ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ ಜಿಲ್ಲೆಯಲ್ಲಿ 283 ಸೂಕ್ಷ್ಮ ಮತಗಟ್ಟೆಗಳು

ಶಾಂತಿಯುತ ಮತದಾನಕ್ಕೆ ಬಿಗಿ ಭದ್ರತೆ
Last Updated 15 ಏಪ್ರಿಲ್ 2019, 14:03 IST
ಅಕ್ಷರ ಗಾತ್ರ

ಬೀದರ್‌: ‘ಬೀದರ್‌ ಲೋಕಸಭಾ ಕ್ಷೇತ್ರದಲ್ಲಿ ಏಪ್ರಿಲ್‌ 23 ರಂದು ಶಾಂತಿಯುತ ಮತದಾನ ನಡೆಸಲು ಜಿಲ್ಲಾ ಆಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ 1,504 ಮತಗಟ್ಟೆಗಳ ಪೈಕಿ 70 ಅತಿಸೂಕ್ಷ್ಮ ಹಾಗೂ 283 ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಶ್ರೀಧರ್‌ ತಿಳಿಸಿದರು.

‘ಬೀದರ್‌ ಲೋಕಸಭಾ ಕ್ಷೇತ್ರದಲ್ಲಿ ಎಂಟು ವಿಧಾನಸಭಾ ಮತಕ್ಷೇತ್ರಗಳಿದ್ದರೂ ಬೀದರ್ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಕಾನೂನು ಸುವ್ಯವಸ್ಥೆ ಹಾಗೂ ಭದ್ರತೆಯ ಹೊಣೆಯನ್ನು ಜಿಲ್ಲಾ ಪೊಲೀಸ್‌ ಇಲಾಖೆಗೆ ನೀಡಲಾಗಿದೆ’ ಎಂದು ಇಲ್ಲಿಯ  ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಅವರು ಹೇಳಿದರು.

‘ಚುನಾವಣಾ ಬಂದೋಬಸ್ತ್‌ಗೆ 2,228 ಸಿಬ್ಬಂದಿ ಅಗತ್ಯ ಇದೆ. ಜಿಲ್ಲೆಯಲ್ಲಿ 1,878 ಸಿಬ್ಬಂದಿ ಲಭ್ಯ ಇದ್ದು, 350 ಸಿಬ್ಬಂದಿ ಬೇರೆ ಜಿಲ್ಲೆಗಳಿಂದ ನಿಯೋಜನೆಯ ಮೇಲೆ ಬರಲಿದ್ದಾರೆ. ಇದರ ಜತೆಗೆ ಸಿಆರ್‌ಪಿಎಫ್‌ನ ಎರಡು ಕಂಪನಿಗಳು, ಜಿಲ್ಲಾ ಸಶಸ್ತ್ರ ಪಡೆಯ 12 ತುಕ್ಕಡಿಯನ್ನು ಬಳಸಿಕೊಳ್ಳಲಾಗುವುದು’ ಎಂದು ತಿಳಿಸಿದರು.

‘ಮುಂಜಾಗ್ರತಾ ಕ್ರಮವಾಗಿ 2,002 ಜನರಿಂದ ಮುಚ್ಚಳಿಕೆ ಬರೆಯಿಸಿಕೊಳ್ಳಲಾಗಿದೆ. ಶಾಂತಿ ಕದಡುವ ಇಬ್ಬರನ್ನು ಗುರುತಿಸಲಾಗಿದ್ದು, ಅವರನ್ನು ಶೀಘ್ರ ಗಡಿಪಾರು ಮಾಡಲಾಗುವುದು. ಪ್ರತಿಯೊಂದು ಮತಗಟ್ಟೆಗೆ ವೈರ್‌ಲೆಸ್‌ ಸಂಪರ್ಕ ಕಲ್ಪಿಸಲಾಗುವುದು’ ಎಂದು ಹೇಳಿದರು.

ಅಂಗವಿಕಲರಿಗೆ ಉಚಿತ ವಾಹನ ಸೌಲಭ್ಯ

ಬುದ್ಧಿಮಾಂದ್ಯ, ಶ್ರವಣದೋಷ ಸಹಿತ ಎಲ್ಲ ರೀತಿಯ ಅಂಗವೈಕಲ್ಯ ಹೊಂದಿದವರೂ ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಬಂದು ಮತದಾನ ಮಾಡುವಂತಾಗಲು ಜಿಲ್ಲಾ ಸ್ವೀಪ್‌ ಸಮಿತಿ ವಿಶೇಷ ಸಿದ್ಧತೆ ಮಾಡಿಕೊಂಡಿದೆ.

ಬೀದರ್‌ ಜಿಲ್ಲೆಯಲ್ಲಿ 20,184 ಅಂಗವಿಕಲ ಮತದಾರರಿದ್ದಾರೆ. ಇವರಲ್ಲಿ 2,745 ಅಂಧರು, 1810 ಶ್ರವಣದೋಷವುಳ್ಳವರು, 8,025 ದೈಹಿಕ ಅಂಗವಿಕಲರು, 7604 ಬುದ್ಧಿಮಾಂದ್ಯರು ಸಹಿತ ಇತರ ಮತದಾರರಿದ್ದಾರೆ ಎಂದು ಸ್ವೀಪ್‌ ಸಮಿತಿ ಅಧ್ಯಕ್ಷ ಮಹಾಂತೇಶ ಬೀಳಗಿ ತಿಳಿಸಿದರು.

‘ದೃಷ್ಟಿ ಸಮಸ್ಯೆ ಇರುವವರಿಗೆ ಮತಗಟ್ಟೆಗಳಲ್ಲಿ ಭೂತಕನ್ನಡಿ ಮತ್ತು ವಾಕರ್‌ ನೀಡಲಾಗುವುದು. ಮತದಾನದ ಒಂದು ದಿನ ಮೊದಲು ಗ್ರಾಮ ಪಂಚಾಯಿತಿ ಸಿಬ್ಬಂದಿಯು ಅಂಗವಿಕಲ ಮತದಾರರ ಮನೆಗೆ ತೆರಳಿ ಮಾಹಿತಿ ನೀಡಲಿದ್ದಾರೆ. ಅವರು ಬಂದು ಹೋಗಲು ವಾಹನದ ವ್ಯವಸ್ಥೆಯನ್ನೂ ಮಾಡಲಿದ್ದಾರೆ’ ಎಂದು ಹೇಳಿದರು.

‘ಅಂಗವಿಕಲರು ಹಾಗೂ ವೃದ್ಧರು ಮತಗಟ್ಟೆಯೊಳಗೆ ಬರಲು ಅನುಕೂಲವಾಗುವಂತೆ ಗಾಲಿ ಕುರ್ಚಿಗಳನ್ನು ವಿತರಿಸಲಾಗುತ್ತದೆ. ಆರೋಗ್ಯ ಇಲಾಖೆಯಲ್ಲಿರುವ ಶೇಕಡ 80 ರಷ್ಟು ಗಾಲಿ ಕುರ್ಚಿಗಳನ್ನು ಕಾಯ್ದಿರಿಸಲಾಗಿದೆ’ ಎಂದು ತಿಳಿಸಿದರು.

ಕ್ಷೇತ್ರದಲ್ಲಿ 17.73 ಲಕ್ಷ ಮತದಾರರು
‘ಬೀದರ್‌ ಲೋಕಸಭಾ ಕ್ಷೇತ್ರದಲ್ಲಿ 9,18,595 ಪುರುಷರು, 8,55,214 ಮಹಿಳೆಯರು ಹಾಗೂ 103 ಇತರೆ ಮತದಾರರು ಸೇರಿ 17,73,912 ಮತದಾರರು ಇದ್ದಾರೆ. ಬೀದರ್‌ ಜಿಲ್ಲೆಯಲ್ಲಿ ಒಟ್ಟು 1,999 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು’ ಎಂದು ಬೀದರ್‌ ಜಿಲ್ಲಾ ಚುನಾವಣಾ ಅಧಿಕಾರಿ ಎಚ್.ಆರ್.ಮಹಾದೇವ ಹೇಳಿದರು.

‘ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮತದಾರರ ಸಹಾಯವಾಣಿ 1950ಗೆ ಒಟ್ಟು 1050 ಕರೆಗಳು ಬಂದಿವೆ. ಹೀಗೆ ಸ್ವೀಕರಿಸಲಾದ ಕರೆಗಳನ್ನು ಎಜಿಆರ್‌ಎಸ್‌ ತಂತ್ರಾಂಶದಲ್ಲಿ 63 ದೂರುಗಳನ್ನು ದಾಖಲಿಸಿ 53 ದೂರುಗಳನ್ನು ವಿಲೇವಾರಿ ಮಾಡಲಾಗಿದೆ. ಬಾಕಿ 10 ದೂರುಗಳ ವಿಲೇವಾರಿಗೆ ಕ್ರಮ ವಹಿಸಲಾಗುತ್ತಿದೆ’ ಎಂದು ಎಂದು ನಗರದಲ್ಲಿ ಸೋಮವಾರ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.

‘ಸ್ವೀಕರಿಸಿದ ದೂರುಗಳಲ್ಲಿ ಒಂದು ದೂರು ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದ್ದು, ಈ ಬಗ್ಗೆ ವರದಿಯನ್ನು ಮುಖ್ಯ ಚುನಾವಣಾಧಿಕಾರಿಗೆ ಕಳಿಸಲಾಗಿದೆ. ಎನ್‌ಜಿಆರ್‍ಎಸ್ ತಂತ್ರಾಂಶದಲ್ಲಿ ಮತದಾರರ ಸಹಾಯವಾಣಿಗೆ ಕರೆ ಮಾಡಿ ಸಲ್ಲಿಸಿರುವ ದೂರುಗಳನ್ನು ಹೊರತುಪಡಿಸಿ ಸಾರ್ವಜನಿಕರು ದಾಖಲಿಸಿದ 208 ದೂರುಗಳ ಪೈಕಿ 188 ದೂರುಗಳ ವಿಲೇವಾರಿಯಾಗಿದೆ. 20 ದೂರುಗಳು ಬಾಕಿ ಇದ್ದು, ಇದರಲ್ಲಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದ 6 ದೂರುಗಳಿವೆ. ಮತದಾರರ ಗುರುತಿನ ಚೀಟಿಗೆ ಸಂಬಂಧಿಸಿದಂತೆ 14 ದೂರುಗಳಿವೆ’ ಎಂದು ತಿಳಿಸಿದರು.

‘ಚುನಾವಣಾ ಅಕ್ರಮಗಳ ಮೇಲೆ ಹದ್ದಿನ ಕಣ್ಣಿಡಲು ರೂಪಿಸಲಾಗಿರುವ ಸಿ-ವಿಜಿಲ್ ತಂತ್ರಾಂಶದಲ್ಲಿ ಇಲ್ಲಿಯವರೆಗೆ ದಾಖಲಾದ 29 ದೂರುಗಳ ಪೈಕಿ 28 ದೂರುಗಳನ್ನು ವಿಲೇವಾರಿ ಮಾಡಲಾಗಿದೆ. ಒಟ್ಟು ದಾಖಲಿಸಿದ ದೂರುಗಳಲ್ಲಿ 3 ದೂರುಗಳನ್ನು ಎನ್‌ಜಿಆರ್‍ಎಸ್ ತಂತ್ರಾಂಶದಲ್ಲಿ ವರ್ಗಾಯಿಸಲಾಗಿದೆ. ಈ ಪೈಕಿ 2 ದೂರುಗಳಿಗೆ ಈಗಾಗಲೇ ಕ್ರಮ ವಹಿಸಲಾಗಿದೆ. 1 ಪ್ರಕರಣ ವಿಚಾರಣಾ ಹಂತದಲ್ಲಿದೆ’ ಎಂದು ಹೇಳಿದರು.

‘ಔರಾದ್‌ನಲ್ಲಿ ಶಾಸಕ ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಚೋದನಕಾರಿಯಾಗಿ ಮಾತನಾಡಿದ್ದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಫೇಸ್‌ಬುಕ್‌ನಲ್ಲಿ ಪ್ರಧಾನಿಗೆ ಅವಮಾನ ಮಾಡಿದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಹೇಳಿದರು.

ಚುನಾವಣಾ ನೀತಿ ಸಂಹಿತೆ ಜಾರಿಯಾದಾಗಿನಿಂದ ಅಬಕಾರಿ ಸಿಬ್ಬಂದಿ ತಪಾಸಣೆ ಹಾಗೂ ವಿವಿಧೆಡೆ ದಾಳಿ ನಡೆಸಿ ಅಕ್ರಮ ಮದ್ಯ , 4 ಲಾರಿ, 10 ಕಾರು, 34 ದ್ವಿಚಕ್ರವಾಹನ, ಆರು ಮೊಬೈಲ್‌ ಸೇರಿದಂತೆ ಒಟ್ಟು ₹ 86.24 ಲಕ್ಷ ಮೌಲ್ಯದ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ’ ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT