ಬೀದರ್: ಜಿಲ್ಲೆಯಲ್ಲಿ ಶನಿವಾರ ರಾತ್ರಿಯಿಡೀ ಎಡೆಬಿಡದೆ ಜಿಟಿಜಿಟಿ ಮಳೆಯಾಗಿದ್ದು, ವಾತಾವರಣ ಸಂಪೂರ್ಣ ತಂಪಾಗಿದೆ.
ಶನಿವಾರ ಮಧ್ಯಾಹ್ನದಿಂದ ಸಂಜೆಯ ವರೆಗೆ ತುಂತುರು ಮಳೆಯಾಗಿತ್ತು. ಅನಂತರ ಶುರುವಾದ ಜಿಟಿಜಿಟಿ ಮಳೆ ರಾತ್ರಿಯಿಡೀ ಸುರಿದಿದೆ. ಸತತ ಸುರಿದ ಮಳೆಗೆ ವಾತಾವರಣ ಸಂಪೂರ್ಣ ತಂಪಾಗಿದ್ದು, ಬೇಸಿಗೆ ಮರೆಸುವಂತೆ ಮಾಡಿದೆ. ಭಾನುವಾರ ದಿನವಿಡೀ ಮೋಡ ಕವಿದ ವಾತಾವರಣ ಇತ್ತು.
ಜಿಲ್ಲೆಯಲ್ಲಿ ಒಟ್ಟು 26.68 ಮಿ.ಮೀ. ಮಳೆ ದಾಖಲಾಗಿದೆ. ಠಾಣಾ ಕುಶನೂರಿನಲ್ಲಿ ಅತಿ ಹೆಚ್ಚು 66.40 ಮಿ.ಮೀ ವರ್ಷಧಾರೆಯಾಗಿದೆ. ಮಳೆಯಿಲ್ಲದೆ ರೈತರು ಚಿಂತಾಕ್ರಾಂತರಾಗಿದ್ದರು. ಆದರೆ, ಎರಡ್ಮೂರು ದಿನಗಳಿಂದ ಮಳೆಯಾಗುತ್ತಿರುವುದರಿಂದ ಅವರ ಮೊಗದಲ್ಲಿ ಮಂದಹಾಸ ಮುಡಿದೆ. ಇದುವರೆಗೆ ಬಿತ್ತನೆ ಮಾಡದವರು ಈಗ ಬೀಜ ಬಿತ್ತನೆಗೆ ಮುಂದಾಗಿದ್ದಾರೆ. ಕೆಲವರು ಈಗ ಭೂಮಿ ಹದಗೊಳಿಸಲು ಮುಂದಾಗಿದ್ದಾರೆ. ಬಿಸಿಲು ಹಾಗೂ ಬಿಸಿಲಿನ ಝಳಕ್ಕೆ ಬೇಸತ್ತು ಹೋಗಿದ್ದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಮಳೆಗೆ ಹುಮನಾಬಾದ್ ತಾಲ್ಲೂಕಿನ ಸೀತಾಳಗೇರಾ ಗ್ರಾಮದಲ್ಲಿ ಗಣಪತಿ ಮಹೇಂದ್ರ ಎಂಬುವರ ಮನೆಯ ಗೋಡೆ ಕುಸಿದು ಬಿದ್ದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.