ಮಂಗಳವಾರ, ಏಪ್ರಿಲ್ 20, 2021
27 °C

3 ಸಾವಿರ ಕೃಷಿ ಡಿಪ್ಲೊಮಾ ಅಭ್ಯರ್ಥಿಗಳ ನೇಮಕ: ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ‘ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ರಾಜ್ಯದಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕೃಷಿ ಡಿಪ್ಲೊಮಾ ಪಡೆದ 3 ಸಾವಿರ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ’ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

ಬೀದರ್ ತಾಲ್ಲೂಕಿನ ಜನವಾಡ ಸಮೀಪದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶುಕ್ರವಾರ ನಡೆದ ಇ-ಸ್ಯಾಪ್ ಆ್ಯಪ್ ಮಾಹಿತಿ ಕಾರ್ಯಕ್ರಮದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು,‘ಈಗಾಗಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ವರದಿ ಸಲ್ಲಿಸಲಾಗಿದೆ’ ಎಂದು ತಿಳಿಸಿದರು.

‘ಹತ್ತು ತಿಂಗಳ ಅವಧಿಗೆ ಎರಡು ಗ್ರಾಮ ಪಂಚಾಯಿತಿಗೆ ಒಬ್ಬರನ್ನು ನೇಮಕ ಮಾಡಿಕೊಳ್ಳಲು ಯೋಜಿಸಲಾಗಿದೆ. ಇವರು ಮೂರು ತಿಂಗಳು ಬೆಳೆ ಸಮೀಕ್ಷೆ ಹಾಗೂ ಉಳಿದ ಏಳು ತಿಂಗಳು ಕೃಷಿ ಇಲಾಖೆಯ ವಿವಿಧ ಕೆಲಸ ಕಾರ್ಯಗಳನ್ನು ನೋಡಿಕೊಳ್ಳಲಿದ್ದಾರೆ’ ಎಂದು ಹೇಳಿದರು.

‘ಕೃಷಿ ಡಿಪ್ಲೊಮಾ ಅಭ್ಯರ್ಥಿಗಳಿಗೆ ತಾಂತ್ರಿಕ ಜ್ಞಾನ ಇರುವ ಕಾರಣ ಬೆಳೆ ಸಮೀಕ್ಷೆ ಸಮರ್ಪಕವಾಗಿ ನಡೆಯಲಿದೆ. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಲಾಭ ಹೆಚ್ಚಿನ ರೈತರಿಗೆ ಮುಟ್ಟಿಸಲು ಅನುಕೂಲವೂ ಆಗಲಿದೆ’ ಎಂದು ತಿಳಿಸಿದರು.

‘3,266 ರೈತ ಮಿತ್ರ ಹುದ್ದೆ ಭರ್ತಿ, ಕೃಷಿ ವಿಶ್ವವಿದ್ಯಾಲಯಗಳ ವಿವಿಧ ಪದವಿಗಳಲ್ಲಿ ರೈತರ ಮಕ್ಕಳಿಗೆ ಸದ್ಯ ಇರುವ ಶೇ 40 ರಷ್ಟು ಮೀಸಲಾತಿಯನ್ನು ಶೇ 50ಕ್ಕೆ ಹೆಚ್ಚಿಸುವ ಕುರಿತು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಹೇಳಿದರು.

‘ರೈತರಿಗೆ ಈಗಿನ 25 ಎಚ್.ಪಿ ಸಬ್ಸಿಡಿಯನ್ನು 40 ಎಚ್.ಪಿಗೆ ಹೆಚ್ಚಿಸಲಾಗುವುದು. ರೈತರು ಆಕಸ್ಮಿಕ ಮರಣ ಹೊಂದಿದಾಗಲೂ ರೂ. 5 ಲಕ್ಷ ಪರಿಹಾರ ಒದಗಿಸುವ ಹಾಗೂ ಬಣವೆಗೆ ಬೆಂಕಿ ತಗುಲಿ ಹಾನಿ ಸಂಭವಿಸಿದಾಗ ಇನ್ನೂ ಹೆಚ್ಚಿನ ಪರಿಹಾರ ಕಲ್ಪಿಸುವ ಪ್ರಸ್ತಾವಗಳು ಸರ್ಕಾರದ ಮುಂದಿವೆ’ ಎಂದು ತಿಳಿಸಿದರು.

ಇ-ಸ್ಯಾಪ್ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು,‘ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡರೆ ಕೃಷಿಯಲ್ಲೂ ಕೈತುಂಬ ಆದಾಯ ಪಡೆಯಬಹುದು. ಯುವಕರು ಕೃಷಿ ಕ್ಷೇತ್ರಕ್ಕೆ ಬಂದರೆ ಏನು ಬೇಕಾದರೂ ಸಾಧಿಸಬಹುದು’ ಎಂದು ಹೇಳಿದರು.

ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕೃಷಿ ಕೀಟಶಾಸ್ತ್ರಜ್ಞ ಡಾ. ಪ್ರಭುರಾಜ ಅವರು ಇ-ಸ್ಯಾಪ್ ಆ್ಯಪ್ ಕುರಿತು ಮಾಹಿತಿ ನೀಡಿದರು. ಪ್ರಗತಿಪರ ರೈತರಾದ ಕಾಶಿಲಿಂಗ ಅಗ್ರಹಾರ, ನವನಾಥ ವರದಾ, ಮಹಮ್ಮದ್ ಸುಜಾಹತ್ ಅವರು ತಮ್ಮ ಅನುಭವ ಹಂಚಿಕೊಂಡರು.

ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ.ಎನ್. ಕಟ್ಟಿಮನಿ, ಸಂಶೋಧನಾ ನಿರ್ದೇಶಕ ಬಿ.ಕೆ. ದೇಸಾಯಿ, ವಿಸ್ತರಣಾ ನಿರ್ದೇಶಕ ಡಿ.ಎಂ. ಚಂದರಗಿ, ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಸುನೀಲಕುಮಾರ ಎನ್.ಎಂ, ಸುರೇಶ, ದಯಾನಂದ, ಡಾ. ಸುನೀಲ ಕುಲಕರ್ಣಿ, ಡಾ. ಜ್ಞಾನದೇವ ಬುಳ್ಳಾ, ಡಾ. ಸಿದ್ರಾಮಪ್ಪ ಚಿಕುರ್ತೆ, ಡಾ.ಆರ್.ಎಲ್. ಜಾಧವ್, ಡಾ. ಅಕ್ಷಯಕುಮಾರ, ಡಾ. ರಾಜೇಶ್ವರಿ ಆರ್, ಡಾ. ಶೋಭಾರಾಣಿ, ಸಿದ್ರಾಮಪ್ಪ ಮಣಿಗೆ ಇದ್ದರು. ಡಾ. ಮಲ್ಲಿಕಾರ್ಜುನ ನಿಂಗದಳ್ಳಿ ನಿರೂಪಿಸಿದರು.

ಇದಕ್ಕೂ ಮುನ್ನ ಕೃಷಿ ವಿಜ್ಞಾನ ಕೇಂದ್ರಕ್ಕೆ ಬಂದ ಸಚಿವರು ಮೊದಲು ಗೋವಿಗೆ ಪೂಜೆ ಸಲ್ಲಿಸಿದರು. ಕೃಷಿ ಪ್ರದರ್ಶನಾಲಯದಲ್ಲಿ ಕೃಷಿ ವಿಜ್ಞಾನ ಕೇಂದ್ರ ಅಭಿವೃದ್ಧಿ ಪಡಿಸಿದ ತಂತ್ರಜ್ಞಾನಗಳನ್ನು ವೀಕ್ಷಿಸಿದರು. ಸಾವಯವ ಉತ್ಪನ್ನಗಳ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆ ಘಟಕಕ್ಕೆ ಭೇಟಿ ಕೊಟ್ಟರು. ಕೇಂದ್ರದ ಆವರಣದಲ್ಲಿ ಹಲಸಿನ ಸಸಿ ನೆಟ್ಟರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು