ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಜೆ ಹೊತ್ತಿಗೆ ಬಿರುಸಿನ ಮತದಾನ

ಕೆಲ ಮತಗಟ್ಟೆಗಳಲ್ಲಿ ವಿಳಂಬವಾದ ಮತದಾನ
Last Updated 24 ಏಪ್ರಿಲ್ 2019, 12:04 IST
ಅಕ್ಷರ ಗಾತ್ರ

ಬೀದರ್: ಸೂರ್ಯೋದಯದೊಂದಿಗೆ ಆರಂಭವಾದ ಸೆಕೆ. ಮಧ್ಯಾಹ್ನ ಬಿರು ಬಿಸಿಲು. ಸಂಜೆ ಮೋಡ ಕವಿದ ವಾತಾವರಣ. ಹವಾಮಾನ ಅಣಕಿಸುವಂತೆ ಬೀದರ್‌ ಲೋಕಸಭಾ ಕ್ಷೇತ್ರದಲ್ಲಿ ಮಂದಗತಿಯಲ್ಲಿಯೇ ಆರಂಭವಾಗಿ ಸಂಜೆ ಹೊತ್ತಿಗೆ ಬಿರುಸಿನ ಮತದಾನ ನಡೆಯಿತು.

ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿ ಇರುವ ಕಾರಣ ನಗರದ ಪ್ರದೇಶದಲ್ಲಿ ಮತದಾರರು ಬೆಳಿಗ್ಗೆ 7 ಗಂಟೆ ವೇಳೆಗೆ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಗ್ರಾಮೀಣ ಪ್ರದೇಶದ ಬಹುತೇಕ ಮತಗಟ್ಟೆಗಳಲ್ಲಿ ಬೆಳಿಗ್ಗೆ 11 ಗಂಟೆಯ ವರೆಗೂ ಮತದಾರರಲ್ಲಿ ಉತ್ಸಾಹ ಕಂಡು ಬರಲಿಲ್ಲ. ಮತಗಟ್ಟೆಗಳ ಬಳಿ ಸಾಮಾನ್ಯವಾಗಿ ಕಂಡು ಬರುತ್ತಿದ್ದ ರಾಜಕೀಯ ಪಕ್ಷಗಳ ದಂಡು ಕೂಡ ಇರಲಿಲ್ಲ.

ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಈಶ್ವರ ಖಂಡ್ರೆ ಭಾಲ್ಕಿಯಲ್ಲಿ, ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಔರಾದ್‌ನಲ್ಲಿ ಹಾಗೂ ಬಿಎಸ್‌ಪಿ ಅಭ್ಯರ್ಥಿ ಎಸ್. ಎಚ್. ಬುಖಾರಿ ಚಿಟಗುಪ್ಪದಲ್ಲಿ ಮತ ಚಲಾಯಿಸಿದರು.

ಹೊಸ ಮತದಾರರ ಉತ್ಸಾಹ
ಗ್ರಾಮೀಣ ಪ್ರದೇಶದಲ್ಲಿ ಮೊದಲ ಬಾರಿಗೆ ಮತದಾನ ಮಾಡಲು ಬಂದಿದ್ದ ಯುವತಿಯರು ಖುಷಿಯಿಂದ ಮತ ಚಲಾಯಿಸಿ ಹೊರ ಬಂದು ಎಡಗೈ ತೋರು ಬೆರಳು ಪ್ರದರ್ಶಿಸಿದರು. ಮತದಾರರ ಗುರುತಿನ ಚೀಟಿ ಲಭಿಸಿದ ಕಾರಣ ಅಂತರ್ಜಾಲ ನೆರವಿನಿಂದ ಪಡೆದ ಪ್ರತಿಯೊಂದಿಗೆ ಆಧಾರ್‌ ಕಾರ್ಡ್ಹಿಡಿದುಕೊಂಡು ಮತಗಟ್ಟೆಗೆ ಬಂದಿದ್ದರು.

ಬೀದರ್‌ ತಾಲ್ಲೂಕಿನ ಅಂಬಿಕಾ ಸಂಜುಕುಮಾರ ಹಾಗೂ ಭಾಲ್ಕಿ ತಾಲ್ಲೂಕಿನ ಚಂದಾಪುರದ ರಾಣಿಯಮ್ಮ ಶಂಕರ ಅವರು ಮೊದಲ ಬಾರಿಗೆ ಮತ ಚಲಾಯಿಸಿ ಮತಗಟ್ಟೆಯಿಂದ ಹೊರ ಬಂದು ಎಡಗೈ ತೋರು ಬೆರಳಿಗೆ ಹಚ್ಚಿದ್ದ ಶಾಯಿ ಗುರುತನ್ನು ತೋರಿಸಿ ಖುಷಿಪಟ್ಟರು. ಮತಯಂತ್ರದ ಮೇಲೆ ಅಭ್ಯರ್ಥಿಗಳ ಹೆಸರು, ಚಿಹ್ನೆ ಹಾಗೂ ಭಾವಚಿತ್ರ ಸಹ ಇತ್ತು. ಹೀಗಾಗಿ ಮತ ಚಲಾಯಿಸಲು ಕಷ್ಟ ಆಗಲಿಲ್ಲ ಎಂದು ಮತದಾನ ಮಾಡಿದ ಮೊದಲ ಅನುಭವ ಹಂಚಿಕೊಂಡರು.

ಬೀದರ್‌ ಜಿಲ್ಲೆಯಲ್ಲಿ ಬೆಳಿಗ್ಗೆ 9 ಗಂಟೆಗೆ ಸರಾಸರಿ ಶೇಕಡ 6.23 ರಷ್ಟು ಮತದಾನವಾಗಿತ್ತು. ಔರಾದ್ ವಿಧಾನಸಭಾ ಕ್ಷೇತ್ರದಲ್ಲಿ ಶೇಕಡ 2 ರಷ್ಟೂ ಮತದಾನ ಆಗಿರಲಿಲ್ಲ. ಆದರೆ ಮಧ್ಯಾಹ್ನ 1 ಗಂಟೆ ವರೆಗೆ ಜಿಲ್ಲೆಯಲ್ಲಿ ಒಟ್ಟು ಶೇಕಡ 33.39 ರಷ್ಟು ಮತದಾನವಾಗಿದ್ದು ಕಂಡು ಬಂದಿತು. ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಶೇಕಡ 36.12ರಷ್ಟು ಮತದಾನ ಆಗಿತ್ತು. ಸಂಜೆ 5 ಗಂಟೆಗೆ ಜಿಲ್ಲೆಯಲ್ಲಿ ಶೇಕಡ 56.88ರಷ್ಟು ಮತದಾನವಾಗಿದೆ. ಭಾಲ್ಕಿ ಕ್ಷೇತ್ರದಲ್ಲಿ ಅತಿ ಹೆಚ್ಚು ಶೇಕಡ 60.53ರಷ್ಟು ಜನ ಮತ ಚಲಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT