ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್ ಅಭಿವೃದ್ಧಿಗೆ 21 ಪ್ರಸ್ತಾವ

ಮುಖ್ಯಮಂತ್ರಿ ಸಕಾರಾತ್ಮಕ ಸ್ಪಂದನೆ: ಶಿವಯ್ಯ ಸ್ವಾಮಿ ಹೇಳಿಕೆ
Last Updated 8 ಆಗಸ್ಟ್ 2022, 13:28 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯವರೇ ಆದ ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ ಅವರು ಜಿಲ್ಲೆಯ ಅಭಿವೃದ್ಧಿಗೆ ರಾಜ್ಯ ಸರ್ಕಾರದ ಮುಂದೆ 21 ಪ್ರಸ್ತಾವಗಳನ್ನು ಇಟ್ಟಿದ್ದಾರೆ.

ಬೆಂಗಳೂರಿನಲ್ಲಿ ನಡೆದ ರಾಜ್ಯ ಅಭಿವೃದ್ಧಿ, ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ಕೃಷಿ, ನೀರಾವರಿ, ಕೈಗಾರಿಕೆ, ರೈಲು ಸೇವೆ ವಿಸ್ತರಣೆ, ಹೆದ್ದಾರಿ, ಪ್ರವಾಸೋದ್ಯಮ ಅಭಿವೃದ್ಧಿ, ರೈತರಿಗೆ ಅತಿವೃಷ್ಟಿ ಪರಿಹಾರ ವಿತರಣೆ ಮೊದಲಾದ ಪ್ರಸ್ತಾವಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಎದುರು ಮಂಡಿಸಿದರು.

ಕಾರಂಜಾ ಸಂತ್ರಸ್ತರಿಗೆ ವೈಜ್ಞಾನಿಕ ಪರಿಹಾರ ಕೊಡಬೇಕು. ರೈತರ ಕಬ್ಬು ಬಾಕಿ ಹಣ ಪಾವತಿಸಲು ಬಿಎಸ್‍ಎಸ್‍ಕೆಗೆ ₹ 20 ಕೋಟಿಗೆ ಸರ್ಕಾರದ ಖಾತರಿ ಕೊಡಬೇಕು. ಬೀದರ್‌ನಲ್ಲಿ ಬಿದರಿ ಕಲೆ ಅಭಿವೃದ್ಧಿ ಕ್ಲಸ್ಟರ್, ಟೆಕ್ಸ್‍ಟೈಲ್ ಪಾರ್ಕ್ ಸ್ಥಾಪಿಸಬೇಕು. ಮೆಟಲ್ ಮಾರ್ಕ್ ಲೇಸರ್ ಟೆಕ್ನಾಲಜಿಗೆ ಬೀದರ್‌ನಲ್ಲಿ ಉತ್ಪಾದನಾ ಘಟಕ ಪ್ರಾರಂಭಿಸಲು ಆತ್ಮನಿರ್ಭರ ಯೋಜನೆ ಅಡಿ ಸಹಾಯಧನ ಕಲ್ಪಿಸಬೇಕು. ಜಿಲ್ಲೆಯಲ್ಲಿ ಹೊಸ ಕೈಗಾರಿಕೆಗಳ ಸ್ಥಾಪನೆಗೆ ಇನ್ವೆಸ್ಟ್ ಬೀದರ್ ಕಾರ್ಯಕ್ರಮ ರೂಪಿಸಬೇಕು ಎಂದು ಮನವಿ ಮಾಡಿದರು.

ಪ್ರವಾಸೋದ್ಯಮ ಬೆಳವಣಿಗೆ ಪೂರಕವಾಗಿ ಬೀದರ್ ಕೋಟೆ, ಜಲಸಂಗಿ ಸ್ಮಾರಕ, ಹುಮನಾಬಾದ್, ಚಾಂಗಲೇರಾದ ವೀರಭದ್ರೇಶ್ವರ ದೇವಸ್ಥಾನ, ಕಮಠಾಣದ ಶರಭಾವತಾರ ವೀರಭದ್ರೇಶ್ವರ ದೇವಸ್ಥಾನ, ಜೈನ ಮಂದಿರ, ನರಸಿಂಹ ಝರಣಿ ದೇವಸ್ಥಾನ, ಹುಗ್ಗೆಳ್ಳಿ ಮಠ, ಹೊನ್ನಿಕೇರಿ ಸಿದ್ಧೇಶ್ವರ ದೇಗುಲ ಅಭಿವೃದ್ಧಿಗೆ ಅನುದಾನ ಒದಗಿಸಬೇಕು ಎಂದು ಹೇಳಿದರು.

ನಾಂದೇಡ್‍ನಿಂದ ದೆಹಲಿಗೆ ತೆರಳುವ ಸಚ್ಚಕಂಡ ಎಕ್ಸ್‍ಪ್ರೆಸ್ ರೈಲಿಗೆ ಬೀದರ್‌ನೊಂದಿಗೆ ಸಂಪರ್ಕ ಕಲ್ಪಿಸಬೇಕು. ಹೈದರಾಬಾದ್- ನಿಜಾಮೊದ್ದಿನ್ ರೈಲು ಹಾಗೂ ಸಿಂಕಂದರಾಬಾದ್ -ಕಾಶಿ- ದಾನಾಪುರ ರೈಲನ್ನು ಬೀದರ್‌ ವರೆಗೆ ವಿಸ್ತರಿಸಬೇಕು. ರಾಜ್ಯ ಗೋ ಸೇವಾ ಆಯೋಗ ರಚಿಸಬೇಕು. ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.

ತಮ್ಮ ಮನವಿಗೆ ಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಆಯಾ ಪ್ರಸ್ತಾವಗಳಿಗೆ ಸಂಬಂಧಿಸಿದ ಕಡತಗಳನ್ನು ಮಂಡಿಸಲು ಸಂಬಂಧಪಟ್ಟ ಇಲಾಖೆಗಳ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ ಎಂದು ಶಿವಯ್ಯ ಸ್ವಾಮಿ ತಿಳಿಸಿದ್ದಾರೆ.

ಸಂಸದೆ ಸುಮಲತಾ ಅಂಬರೀಷ್, ಸಮಿತಿಯ ಸದಸ್ಯರಾದ ಜಿ.ಟಿ. ಸುರೇಶಕುಮಾರ, ವೈ.ಎನ್. ಬೆಂಡಗೇರಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಮುಖ್ಯಮಂತ್ರಿ ಅವರ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ಹಾಗೂ ರಾಜ್ಯದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT