ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

30 ಜಿಲ್ಲೆಗಳ ಜಾನಪದ ಕಲೆಗಳ ಪ್ರದರ್ಶನಕ್ಕೆ ನಿರ್ಧಾರ

ಜಾನಪದ ಅಕಾಡೆಮಿಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಪೂರ್ವ ಸಿದ್ಧತಾ ಸಭೆ
Last Updated 8 ಡಿಸೆಂಬರ್ 2018, 13:45 IST
ಅಕ್ಷರ ಗಾತ್ರ

ಬೀದರ್: ಕರ್ನಾಟಕ ಜಾನಪದ ಅಕಾಡೆಮಿಯು ಹೈದರಾಬಾದ್‌ ಕರ್ನಾಟಕದಲ್ಲೇ ಮೊದಲ ಬಾರಿಗೆ ಡಿಸೆಂಬರ್ 26 ಹಾಗೂ 27ರಂದು ಪರಂಪರೆ ನಗರ ಬೀದರ್‌ನಲ್ಲಿ  ಕಲಾವಿದರಿಗೆ ಅಕಾಡೆಮಿಯ ಪ್ರಶಸ್ತಿ ಪ್ರದಾನ ಮಾಡಲಿದೆ. ರಾಜ್ಯದ 30 ಜಿಲ್ಲೆಗಳ ಅಪರೂಪದ ಜಾನಪದ ಕಲೆಗಳ ಪ್ರದರ್ಶನ ಮಾಡುವ ಮೂಲಕ ಸಮಾರಂಭದ ಮೆರುಗು ಹೆಚ್ಚಿಸಲು ನಿರ್ಧರಿಸಿದೆ.

ಇಲ್ಲಿಯ ಜಿಲ್ಲಾ ರಂಗ ಮಂದಿರದಲ್ಲಿ ಶನಿವಾರ ಅಕಾಡೆಮಿಯ ಅಧ್ಯಕ್ಷ ಬಿ.ಟಾಕಪ್ಪ ಅಧ್ಯಕ್ಷತೆಯಲ್ಲಿ ನಡೆದ 2017-18ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿಯ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಗಾಯನ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನಡೆಸಲು ತೀರ್ಮಾನ ಕೈಗೊಳ್ಳಲಾಯಿತು.

ಸಾಂಪ್ರದಾಯಿಕ ವೇಷ ಭೂಷಣದಲ್ಲಿ ಬಂದು ಕಲಾ ಪ್ರದರ್ಶನ ನೀಡುವ ಕಲಾವಿದರಿಗೆ ಮಾತ್ರ ವೇದಿಕೆಯಲ್ಲಿ ಅವಕಾಶ ಕೊಡಬೇಕು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರೂ ಸಾಂಪ್ರದಾಯಿಕ ಉಡುಗೆ ತೊಡುಗೆಯಲ್ಲಿ ಪಾಲ್ಗೊಂಡು ಜಾನಪದ ಲೋಕವನ್ನು ಸೃಷ್ಟಿಸಬೇಕು ಎಂದು ಕಲಾವಿದರು ಸಲಹೆ ನೀಡಿದರು.

ಜಾನಪದ ಅಳಿವು–ಉಳಿವು ಕುರಿತು ವಿಚಾರ ಸಂಕಿರಣ, ಜಾನಪದ ಕವಿಗೋಷ್ಠಿ, ಅಪರೂಪದ ಕಲಾ ಪ್ರಕಾರಗಳ ಪ್ರದರ್ಶನ ನಡೆಸಬೇಕು. ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅವಕಾಶ ಕೊಡಬೇಕು ಎಂದು ಸಾಹಿತಿಗಳು ಹಾಗೂ ಕಲಾವಿದರು ಮನವಿ ಮಾಡಿದರು.

ಬೀದರ್‌ ಜಿಲ್ಲೆಯಲ್ಲಿ 1,500ಕ್ಕೂ ಹೆಚ್ಚು ಜಾನಪದ ಕಲಾವಿದರು ಇದ್ದಾರೆ. ಹೊಸ ಜಾನಪದ ಕಲಾವಿದರಿಗೆ ಕಲೆ ಪ್ರದರ್ಶಿಸಲು ಕನಿಷ್ಠ ಅರ್ಧಗಂಟೆ ಸಮಯಾವಕಾಶ ನೀಡಬೇಕು. ಹಾಡು ಪೂರ್ಣಗೊಳ್ಳುವ ಮೊದಲೇ ಕಲಾವಿದರನ್ನು ಕಳಿಸಿ ಅವಮಾನಗೊಳಿಸಬಾರದು ಎಂದು ಕಲಾವಿದರು ಹೇಳಿದರು.

‘ಗುರುನಾನಕ ಯಾತ್ರಿ ನಿವಾಸ, ರಾಘವೇಂದ್ರ ಮಠ, ಜಿಲ್ಲಾ ರಂಗ ಮಂದಿರ ಹಾಗೂ ಕೃಷ್ಣಾ ರಿಜೆನ್ಸಿಯಲ್ಲಿ ಜಾನಪದ ಕಲಾವಿದರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ, ಗಣಿ ಮತ್ತು ಭೂ ವಿಜ್ಞಾನ ಸಚಿವ ರಾಜಶೇಖರ ಪಾಟೀಲ ಸೇರಿದಂತೆ ಎಲ್ಲ ಜನಪ್ರತಿನಿಧಿಗಳಿಗೆ ಆಹ್ವಾನ ನೀಡಲಾಗಿದೆ’ ಎಂದು ಅಕಾಡೆಮಿಯ ಸದಸ್ಯ ವಿಜಯಕುಮಾರ ಸೋನಾರೆ ತಿಳಿಸಿದರು.

ಪ್ರಕಾಶ ಅಂಗಡಿ, ಪುಸ್ತಕ ಅಕಾಡೆಮಿ ಸದಸ್ಯೆ ಜಯದೇವಿ ಗಾಯಕವಾಡ, ಜನಪದ ಅಕಾಡೆಮಿಯ ರಿಜಿಸ್ಟ್ರಾರ್ ಸಿದ್ರಾಮ ಶಿಂದೆ ಮಾತನಾಡಿದರು.

ಲಲಿತ ಕಲಾ ಅಕಾಡೆಮಿಯ ಸದಸ್ಯ ಯೋಗೇಶ ಮಠದ, ಸಂಗೀತ ನೃತ್ಯ ಅಕಾಡೆಮಿ ಸದಸ್ಯ ಎಸ್‌.ವಿ.ಕಲ್ಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ವಟಗೆ, ಹಾಸ್ಯ ಕಲಾವಿದ ವೈಜನಾಥ ಸಜ್ಜನಶೆಟ್ಟಿ, ಕನ್ನಡಾಂಬೆ ಗೆಳೆಯರ ಬಳಗದ ಅಧ್ಯಕ್ಷ ವಿರೂಪಾಕ್ಷ ಗಾದಗಿ, ಕಲಾವಿದ ಶಂಭುಲಿಂಗ ವಾಲ್ಗೊಡ್ಡಿ, ಸಾಹಿತಿಗಳಾದ ಎಂ.ಜಿ. ದೇಶಪಾಂಡೆ, ಚಂದ್ರಪ್ಪ ಹೆಬ್ಬಾಳಕರ್, ಎಸ್.ಬಿ.ಕುಚಬಾಳ, ಎಸ್‌.ಎಂ. ಜನವಾಡಕರ್, ಬಿ.ಎಂ. ಡಾಕುಳಗಿ, ಎಂ.ಜಿ.ಗಂಗನಪಳ್ಳಿ, ಶಿವಕುಮಾರ ಕಟ್ಟೆ, ಪಾರ್ವತಿ ಸೋನಾರೆ, ಗೊಂಡ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷ ಜೋಳದಾಪಕಾ, ನಾಟ್ಯಶ್ರೀ ನೃತ್ಯಾಲಯದ ನಿರ್ದೇಶಕಿ ರಾಣಿ ಸತ್ಯಮೂರ್ತಿ ಪಾಲ್ಗೊಂಡಿದ್ದರು.

30 ಜಾನಪದ ಕಲಾವಿದರಿಗೆ ಪ್ರಶಸ್ತಿ
ಬೀದರ್:
‘ಮೂರು ಜಾನಪದ ಕೃತಿಗಳು ಸೇರಿ ಒಟ್ಟು 30 ಜಾನಪದ ಕಲಾವಿದರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದು ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ಬಿ. ಟಾಕಪ್ಪ ತಿಳಿಸಿದರು.

‘ಮೂರು ಮಳಿಗೆಗಳನ್ನು ತೆರೆದು ಜಾನಪದ ಆಭರಣ, ಆಟಿಕೆ ಸಾಮಗ್ರಿಗಳು ಹಾಗೂ ಉಡುಗೆ ತೊಡುಗೆಗಳ ಪ್ರದರ್ಶನ ಏರ್ಪಡಿಸಲಾಗುವುದು. ಅರ್ಹ ಜಾನಪದ ಕಲಾವಿದರಿಗೆ ಮಾತ್ರ ವೇದಿಕೆಯಲ್ಲಿ ಕಾರ್ಯಕ್ರಮ ನೀಡಲು ಅವಕಾಶ ಕಲ್ಪಿಸಲಾಗುವುದು’ ಎಂದು ಹೇಳಿದರು.

‘ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಪ್ರಯುಕ್ತ ವಿಚಾರ ಸಂಕಿರಣ ಹಾಗೂ ಗಾಯನ ಕಾರ್ಯಕ್ರಮ ನಡೆಯಲಿದೆ. ಡಿಸೆಂಬರ್‌ 27 ರಂದು ಸಂಜೆ 6 ಗಂಟೆಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. 26 ರಂದು ಮೊದಲ ದಿನ ಅಥವಾ ಎರಡನೇ ದಿನ ಜಾನಪದ ಕಲಾವಿದರ ಮೆರವಣಿಗೆ ನಡೆಯಲಿದೆ’ ಎಂದು ತಿಳಿಸಿದರು.

‘ಕಲಾವಿದರಿಗೆ ಕೊಡಲಾಗುತ್ತಿರುವ ₹ 3,640 ಮಾಸಾಶನವನ್ನು ₹ 5 ಸಾವಿರಕ್ಕೆ ಹೆಚ್ಚಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಕಳೆದ ವರ್ಷ 3,600 ಹಾಗೂ ಈ ವರ್ಷ ಒಂದು ಸಾವಿರ ಕಲಾವಿದರ ಸಂದರ್ಶನ ನಡೆಸಿ ಮಾಸಾಶನದ ಅರ್ಜಿ ಸ್ವೀಕರಿಸಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT