ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗನವಾಡಿ ನೌಕರರಿಗೆ ಸಂತಸ ತರುವ ಬಜೆಟ್: ಜಯಮಾಲಾ ಭರವಸೆ

ಸಮ್ಮೇಳನ
Last Updated 31 ಜನವರಿ 2019, 13:30 IST
ಅಕ್ಷರ ಗಾತ್ರ

ಬಸವಕಲ್ಯಾಣ: `ಶೀಘ್ರದಲ್ಲಿ ಮಂಡನೆ ಆಗಲಿರುವ ರಾಜ್ಯ ಸರ್ಕಾರದ ಬಜೆಟ್ ಅಂಗನವಾಡಿ ನೌಕರರಿಗೆ ಸಂತಸ ತರಲಿದೆ' ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಜಯಮಾಲಾ ಹೇಳಿದರು.

ಇಲ್ಲಿನ ಬಸವ ಮಹಾಮನೆ ಆವರಣದಲ್ಲಿ ಗುರುವಾರ ನಡೆದ ಅಂಗನವಾಡಿ ನೌಕರರ 7 ನೇ ರಾಜ್ಯ ಸಮ್ಮೇಳನದ 2 ನೇ ದಿನದ ತಾಯಿ- ಮಕ್ಕಳ ಹಕ್ಕುಗಳ ಸಂರಕ್ಷಣೆ ಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

`ಅಪೌಷ್ಠಿಕತೆ ಮಹಾಮಾರಿಯಾಗಿದೆ. ಅದನ್ನು ಹೊಗಲಾಡಿಸಲು ಸರ್ವಪ್ರಯತ್ನ ನಡೆದಿದೆ. 66 ಸಾವಿರ ಅಂಗನವಾಡಿ ಕಾರ್ಯಕರ್ತೆಯರು ಕುಗ್ರಾಮಗಳಲ್ಲಿ ಸೇವೆ ಸಲ್ಲಿಸುತ್ತಾರೆ. ಇವರು ಅಂಗನವಾಡಿಗೆ ದಾಖಲಾಗುವ ಎಲ್ಲ ಮಕ್ಕಳ ತಾಯಿ ಹಾಗೂ ಶಿಕ್ಷಕಿಯ ಸ್ಥಾನದಲ್ಲಿ ನಿಂತು ಕೆಲಸ ನಿರ್ವಹಿಸುತ್ತಾರೆ. ಇಂಥವರಿಗೆ ಎಷ್ಟೇ ಸೌಲಭ್ಯ ನೀಡಿದರೂ ಕಡಿಮೆ. ಹಾವುಗಳ ಕಾಟವಿರುವ ಅಂಗನವಾಡಿಗಳಿದ್ದರೆ ಈ ಬಗ್ಗೆ ಮಾಹಿತಿ ನೀಡಿದರೆ ಹಾವುಗಳು ಒಳ ಪ್ರವೇಶಿಸದಂತೆ ಕ್ರಮಕೈಗೊಳ್ಳಲಾಗುತ್ತದೆ' ಎಂದರು.

`ಕರ್ನಾಟಕ ಸರ್ಕಾರ ದಮನಿತ ಮಹಿಳೆಯರ ಸಂಪೂರ್ಣ ಸಮೀಕ್ಷೆ ಕೈಗೊಂಡಿದೆ. ಅವರಿಗೆ ಉಚಿತ ಶಿಕ್ಷಣ, ಉದ್ಯೋಗ, ಮನೆ, ನಿವೇಶನ ನೀಡಿ ಪುನರ್ವಸತಿ ಕಲ್ಪಿಸುವುದಕ್ಕಾಗಿ ಯೋಜನೆ ಸಿದ್ಧಪಡಿಸಲಾಗಿದ್ದು ಅದು ಶೀಘ್ರದಲ್ಲಿ ಜಾರಿಯಾಗುವ ಸಾಧ್ಯತೆಯಿದೆ. ಸರ್ಕಾರಗಳು ಎಷ್ಟೇ ಪ್ರಯತ್ನಪಟ್ಟರೂ ಮಹಿಳೆಗೆ ಸಮಾನ ಸ್ಥಾನ ನೀಡುವುದು ಸಾಧ್ಯ ಆಗುತ್ತಿಲ್ಲ. ಆದರೂ, 12 ನೇ ಶತಮಾನದಲ್ಲಿ ಈ ನೆಲದ ಮೇಲೆ ನಡೆದಾಡಿದ ಬಸವಣ್ಣನವರು ಸ್ತ್ರೀಸಮಾನತೆ ನೀಡಿದನ್ನು ಮರೆಯುವಂತಿಲ್ಲ' ಎಂದರು.

ನೌಕರರ ಸಮಿತಿ ರಾಜ್ಯ ಕಾರ್ಯದರ್ಶಿ ಯಮುನಾ ಗಾಂವ್ಕರ್ ಮಾತನಾಡಿ, `ಅಂಗನವಾಡಿಗಳ ಖಾಸಗೀಕರಣ ಸಲ್ಲದು. ಅಲ್ಲದೆ ಅಂಗನವಾಡಿಗಳನ್ನು ಮಠಗಳ ಆಧೀನಕ್ಕೆ ಒಪ್ಪಿಸಬೇಕು ಎಂಬ ಕೂಗು ಕೂಡ ಎದ್ದಿದೆ. ಹಾಗೆ ಮಾಡುವುದು ಸರಿಯಲ್ಲ. ಮಹಿಳೆಯರಲ್ಲಿನ ಮೌಢ್ಯತೆ ಹೊಗಲಾಡಿಸಿ ಅರಿವು ಮೂಡಿಸಬೇಕಾಗಿದೆ. ಮಹಿಳೆ ಹಾಗೂ ಮಕ್ಕಳಲ್ಲಿ ಅಪೌಷ್ಠಿಕತೆ ಇಲ್ಲದಂತಾಗಲು ಎಲ್ಲರೂ ಒಟ್ಟಾಗಿ ಪ್ರಯತ್ನಿಸಬೇಕು' ಎಂದು ಕೇಳಿಕೊಂಡರು.

ಸಾಹಿತಿ ಎಚ್.ಎಸ್.ಅನುಪಮಾ ಮಾತನಾಡಿ, `ರಾಜ್ಯದಲ್ಲಿ ಶೇ 31 ರಷ್ಟು ಬಾಲ್ಯವಿವಾಹಗಳು ನಡೆಯುತ್ತಿರುವುದು ದುರದೃಷ್ಟಕರ ಸಂಗತಿ. ಇದನ್ನು ತಡೆಯಬೇಕಾಗಿದೆ. ಲಿಂಗ ತಾರತಮ್ಯ ಹಾಗೂ ಜಾತಿ ತಾರತಮ್ಯ ಎಲ್ಲದಕ್ಕಿಂತ ದೊಡ್ಡ ಮೂಢನಂಬಿಕೆಗಳಾಗಿವೆ. ಸ್ತ್ರೀಭ್ರೂಣಹತ್ಯೆ, ವರದಕ್ಷಿಣೆ ಪದ್ಧತಿ ತಡೆಯಬೇಕು. ತಾನು ಮಹಿಳೆ ಎಂಬ ಕೀಳು ಭಾವನೆ ಮನಸ್ಸಿನಿಂದ ತೊಡೆದು ಹಾಕಬೇಕು. ಸ್ತ್ರೀ ಮತ್ತು ಪುರುಷರಲ್ಲಿ ಸಮಾನತೆ ಬರಬೇಕು' ಎಂದರು.

`ಮಾಂಸದೂಟ, ಕನಿಷ್ಟ ತರಕಾರಿ ಊಟ ಶ್ರೇಷ್ಠ ಎಂಬುದಿಲ್ಲ. ದೇಹಕ್ಕೆ ಶಕ್ತಿ ನೀಡುವ ಯಾವುದೇ ಆಹಾರವಿದ್ದರೂ ಸೇವಿಸಬೇಕು. ನಾರಿನಾಂಶವಿಲ್ಲದ ಕರಿದ ಆಹಾರ ದೇಹಕ್ಕೆ ಹಾನಿಕಾರಕವಾಗಿದೆ. ಆದ್ದರಿಂದ ಇಂಥ ಆಹಾರದಿಂದ ದೂರವಿರಬೇಕು. ಅಂಗನವಾಡಿ ನೌಕರರ ವೇತನ ಹೆಚ್ಚಿಸಬೇಕು ಎಂಬ ಬೇಡಿಕೆ ಬಹುದಿನಗಳದ್ದಾಗಿದೆ. ಆದರೂ ಸರ್ಕಾರಗಳು ಇವರ ಸಮಸ್ಯೆ ಬಗೆಹರಿಸದೆ ಉದ್ಯಮಿಗಳ ಕೋಟ್ಯಂತರ ರೂಪಾಯಿ ಸಾಲಮನ್ನಾ ಮಾಡುವುದಕ್ಕೆ ಮಹತ್ವ ನೀಡುತ್ತಿವೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷೆ ಎಸ್.ವರಲಕ್ಷ್ಮಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎ.ಆರ್.ಸಿಂಧು, ವಕೀಲ ಸುಧೀರಕುಮಾರ ಮರೊಳ್ಳಿ, ಯರ್ರಮ್ಮ, ಶ್ರೀದೇವಿ ಚುಡೆ, ಶಾಂತಾ ಘಂಟೆ, ಪದ್ಮಾಸ್ವಾಮಿ, ಸುಶೀಲಾ ಹತ್ತೆ ಉಪಸ್ಥಿತರಿದ್ದರು. ಅನೇಕ ನೌಕರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT