ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ ಜಿಲ್ಲೆಯಲ್ಲಿ 49 ಮನೆಗಳು ಕುಸಿತ

ನಾಗನಪಲ್ಲಿ ಸೇತುವೆ ಕುಸಿತ: ಸಂಪರ್ಕ ಕಡಿತ
Last Updated 15 ಅಕ್ಟೋಬರ್ 2020, 14:34 IST
ಅಕ್ಷರ ಗಾತ್ರ

ಬೀದರ್‌: ಜಿಲ್ಲೆಯಲ್ಲಿ 49 ಗಂಟೆಗಳ ಅವಧಿಯಲ್ಲಿ ಸುರಿದ ಭಾರಿ ಮಳೆಗೆ ಮೂರು ತಾಲ್ಲೂಕುಗಳಲ್ಲಿ 47 ಮನೆಗಳು ಭಾಗಶಃ ಕುಸಿದಿವೆ. ಔರಾದ್‌ ತಾಲ್ಲೂಕಿನ ನಾಗನಪಲ್ಲಿ ಸಮೀಪದ ಸೇತುವೆ ಕುಸಿದು ಸಂಪರ್ಕ ಕಡಿತಗೊಂಡಿದೆ. ಮಳೆಯ ಅಬ್ಬರಕ್ಕೆ ಸಾವಿರಾರು ಎಕರೆ ಪ್ರದೇಶದಲ್ಲಿನ ಬೆಳೆ ನಷ್ಟವಾಗಿದೆ.
ಬಸವಕಲ್ಯಾಣ ತಾಲ್ಲೂಕಿನಲ್ಲಿ 29 ಮನೆಗಳು, ಔರಾದ್‌ನಲ್ಲಿ ನಾಲ್ಕು, ಚಿಟಗುಪ್ಪ ತಾಲ್ಲೂಕಿನಲ್ಲಿ ಆರು ಮನೆಗಳು, ಕಮಲನಗರ ತಾಲ್ಲೂಕಿನಲ್ಲಿ ಖತಗಾಂವ, ದಾಬಕಾ, ಗಂಗನಬೀಡದಲ್ಲಿ ತಲಾ ಒಂದು ಮನೆ ಸೇರಿ ಒಟ್ಟು ಹತ್ತು ಮನೆಗಳು ಕುಸಿದಿವೆ. ಬೀದರ್‌, ಭಾಲ್ಕಿ ಹಾಗೂ ಹುಮನಾಬಾದ್ ತಾಲ್ಲೂಕಿನಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಹಾನಿಯ ಸಮೀಕ್ಷೆ ನಡೆಸಿದ್ದಾರೆ.

ಬಸವಕಲ್ಯಾಣ ತಾಲ್ಲೂಕಿನ ಆಲಗೂಡ, ಹುಲಸೂರ, ಮುಡಬಿಯಲ್ಲಿ ತಲಾ ಎರಡು ಮನೆಗಳು ಸೇರಿ ಒಟ್ಟು 29 ಮನೆಗಳ ಗೋಡೆಗಳು ಕುಸಿದಿವೆ. ಇಲ್ಲಾಳ, ಧನ್ನೂರ, ಬೇಲೂರ, ನಾರಾಯಣಪುರ, ಹತ್ತರ್ಗಾ ಗ್ರಾಮಗಳಲ್ಲಿ ನಾಲೆ ಹಾಗೂ ನದಿ ನೀರು ಜಮೀನುಗಳಿಗೆ ನುಗ್ಗಿ ಬೆಳೆ ಹಾನಿಯಾಗಿದೆ. ಸೋಯಾಬಿನ್ ಹಾಗೂ ತೊಗರಿ ಬೆಳೆ ನೀರು ಪಾಲಾಗಿದೆ. ನೂರಾರು ಎಕರೆಯಲ್ಲಿನ ಕಬ್ಬು ನೆಲಕ್ಕುರುಳಿದೆ.

ಕೊಚ್ಚಿ ಹೋದ ಸೋಯಾ ಬಣವೆ
ಔರಾದ್ ತಾಲ್ಲೂಕಿನಲ್ಲಿ ಭಾರಿ ಮಳೆಗೆ ನದಿ ಪಾತ್ರದ ಹೊಲಗಳು ಜಲಾವೃತವಾಗಿವೆ. ನಿಡೋದಾ, ಕೊರೆಕಲ್, ನಾಗನಪಲ್ಲಿ ಬಳಿ ಸೇತುವೆ ಕುಸಿದು ಈ ಭಾಗದ ಸಂಪರ್ಕ ಕಡಿತವಾಗಿದೆ.
ಮಾಂಜ್ರಾ ನದಿಗೆ ಹೆಚ್ಚಿನ ನೀರು ಹರಿದು ಬರುತ್ತಿರುವುದರಿಂದ ನದಿ ಪಾತ್ರದ ಹಲವು ಗ್ರಾಮಗಳ ಹೊಲಗಳಿಗೆ ನೀರು ನುಗ್ಗಿದೆ. ಸಂಗಮ, ಸಾವಳಿ, ಹೆಡಗಾಪುರ, ನಿಟ್ಟೂರ, ಕೌಠಾ, ಧುಪತಮಹಾಗಾಂವ್, ಮಣಿಗೆಂಪುರ, ಲಾಧಾ ಗ್ರಾಮಗಳಲ್ಲಿ ಭಾರಿ ಹಾನಿ ಆಗಿದೆ. ಈ ಗ್ರಾಮಗಳ ರೈತರು ಹಾಕಿದ ಸೋಯಾ ಬಣವೆ ನೀರಿನಲ್ಲಿ ಕೊಚ್ಚಿ ಹೋಗಿವೆ.
ತೇಗಂಪುರ, ಕೌಠಾ, ಬಾಚೆಪಳ್ಳಿ ಸೇರಿದಂತೆ ಅನೇಕ ಗ್ರಾಮಗಳ ರೈತರ ಕಬ್ಬು ನೀರು ಪಾಲಾಗಿದೆ. ಔರಾದ್ ಪಟ್ಟಣದ ಗೌಂಡಿ ಗಲ್ಲಿಯಲ್ಲಿ ನಾಲ್ಕು ಮನೆಗಳ ಗೋಡೆ ಭಾಗಶಃ ಕುಸಿದು ಬಿದ್ದಿದೆ. ಆದರೆ ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ತಹಶೀಲ್ದಾರ್ ಎಂ. ಚಂದ್ರಶೇಖರ್ ತಿಳಿಸಿದ್ದಾರೆ.
ಅನೇಕ ಕಡೆ ವಿದ್ಯುತ್ ಕಂಬ ಬಿದ್ದ ಪರಿಣಾಮ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಎರಡು ದಿನಗಳಿಂದ ಮೊಬೈಲ್‌ ಸಂಪರ್ಕ ಕಡಿತಗೊಂಡು ಜನ ತೊಂದರೆ ಅನುಭವಿಸುತ್ತಿದ್ದಾರೆ.

ಅಡುಗೆ ಮನೆಯಲ್ಲಿ ಬಿತ್ತು ಮಣ್ಣಿನ ರಾಶಿ:
ಚಿಟಗುಪ್ಪ ತಾಲ್ಲೂಕಿನ ಶಾಮತಾಬಾದ್ ಗ್ರಾಮದಲ್ಲಿ ಆರು ಮನೆಗಳ ಗೋಡೆಗಳು ಕುಸಿದು ಬಿದ್ದಿವೆ. ‘ರಾತ್ರಿ ಮನೆಯಲ್ಲಿ ಅಡುಗೆ ಮಾಡಿ ಊಟಕ್ಕೆ ಕೂಡುವಷ್ಟರಲ್ಲಿ ಏಕಾಏಕಿ ಗೋಡೆ ಕುಸಿದು ಅಡುಗೆ ಕೋಣೆಯಲ್ಲಿ ಮಣ್ಣಿನ ರಾಶಿ ತುಂಬಿಕೊಂಡಿತು. ಪಾತ್ರೆ, ಪಗಡೆ, ಬಟ್ಟೆ, ದಿನಸಿಗಳೆಲ್ಲ ಹಾಳಾಗಿವೆ. ಪಕ್ಕದ ಮನೆಯಲ್ಲಿ ಆಶ್ರಯ ಪಡೆದಿದ್ದೇವೆ' ಎಂದು ಮನೆಯ ಒಡತಿ ಶಿವಕಾಂತಾ ಪಾಂಡುರಂಗ ತಿಳಿಸಿದರು.
ಗ್ರಾಮದ ಕಾವೇರಿ ಶಿವಕುಮಾರ್‍, ವಿಮಲಾ ವೈಜಿನಾಥ್, ನಸಿಮಾ ಬೇಗಂ ಇಸ್ಮಾಯಲ್ ಪಟೇಲ್, ಲಾಡಲೆಸಾಬ್
ಮಕಬುಲ್‌ಮಿಯಾ, ಬಲವಂತ ಶಿವರಾಜ್, ಶಿವಕಾಂತಾ ಪಾಂಡುರಂಗ ಅವರ ಮನೆಗಳು ಭಾಗಶಃ ಕುಸಿದು ಬಿದ್ದಿವೆ.

4 ಸಾವಿರ ಹೇಕ್ಟರ್‌ ಬೆಳೆ ಹಾನಿ
ಭಾಲ್ಕಿ ತಾಲ್ಲೂಕಿನಲ್ಲಿ 48 ಗಂಟೆಗಳ ಅವಧಿಯಲ್ಲಿ ಸುರಿದ ಭಾರಿ ಮಳೆಗೆ ನಾಲ್ಕು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸೋಯಾಬೀನ್‌, ತೊಗರಿ ಹಾಗೂ ಇತರೆ ಬೆಳೆ ಹಾನಿಯಾಗಿದೆ. ಬುಧವಾರ ತಡ ರಾತ್ರಿ ಸಾಯಿಗಾಂವ ಹೋಬಳಿಯಲ್ಲಿ 34.2 ಮಿ.ಮೀ ಮಳೆ ಸುರಿದಿದೆ, ಉಳಿದೆಡೆ ಸಾಧಾರಣ ಮಳೆ ಸುರಿದಿದೆ. ಗುರುವಾರ ಬೆಳಗಿನ ಜಾವ ಔರಾದ್‌ ಹಾಗೂ ಕಮಲನಗರದಲ್ಲಿ ಮಾತ್ರ ಸಾಧಾರಣ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT