ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನ್‌ಸ್ಟೆಬಲ್‌ಗೆ ಸೋಂಕು: ಔರಾದ್ ಪೊಲೀಸ್ ಠಾಣೆ ಸೀಲ್‌ಡೌನ್‌

74 ಮಂದಿಗೆ ಸೋಂಕು, ಮೂವರ ಸಾವು
Last Updated 23 ಜುಲೈ 2020, 4:37 IST
ಅಕ್ಷರ ಗಾತ್ರ

ಔರಾದ್: ಇಲ್ಲಿಯ ಪೊಲೀಸ್ ಕಾನ್‌ಸ್ಟೆಬಲ್‌ಗೆ ಸೋಂಕು ದೃಢಪಟ್ಟ ಕಾರಣ ಪೊಲೀಸ್‌ ಠಾಣೆ ಸೀಲ್‌ಡೌನ್‌ ಮಾಡಲಾಗಿದೆ. ಠಾಣೆಯ ಸಿಬ್ಬಂದಿಯಲ್ಲಿ ಆತಂಕ ಮನೆ ಮಾಡಿದೆ.

ಜ್ವರದಿಂದ ಬಳಲುತ್ತಿದ್ದ 27 ವರ್ಷದ ಪೊಲೀಸ್ ಕಾನ್‌ಸ್ಟೆಬಲ್‌ ಗಂಟಲು ದ್ರವ ಮಾದರಿ ಪಡೆದು ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಬುಧವಾರ ವರದಿ ಪಾಸಿಟಿವ್‌ ಬಂದಿದೆ. ಇವರ ಸಂಪರ್ಕಕ್ಕೆ ಬಂದ ಮೂವರು ಪೊಲೀಸರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ಸಿಬ್ಬಂದಿ ಕೊರತೆಯಿಂದ ಉಳಿದ ಪೊಲೀಸ್‌ ಕಾನ್‌ಸ್ಟೆಬಲ್‌ಗಳ ಮೇಲೆ ಕೆಲಸದ ಒತ್ತಡ ಹೆಚ್ಚಾಗಿದೆ. ಔರಾದ್‌ ಗಡಿಗೆ ಹೊಂದಿಕೊಂಡಿರುವ ಕಾರಣ ಮಹಾರಾಷ್ಟ್ರ ಹಾಗೂ ತೆಲಂಗಾಣದಿಂದ ಅನೇಕ ಜನ ವಲಸೆ ಕಾರ್ಮಿಕರು ಊರಿಗೆ ಮರಳಿದ್ದಾರೆ. ಇವರಲ್ಲಿ ಹಲವರಿಗೆ ಸೋಂಕು ದೃಢಪಟ್ಟಿದೆ.

ಬೀದರ್‌: ಜಿಲ್ಲೆಯಲ್ಲಿ ಒಂದೇ ದಿನ 74 ಮಂದಿಗೆ ಸೋಂಕು

ಬೀದರ್ಜಿಲ್ಲೆಯಲ್ಲಿ ಬುಧವಾರ 74 ಮಂದಿಗೆ ಕೋವಿಡ್‌ ಸೋಂಕು ತಗುಲಿದೆ. ಕೋವಿಡ್ ವೈರಾಣು ಪೀಡಿತರ ಸಂಖ್ಯೆ 1,542ಕ್ಕೆ ಏರಿದೆ. ಈಚೆಗೆ ಅನಾರೋಗ್ಯದಿಂದಾಗಿ ನಿಧನರಾದ ಮೂವರಿಗೆ ಕೋವಿಡ್‌ ಸೋಂಕು ತಗುಲಿದ್ದು, ದೃಢಪಟ್ಟಿದೆ. ಮೃತರ ಸಂಖ್ಯೆ 68ಕ್ಕೆ ತಲುಪಿದೆ.

ಬೀದರ್‌ನ 67 ವರ್ಷದ ಪುರುಷ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದರು. ಜುಲೈ 12 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ ಜುಲೈ 20 ರಂದು ಮೃತಪಟ್ಟಿದ್ದರು. ಇನ್ನೊಬ್ಬ 58 ವರ್ಷದ ಪುರುಷ ಜ್ವರ ಹಾಗೂ ಉಸಿರಾಟ ಸಮಸ್ಯೆಯಿಂದಾಗಿ ಜುಲೈ 18ರಂದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಿಸದೆ 20 ರಂದು ಕೊನೆಯುಸಿರೆಳೆದಿದ್ದರು.

ಬೀದರ್‌ನ 57 ವರ್ಷದ ಮಹಿಳೆ ಉಸಿರಾಟ ತೊಂದರೆ ಹಾಗೂ ಅಧಿಕ ರಕ್ತದೊತ್ತಡದಿಂದಾಗಿ ಜುಲೈ 15 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲ ನೀಡದ ಕಾರಣ ಜುಲೈ 20 ರಂದು ಮೃತಪಟ್ಟಿದ್ದರು.

ಜಿಲ್ಲೆಯಲ್ಲಿ ಈವರೆಗೆ 47,002 ಮಂದಿಯ ಗಂಟಲು ದ್ರವ ಮಾದರಿ ಪಡೆಯಲಾಗಿದೆ. ಇವರಲ್ಲಿ 44,883 ಜನರ ವೈದ್ಯಕೀಯ ವರದಿ ನೆಗೆಟಿವ್ ಹಾಗೂ 1,542 ಜನರ ವರದಿ ಪಾಸಿಟಿವ್‌ ಬಂದಿದೆ. 445 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬುಧವಾರ 186 ಜನ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 577 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷೆಯ ವರದಿ ಬರಬೇಕಿದೆ.

ಯಾವ ತಾಲ್ಲೂಕಿನಲ್ಲಿ ಎಷ್ಟು ಸೋಂಕಿತರು

ಬೀದರ್‌ ತಾಲ್ಲೂಕಿನ 31, ಹುಮನಾಬಾದ್‌ ತಾಲ್ಲೂಕಿನ 17, ಭಾಲ್ಕಿ ತಾಲ್ಲೂಕಿನ 14 ಹಾಗೂ ಬಸವಕಲ್ಯಾಣ ತಾಲ್ಲೂಕಿನ 12 ಮಂದಿಗೆ ಕೋವಿಡ್‌ ಸೋಂಕು ತಗುಲಿದೆ.

ಜಿಲ್ಲೆಯ 74 ಜನರಲ್ಲಿ ಇಬ್ಬರು ಬಾಲಕಿಯರು, ಮೂವರು ಬಾಲಕರು, 22 ಪುರುಷರು ಹಾಗೂ 48 ಮಹಿಳೆಯರು ಇದ್ದಾರೆ. ಕೋವಿಡ್‌ 19 ಸೋಂಕಿತರ ಪರೀಕ್ಷಾ ಕಾರ್ಯದ ವೇಗ ಹೆಚ್ಚಿಸಲಾಗಿದೆ. ಪ್ರಸ್ತುತ 577 ಜನರ ವರದಿ ಬರಬೇಕಿದೆ. ಇನ್ನು ಬರುವ ದಿನಗಳಲ್ಲಿ ಸೋಂಕಿತರಿಗೆ ಗಂಟಲು ದ್ರವ ಮಾದರಿ ಪರೀಕ್ಷೆ ನಡೆಸಿದ ದಿನವೇ ವರದಿ ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT