ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ನಾಲ್ಕು ಹಂತ ಬಡ್ತಿ;ಬೀದರ್‌ ಜಿಲ್ಲೆಗೆ 29ನೇ ಸ್ಥಾನ

Last Updated 30 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ಬೀದರ್: ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಬೀದರ್‌ ಜಿಲ್ಲೆ ಸ್ವಲ್ಪ ಮಟ್ಟಿಗೆ ಸುಧಾರಣೆ ಕಂಡಿದೆ. ಕಳೆದ ವರ್ಷ ಒಂದು ಸ್ಥಾನ ಬಡ್ತಿ ಹೊಂದಿದ್ದ ಜಿಲ್ಲೆ, ಈ ಸಲ ರಾಜ್ಯದ ಜಿಲ್ಲೆಗಳ ಸಾಲಿನಲ್ಲಿ ಇನ್ನೂ ಮೂರು ಸ್ಥಾನ ಮೇಲಕ್ಕೆ ಏರಿದೆ.

ಕಳೆದ ವರ್ಷ 33ನೇ ಸ್ಥಾನದಲ್ಲಿದ್ದ ಜಿಲ್ಲೆ ಈ ಬಾರಿ 29ನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಕಳೆದ ಬಾರಿಗೆ ಹೋಲಿಸಿದರೆ ವಿದ್ಯಾರ್ಥಿಗಳ ಉತ್ತೀರ್ಣದ ಪ್ರಮಾಣ ಶೇಕಡ 14.25ರಷ್ಟು ಹೆಚ್ಚಳವಾಗಿದೆ. ಕಳೆದ ಬಾರಿ ಶೇ 60.71ರಷ್ಟು ಫಲಿತಾಂಶ ಬಂದಿದ್ದರೆ, ಈ ಬಾರಿ ಶೇ 74.96 ರಷ್ಟು ಫಲಿತಾಂಶ ಬಂದಿದೆ.

2011 ರಿಂದ 2014ರ ವರೆಗೂ ಕಟ್ಟ ಕಡೆಯ ಸ್ಥಾನ ಪಡೆದಿದ್ದ ಬೀದರ್ ಜಿಲ್ಲೆ 2015ರಲ್ಲಿ 28ನೇ ಹಾಗೂ 2016ರಲ್ಲಿ 25ನೇ ಸ್ಥಾನ ಪಡೆದು, ಕೊನೆಯ ಸ್ಥಾನ ಪಡೆದಿತ್ತು. 2017ರಲ್ಲಿ ಕೊನೆಯ ಸ್ಥಾನ ಪಡೆದ ಕಾರಣ ಶಿಕ್ಷಣ ಇಲಾಖೆಯ ಅಧಿಕಾರಿಗಳು ತಲೆತಗ್ಗಿಸುವಂತಾಗಿತ್ತು. ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳ ‘10ರ ಹತ್ತಿರ’ ಯೋಜನೆ ಇಂದಿಗೂ ಕಾಗದದಲ್ಲೇ ಉಳಿದುಕೊಂಡಿದೆ.

‘ಜಿಲ್ಲೆಯ ಸಮಗ್ರ ಫಲಿತಾಂಶ ಇನ್ನೂ ನಮ್ಮ ಕೈಸೇರಿಲ್ಲ. ಆದರೆ, ಅತ್ಯುತ್ತಮ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳ ಪ್ರಮಾಣ ಉತ್ತಮವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಮೇ 1ರಂದು ಎಲ್ಲವೂ ಸ್ಪಷ್ಟವಾಗಲಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ಎಚ್‌.ಸಿ.ಚಂದ್ರಶೇಖರ ತಿಳಿಸಿದರು.

‘ಎಫ್‌1, ಎಫ್‌2 ಹಾಗೂ ಎಫ್‌3 ಪರೀಕ್ಷೆ ನಡೆಸಿದಾಗ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ವಿಶೇಷ ತರಗತಿಗಳನ್ನು ನಡೆಸಲಾಗಿತ್ತು. ಶೇಕಡ 75ರಷ್ಟು ಹಾಜರಾತಿ ಇಲ್ಲದ ವಿದ್ಯಾರ್ಥಿಗಳಿಗೆ ಹಾಲ್‌ ಟಿಕೆಟ್‌ ಕೊಟ್ಟಿರಲಿಲ್ಲ. ವಿದ್ಯಾರ್ಥಿಗಳ ಪಾಲಕರ ಸಭೆ ನಡೆಸಿ ಫಲಿತಾಂಶ ಹೆಚ್ಚಳಕ್ಕೆ ಮಕ್ಕಳ ಮೇಲೆ ನಿಗಾ ವಹಿಸುವಂತೆ ತಿಳಿವಳಿಕೆ ನೀಡಲಾಗಿತ್ತು’ ಎಂದು ತಿಳಿಸಿದರು.

‘ವಿದ್ಯಾರ್ಥಿಗಳಿಗೆ ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಲು ಕೊಡಲಾಗಿತ್ತು. ಇದರಿಂದ ವಿದ್ಯಾರ್ಥಿಗಳಿಗೆ ಇನ್ನಷ್ಟು ಸುಲಭವಾಯಿತು. ತೀವ್ರ ನಿಗಾ ಕಲಿಕಾ ಘಟಕ ಸ್ಥಾಪಿಸಿ ಕಲಿಕೆಯಲ್ಲಿ ಹಿಂದುಳಿದಿದ್ದ ವಿದ್ಯಾರ್ಥಿಗಳಿಗೆ ಪಾಠ ಬೋಧನೆ ಮಾಡಲಾಗಿತ್ತು. ಜೀವನ ಸಾಧನಾ ಎಜುಕೇಷನ್‌ ಫೌಂಡೇಷನ್ ಸೇರಿದಂತೆ ಕೆಲವು ಸರ್ಕಾರೇತರ ಸಂಘಟನೆಗಳ ನೆರವು ಪಡೆಯಲಾಗಿತ್ತು. ಹೀಗಾಗಿ ಜಿಲ್ಲೆಯ ಫಲಿತಾಂಶದಲ್ಲಿ ಸ್ವಲ್ಪ ಮಟ್ಟಿಗೆ ಸುಧಾರಣೆ ಕಂಡು ಬಂದಿದೆ’ ಎಂದು ವಿವರಿಸಿದರು.

‘ಒಂದು ವರ್ಷದ ಅವಧಿಯಲ್ಲಿ ವಿದ್ಯಾರ್ಥಿಗಳ ಮನೋಸ್ಥೈರ್ಯ ಹೆಚ್ಚಿಸುವ ಕೆಲಸ ಮಾಡಲಾಯಿತು. ವಿದ್ಯಾರ್ಥಿಗಳಲ್ಲಿದ್ದ ಪರೀಕ್ಷಾ ಭಯ ತೊಡೆದು ಹಾಕಿ ಕಠಿಣವಾದ ವಿಷಯವನ್ನು ಸ್ಮರಣೆಯಲ್ಲಿ ಇಟ್ಟುಕೊಳ್ಳುವ ಕುರಿತು ಕೆಲವು ಟಿಪ್ಸ್‌ ನೀಡಲಾಗಿತ್ತು. ಹೀಗಾಗಿ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗಿದೆ’ ಎಂದು ಜೀವನ ಸಾಧನಾ ಎಜುಕೇಷನ್‌ ಫೌಂಡೇಷನ್ ಅಧ್ಯಕ್ಷ ನಿತೇಶ ಬಿರಾದಾರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT