ಸಹಕಾರ ಸಂಘಗಳ ಗಣಕೀಕರಣ ಕ್ರಮ: ಉಮಾಕಾಂತ ನಾಗಮಾರಪಳ್ಳಿ

7
ಡಿಸಿಸಿ ಬ್ಯಾಂಕ್‌ ವಾರ್ಷಿಕ ಮಹಾಸಭೆ

ಸಹಕಾರ ಸಂಘಗಳ ಗಣಕೀಕರಣ ಕ್ರಮ: ಉಮಾಕಾಂತ ನಾಗಮಾರಪಳ್ಳಿ

Published:
Updated:
Deccan Herald

ಬೀದರ್‌: ‘ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧೀನದ ಜಿಲ್ಲೆಯ ಎಲ್ಲ 171 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಗಣಕೀಕರಣ ಮಾಡಲಾಗುವುದು’ ಎಂದು ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಹೇಳಿದರು.

ನಗರದ ಬ್ಯಾಂಕ್‌ನ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ನಡೆದ 96ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ‘ಗಣಕೀಕರಣ ಪ್ರಕ್ರಿಯೆಗೆ ಪ್ರತಿ ಸಂಘಕ್ಕೆ ತಲಾ ₹ 1 ಲಕ್ಷ ಒದಗಿಸಲಾಗುವುದು’ ಎಂದರು.

‘ಈಗಾಗಲೇ 5 ತಾಲ್ಲೂಕುಗಳ ತಲಾ 5ರಂತೆ 25 ಸಂಘಗಳನ್ನು ಗಣಕೀಕರಣ ಮಾಡಲಾಗಿದೆ. ಮೂರು ಸಂಘಗಳು ಬ್ಯಾಂಕ್‌ನೊಂದಿಗೆ ಆನ್‌ಲೈನ್‌ ಸಂಪರ್ಕವನ್ನೂ ಹೊಂದಿವೆ. ಉಳಿದ ಸಂಘಗಳಿಗೂ ಆನ್‌ಲೈನ್‌ ಸಂಪರ್ಕ ಕಲ್ಪಿಸಲಾಗುವುದು’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ 5 ಹೊಸ ಶಾಖೆಗಳನ್ನು ತೆರೆಯುವ ಪ್ರಸ್ತಾವ ಇದೆ. ಭಾರತೀಯ ರಿಸರ್ವ್‌ ಬ್ಯಾಂಕ್ ಅನುಮತಿ ದೊರೆತ ಕೂಡಲೇ ಶಾಖೆಗಳನ್ನು ಆರಂಭಿಸಲಾಗುವುದು’ ಎಂದು ಹೇಳಿದರು.

ಎಲ್ಲ ಶಾಖೆಗಳಲ್ಲಿ ಆರ್‌ಟಿಜಿಎಸ್, ಎನ್‍ಇಎಫ್‌ಟಿ ಸೌಲಭ್ಯ ಕಲ್ಪಿಸಲಾಗಿದೆ. ಗ್ರಾಹಕರಿಗೆ ಇನ್ನಷ್ಟು ಉತ್ತಮ ಸೇವೆ ಒದಗಿಸಲು ಇಂಟರ್‌ನೆಟ್‌ ಬ್ಯಾಂಕಿಂಗ್ ಸೇರಿದಂತೆ ವಿವಿಧ ಸೇವೆಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ’ ಎಂದರು.

‘2017-18ನೇ ಸಾಲಿನಲ್ಲಿ ಬ್ಯಾಂಕ್ ₹ 6.60 ಕೋಟಿ ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಲಾಭದಲ್ಲಿ ₹ 12.55 ಲಕ್ಷದಷ್ಟು ಹೆಚ್ಚಳವಾಗಿದೆ’ ಎಂದು ಹೇಳಿದರು.

‘ಬ್ಯಾಂಕ್‌ನಿಂದ ₹ 1,993 ಕೋಟಿ ಸಾಲ ವಿತರಿಸಲಾಗಿದೆ. ಈ ಪೈಕಿ ₹ 781 ಕೋಟಿ ಕೆಸಿಸಿ ಸಾಲ, ₹ 128 ಕೋಟಿ ಮಧ್ಯಮಾವಧಿ ಕೃಷಿ ಸಾಲ, ₹ 1,084 ಕೋಟಿ ಕೃಷಿಯೇತರ ಸಾಲ ವಿತರಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಬ್ಯಾಂಕ್‌ನಲ್ಲಿ ಗ್ರಾಹಕರ ₹1,494 ಕೋಟಿ ಠೇವಣಿ ಇದೆ. ₹ 2,698 ಕೋಟಿ ದುಡಿಯುವ ಬಂಡವಾಳ ಹೊಂದಿದ್ದು, ವಾರ್ಷಿಕ ವಹಿವಾಟು ₹ 3,453 ಕೋಟಿ ಆಗಿದೆ’ ಎಂದು ವಿವರಿಸಿದರು.

‘ಬ್ಯಾಂಕ್ ವತಿಯಿಂದ ಜಿಲ್ಲೆಯಲ್ಲಿ 25,526 ಸ್ವಸಹಾಯ ಗುಂಪುಗಳನ್ನು ರಚಿಸಲಾಗಿದೆ. 25,372 ಸಂಘಗಳಿಗೆ ಬ್ಯಾಂಕ್ ಸಂಪರ್ಕ ಕಲ್ಪಿಸಲಾಗಿದೆ. ಬ್ಯಾಂಕ್‌ನಲ್ಲಿ ಸ್ವಸಹಾಯ ಗುಂಪುಗಳ ₹112 ಕೋಟಿ ಠೇವಣಿ ಇದೆ. ಗುಂಪುಗಳ ಸಾಲ ಬಾಕಿ ₹165.77 ಕೋಟಿ ಇದೆ. ಸಾಲ ವಸೂಲಾತಿ ಪ್ರಮಾಣ ಶೇ 99ರಷ್ಟಿದೆ’ ಎಂದು ಹೇಳಿದರು.

‘ಹಿಂದಿನ ರಾಜ್ಯ ಸರ್ಕಾರ ರೈತರ ತಲಾ ₹ 50 ಸಾವಿರವರೆಗಿನ ಸಾಲ ಮನ್ನಾ ಮಾಡಿದ್ದರಿಂದ ಜಿಲ್ಲೆಯ 1,52,096 ರೈತರ ₹ 522 ಕೋಟಿ ಸಾಲ ಮನ್ನಾ ಆಗಿದೆ’ ಎಂದು ತಿಳಿಸಿದರು.

ಉಪಾಧ್ಯಕ್ಷ ಭೀಮರಾವ್ ಪಾಟೀಲ, ನಿರ್ದೇಶಕರಾದ ಅಮರಕುಮಾರ ಖಂಡ್ರೆ, ವಿಜಯಕುಮಾರ ಲಿಂಗೋಜಿ, ರಾಚಪ್ಪ ಪಾಟೀಲ, ವಿಜಯಕುಮಾರ ಎಸ್. ಪಾಟೀಲ ಗಾದಗಿ, ಮಹಮ್ಮದ್ ಸಲಿಮೊದ್ದಿನ್, ಸಂಜಯಸಿಂಗ್ ಹಜಾರಿ, ಕಾಶೀನಾಥ ಬೀರ್ಗಿ, ಪೆಂಟಾರೆಡ್ಡಿ ಎಸ್, ಜಗನ್ನಾಥರೆಡ್ಡಿ ಎಖ್ಖೆಳ್ಳಿ, ಶರಣಪ್ಪ ಶಿವಪ್ಪ, ಸಂಗಮೇಶ ಪಾಟೀಲ ಅಲಿಯಂಬರ್, ರಾಮರೆಡ್ಡಿ ಗಂಗವಾರ, ಧೂಳಪ್ಪ ಬಿರಾದಾರ, ವಿಶ್ವನಾಥ ಮಲಕೂಡ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಜನ ಮಲ್ಲಿಕಾರ್ಜುನ, ಪ್ರಧಾನ ವ್ಯವಸ್ಥಾಪಕ ಚಂದ್ರಶೇಖರ ಹತ್ತಿ, ಉಪ ಪ್ರಧಾನ ವ್ಯವಸ್ಥಾಪಕರಾದ ವಿಠ್ಠಲರೆಡ್ಡಿ ಎಂ. ಯಡಮಲ್ಲೆ, ಚನ್ನಬಸಯ್ಯ ಸ್ವಾಮಿ, ರಾಜಕುಮಾರ ಆಣದೂರೆ, ಪಂಢರಿರೆಡ್ಡಿ, ಸದಾಶಿವ ಪಾಟೀಲ, ಅನಿಲ ಪಾಟೀಲ ಇದ್ದರು.

* 2017-18ನೇ ಸಾಲಿನಲ್ಲಿ ಜಿಲ್ಲೆಯ 1,70,675 ರೈತರು ಬ್ಯಾಂಕ್ ಮೂಲಕ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆ ಮಾಡಿಸಿದ್ದಾರೆ
–ಉಮಾಕಾಂತ ನಾಗಮಾರಪಳ್ಳಿ
ಡಿಸಿಸಿ ಬ್ಯಾಂಕ್ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !