ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: 8 ಮಕ್ಕಳ ರಕ್ಷಣೆ, 15 ಮಹಿಳೆಯರು ವೃದ್ಧಾಶ್ರಮಕ್ಕೆ

ಭಿಕ್ಷಾಟನೆ ತಡೆಗೆ ನಾಲ್ಕು ತಂಡಗಳಲ್ಲಿ ಅಧಿಕಾರಿಗಳ ಕಾರ್ಯಾಚರಣೆ
Last Updated 27 ಅಕ್ಟೋಬರ್ 2021, 15:03 IST
ಅಕ್ಷರ ಗಾತ್ರ

ಬೀದರ್: ಪ್ರಜಾವಾಣಿಯ ‘ನಮ್ಮ ಜನ ನಮ್ಮ ಧ್ವನಿ’ ಅಂಕಣದಲ್ಲಿ ‘ಜಿಲ್ಲೆಯಲ್ಲಿ ಹೆಚ್ಚಿದ ಭಿಕ್ಷಾಟನೆ: ಕಾಣದ ಪರಿಹಾರ’ ಶೀರ್ಷಿಕೆ ಅಡಿಯಲ್ಲಿ ಪ್ರಕಟವಾದ ಸುದ್ದಿಯನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಡಳಿತ ನಾಲ್ಕು ತಂಡಗಳಲ್ಲಿ ಬುಧವಾರ ನಗರದ ವಿವಿಧೆಡೆ ಕಾರ್ಯಾಚರಣೆ ನಡೆಸಿತು. ಹಸುಗೂಸು ಎತ್ತಿಕೊಂಡು ಭಿಕ್ಷೆ ಬೇಡುತ್ತಿದ್ದ, ಮನೆಗಳು ಇದ್ದರೂ ಭಿಕ್ಷಾಟನೆಯಲ್ಲಿ ತೊಡಗಿದ್ದವರನ್ನು ವಶಕ್ಕೆ ತೆಗೆದುಕೊಂಡು ಬಿಸಿ ಮುಟ್ಟಿಸಿದರು.

ಮೊಬೈಲ್‌ ಇಟ್ಟುಕೊಂಡು ಭಿಕ್ಷಾಟನೆ ಮಾಡುವವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳ ತಂಡವನ್ನು ನೋಡಿ ದಿಕ್ಕೆಟ್ಟು ಓಡಿದರು. ಕೆಲವರು ಭಿಕ್ಷುಕ ವೃತ್ತಿಯಲ್ಲಿ ತೊಡಗಿಸಿಕೊಂಡ ಇತರರಿಗೂ ಮಾಹಿತಿ ನೀಡಿ ಓಡಿ ಹೋಗುವಂತೆ ಮಾಡಿದರು.

ಅಧಿಕಾರಿಗಳು ಯೋಜನಾ ಬದ್ಧವಾಗಿಯೇ ದಾಳಿ ನಡೆಸಿ ವಿಚಾರಣೆಗೆ ಒಳಪಡಿಸಿ ವಾಹನಗಳಲ್ಲಿ ಕರೆದೊಯ್ದರು. ಕೆಲ ಭಿಕ್ಷುಕರು ಕೂಗಾಡಿ, ನರಳಾಡಿ ಅತ್ತಂತೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದರು. ಆದರೆ, ಸ್ವಯಂ ಸೇವಕರು ಯಾವುದಕ್ಕೂ ಜಗ್ಗದೆ ಪುನರ್ವಸತಿ ಕೇಂದ್ರಗಳಿಗೆ ಕರೆದೊಯ್ದರು. ಮತ್ತೆ ಭಿಕ್ಷೆ ಬೇಡದಂತೆ ಎಚ್ಚರಿಕೆ ನೀಡಿದರು.

ಕೆಇಬಿ ಹನುಮಾನ ಮಂದಿರ, ದೇವಿ ಕಾಲೊನಿಯ ದೇವಿ ಮಂದಿರ, ಕೇಂದ್ರ ಬಸ್‌ ನಿಲ್ದಾಣ, ಗುರುನಾನಕ ಗೇಟ್, ಓಲ್ಡ್‌ಸಿಟಿ ಪಾಂಡುರಂಗ ಮಂದಿರ, ಮೈಲೂರು ಹಾಗೂ ಗುಂಪಾ ಪ್ರದೇಶದಲ್ಲಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು.

ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿ ಜಗದೀಶ, ಮಕ್ಕಳ ರಕ್ಷಣಾ ಅಧಿಕಾರಿ ಗೌರಿಶಂಕರ ಪ್ರತಾಪುರೆ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಬಸವರಾಜ ಬಡಿಗೇರ, ಡಾನ್‌ ಬೊಸ್ಕೊದ ನೆಲ್ಸನ್‌, ಸುನೀಲ್‌ ವಾಘಮಾರೆ, ಚೈಲ್ಡ್‌ಲೈನ್‌ನ ಸೂರ್ಯಕಾಂತ, ಕಾರ್ಮಿಕ ಇಲಾಖೆಯ ಯೋಜನಾ ನಿರ್ದೇಶಕ ಅರ್ಜುನ ಸೀತಾಳಗೇರಾ, ತಾಲ್ಲೂಕು ಕಾರ್ಮಿಕ ನಿರೀಕ್ಷಕಿ ಸುವರ್ಣಾ, ಶಿಕ್ಷಣ ಇಲಾಖೆ ಹಾಗೂ ಪೊಲೀಸ್‌ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

‘ಪಾಲಕರ ಜತೆ ಭಿಕ್ಷೆ ಬೇಡುತ್ತಿದ್ದ ಮೂರು ಮಕ್ಕಳನ್ನು ಪುನರ್ವಸತಿಗಾಗಿ ಬಸವ ಕಾರ್ಯ ಸಮಿತಿ ಸಾಂತ್ವನ ಕೇಂದ್ರಕ್ಕೆ, ದೇವಸ್ಥಾನ ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದ 15 ಭಿಕ್ಷೆ ಜನರನ್ನು ಮದರ್ ತೆರೆಸಾ ವೃದ್ಧಾಶ್ರಮ ಹಾಗೂ ಅಕ್ಕ ಮಹಾದೇವಿ ವೃದ್ಧಾಶ್ರಮದಲ್ಲಿ ಬಿಡಲಾಗಿದೆ. ಐದು ಬಾಲ ಕಾರ್ಮಿಕರ ರಕ್ಷಣೆ ಮಾಡಿ ಬಾಲಮಂದಿರದಲ್ಲಿ ಇಡಲಾಗಿದೆ. ಮಾಲೀಕರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿಕೊಳ್ಳುವಂತೆ ಸೂಚಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್‌. ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT