ್ಯಾಣ ಝೋನ್ ಸಹಾಯಕ ಗವರ್ನರ್ ಬಸವರಾಜ ಧನ್ನೂರ ತಿಳಿಸಿದ್ದಾರೆ.

ಶುಕ್ರವಾರ ನೌಬಾದ್‌ನ ಸರ್ಕಾರಿ ಪ್ರೌಢಶಾಲೆಗೆ 25, ಅಷ್ಟೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 20 ಹಾಗೂ ಕೊಳಾರದ ಸರ್ಕಾರಿ ಪ್ರಾಥಮಿಕ ಶಾಲೆಗೆ 10 ಡೆಸ್ಕ್‌ಗಳನ್ನು ವಿತರಿಸಲಾಗಿದೆ. ಅಲಿಯಾಬಾದ್ (ಜೆ) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಭಾತಂಬ್ರಾದ ಹಾನಗಲ್ ಕುಮಾರೇಶ್ವರ ಹಿರಿಯ ಪ್ರಾಥಮಿಕ ಶಾಲೆ, ಭಾಲ್ಕಿಯ ಸತ್ಯನಿಕೇತನ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಗಂಗನಬೀಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಒಂದೆರಡು ದಿನಗಳಲ್ಲಿ ಡೆಸ್ಕ್‌ಗಳ ವಿತರಣೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಲ್ಲಿ ಬಹುತೇಕರು ಬಡ ಕುಟುಂಬಗಳಿಂದ ಬಂದವರೇ ಆಗಿದ್ದಾರೆ. ಅವರಿಗೆ ಕುಳಿತುಕೊಳ್ಳಲು ಹಾಗೂ ಬರವಣಿಗೆಗೆ ನೆರವಾಗಲು ಡೆಸ್ಕ್‌ಗಳನ್ನು ವಿತರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ರೋಟರಿ ಸಂಸ್ಥೆ ವತಿಯಿಂದ ಮೈಲೂರು, ಅಷ್ಟೂರು ಹಾಗೂ ಕುಂಟೆಸಿರ್ಸಿ ಗ್ರಾಮದ ಸರ್ಕಾರಿ ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರು, ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯ ಹಾಗೂ ವಾಶ್ ಬೇಸಿನ್ ವ್ಯವಸ್ಥೆ ಮಾಡಲಾಗಿದೆ. ಬರುವ ದಿನಗಳಲ್ಲಿ ಸುಮಾರು ₹ 5 ಲಕ್ಷದಿಂದ ₹ 6 ಲಕ್ಷ ವೆಚ್ಚದಲ್ಲಿ ಇನ್ನೂ 6 ಶಾಲೆಗಳಲ್ಲಿ ಈ ವ್ಯವಸ್ಥೆ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದ್ದಾರೆ.

ರೋಟರಿ ಸಂಸ್ಥೆಯು ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯ ಒದಗಿಸಿ, ಆ ಮೂಲಕ ಮಕ್ಕಳ ಮನೋಬಲ ವೃದ್ಧಿಸುವ ಕಾರ್ಯವನ್ನು ಮಾಡುತ್ತಿದೆ. ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ತರಬೇತಿ, ವಾಶ್ ಇನ್ ಸ್ಕೂಲ್ಸ್ ಕುರಿತು ಮುಖ್ಯ ಶಿಕ್ಷಕರಿಗೆ ಅಂತರರಾಜ್ಯಮಟ್ಟದ ಕಾರ್ಯಾಗಾರ, ಶಿಕ್ಷಕರನ್ನು ಪ್ರೋತ್ಸಾಹಿಸಲು ನೇಷನ್ ಬಿಲ್ಡರ್ ಪ್ರಶಸ್ತಿ ಮತ್ತಿತರ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ ಎಂದು ತಿಳಿಸಿದ್ದಾರೆ.

ಅಂತರರಾಷ್ಟ್ರೀಯ ರೋಟರಿ ಸಂಸ್ಥೆ ಹಾಗೂ ಸ್ಥಳೀಯ ರೋಟರಿ ಸಂಸ್ಥೆಗಳ ವತಿಯಿಂದ ಸರ್ಕಾರಿ ಶಾಲೆಗಳಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸಲಾಗುತ್ತಿದೆ. ಸರ್ಕಾರ ಹಾಗೂ ಜನಪ್ರತಿನಿಧಿಗಳು ಕೂಡ ಸರ್ಕಾರಿ ಶಾಲೆಗಳಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು. ಸರ್ಕಾರಿ ಶಾಲೆಗಳನ್ನು ಬಲಪಡಿಸಿ ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !