ಭಾನುವಾರ, ಸೆಪ್ಟೆಂಬರ್ 19, 2021
28 °C

56 ಗ್ರಾಮಗಳಿಗೆ ಟ್ಯಾಂಕರ್‌ ನೀರೇ ಗತಿ; ಮೂವರು ಸಚಿವರಿದ್ದರೂ ದೊರೆಯದ ಸ್ಪಂದನ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್: ಜಿಲ್ಲೆಯಲ್ಲಿ ಕಳೆದ ವರ್ಷ ವಾಡಿಕೆಯಷ್ಟು ಮಳೆ ಸುರಿದಿಲ್ಲ. ಮಾಂಜರಾ ನದಿ ಬತ್ತಿ ಬರಿದಾಗಿದೆ. ಬ್ಯಾರೇಜ್, ಕೆರೆ ಕಟ್ಟೆಗಳಲ್ಲಿನ ನೀರು ಖಾಲಿಯಾಗಿದೆ. ಅಂತರ್ಜಲಮಟ್ಟ 600 ಅಡಿ ಆಳಕ್ಕೆ ಕುಸಿದು ಮೂರು ತಿಂಗಳಿಂದ ಕೊಳವೆ ಬಾವಿಗಳು ಒಂದೊಂದಾಗಿ ಬತ್ತಲು ಆರಂಭಿಸಿವೆ. ಈಗಾಗಲೇ 200 ಗ್ರಾಮಗಳಲ್ಲಿ ನೀರಿನ ಕೊರತೆ ಕಾಣಿಸಿಕೊಂಡಿದೆ. 56 ಗ್ರಾಮಗಳು ಟ್ಯಾಂಕರ್‌ ನೀರನ್ನೇ ಅವಲಂಬಿಸಿವೆ.

ಜಿಲ್ಲೆಯಲ್ಲಿ 600 ಹಳ್ಳಿಗಳು ಇವೆ. ಐದು ವರ್ಷಗಳಿಂದ 217 ಗ್ರಾಮಗಳಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಒಂದು ಗ್ರಾಮಕ್ಕೂ ಶಾಶ್ವತ ಪರಿಹಾರ ದೊರಕಿಲ್ಲ. ಜಿಲ್ಲಾ ಆಡಳಿತದ ಅಂಕಿ ಅಂಶಗಳ ಪ್ರಕಾರ ಪ್ರಸ್ತುತ 200 ಹಳ್ಳಿಗಳಲ್ಲಿ ಜಲಮೂಲಗಳು ಬತ್ತಿವೆ.

ರಾಜ್ಯ ಸರ್ಕಾರ 2018ರ ಅಕ್ಟೋಬರ್‌ನಲ್ಲೇ ಬೀದರ್‌ ಜಿಲ್ಲೆಯನ್ನು ಬರ ಪೀಡಿತ ಎಂದು ಘೋಷಣೆ ಮಾಡಿದೆ. ಆದರೆ, ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ಕೊಟ್ಟು ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಿಲ್ಲ. ಜಿಲ್ಲಾ ಆಡಳಿತ ಪ್ರತಿ ಬಾರಿಯೂ ಟ್ಯಾಂಕರ್‌ನಿಂದ ನೀರು ಪೂರೈಸಿ ಜವಾಬ್ದಾರಿಯಿಂದ ಕೈತೊಳೆದುಕೊಳ್ಳುತ್ತಿದೆ.

ಕೆಲವು ಗ್ರಾಮಗಳಲ್ಲಿ ಒಂದೂವರೆ ಕಿ.ಮೀ ಪೈಪ್‌ಲೈನ್‌ ಅಳವಡಿಸಿದರೆ ಸಾಕು ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು. ಆದರೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಈ ನಿಟ್ಟಿನಲ್ಲಿ ಮನಸ್ಸು ಮಾಡುತ್ತಿಲ್ಲ. ‘ಜಿಲ್ಲೆಯಲ್ಲಿ ಬರ ಇಲ್ಲ; ಪತ್ರಿಕೆಗಳಲ್ಲೇ ಇದೆ’ ಎಂದು ಅಧಿಕಾರಿಗಳು ಉಡಾಫೆಯ ಮಾತುಗಳನ್ನು ಆಡುತ್ತಿದ್ದಾರೆ ಎಂದು ಜನ ಆಡಿಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ಮೂವರು ಸಚಿವರಿದ್ದರೂ ಜನರ ಗೋಳಿಗೆ ಸ್ಪಂದನೆ ದೊರೆಯುತ್ತಿಲ್ಲ.

ಬಸವಕಲ್ಯಾಣ ತಾಲ್ಲೂಕಿನ ಹಿರೇನಾಗಾಂವ, ಗದ್ಲೇಗಾಂವ, ಪ್ರತಾಪುರ, ನಾರಾಯಣಪುರ, ಕೊಹಿನೂರ, ಔರಾದ್‌ ಪಟ್ಟಣ, ಕಮಲನಗರ ತಾಲ್ಲೂಕಿನ ಚಿಮ್ಮೇಗಾಂವ, ಭಾಲ್ಕಿ ತಾಲ್ಲೂಕಿನ ಕಾಕನಾಳದ ಜನರು ಕುಡಿಯುವ ನೀರಿನ ಗಂಭೀರ ಸಮಸ್ಯೆ ಎದುರಿಸುತ್ತಿದ್ದಾರೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಕಳಿಸಿದ ಪ್ರಸ್ತಾವಗಳು ದೂಳು ತಿನ್ನುತ್ತಿವೆ. ಹೀಗಾಗಿ ಸಮಸ್ಯೆ ಜೀವಂತ ಉಳಿದುಕೊಂಡಿದೆ. ಲೋಕಸಭೆ ಚುನಾವಣೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ನೀತಿ ಸಂಹಿತೆಯ ನೆಪದಲ್ಲಿ ಅನೇಕ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ.

‘ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ನೀರು ಇದ್ದರೂ ಸರಬರಾಜು ವ್ಯವಸ್ಥೆಯಲ್ಲಿನ ದೋಷಗಳಿಂದಾಗಿ ಜನರಿಗೆ ದೊರೆಯುತ್ತಿಲ್ಲ. ಆದ್ಯತೆಯ ಮೇಲೆ ಲೋಪಗಳನ್ನು ಸರಿಪಡಿಸುವ ಕೆಲಸ ಅಧಿಕಾರಿಗಳು ಸಮರ್ಪಕವಾಗಿ ಮಾಡುತ್ತಿಲ್ಲ’ ಎಂದು ಸಾಮಾಜಿಕ ಕಾರ್ಯಕರ್ತ ಗುರುನಾಥ ವಡ್ಡೆ ದೂರುತ್ತಾರೆ.

‘ತೆರೆದ ಬಾವಿಗಳಲ್ಲಿನ ಹೂಳು ತೆಗೆಯಲು ಅಥವಾ ಒಂದು ಕಿ.ಮೀ ಪೈಪ್‌ಲೈನ್‌ ಅಳವಡಿಸಲು ಆರು ತಿಂಗಳು ಬೇಕಿಲ್ಲ. ಟ್ಯಾಂಕರ್‌ ಮಾಲೀಕರನ್ನು ಪೋಷಿಸುವ ದಿಸೆಯಲ್ಲಿ ಸಮಸ್ಯೆಯನ್ನು ಜೀವಂತವಾಗಿಟ್ಟಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಕುಡಿಯುವ ನೀರಿಗಾಗಿ ಹೈಕೋರ್ಟ್‌ ಮೊರೆ ಹೋಗುವಂತಹ ಸ್ಥಿತಿ ಬಂದಿದೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

‘ಮಾಂಜರಾ ನದಿಗೆ ಅಡ್ಡಲಾಗಿ ಜೀರ್ಗ್ಯಾಳ, ಮಾಣಿಕೇಶ್ವರ, ಚಂದಾಪುರ, ಹಾಲಹಳ್ಳಿ ಹಾಗೂ ಕೌಠಾ ಸಮೀಪ ನಿರ್ಮಿಸಿದ ಐದೂ ಬ್ಯಾರೇಜ್‌ಗಳಲ್ಲಿ ನೀರಿಲ್ಲ. ಔರಾದ್‌ನಂತಹ ಪಟ್ಟಣದಲ್ಲಿ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಸೇರಿಕೊಂಡು ಕೃತಕ ಜಲಕ್ಷಾಮ ಸೃಷ್ಟಿಸಿದ್ದಾರೆ’ ಎಂದು ಅವರು ಆರೋಪಿಸುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು