ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿಗೊಂದು ಪ್ರಾಧಿಕಾರ ಹೆಸರಿಗೆ ಮಾತ್ರ: ಎಚ್‌.ಡಿ. ಕುಮಾರಸ್ವಾಮಿ

ಉಪ ಚುನಾವಣೆ ಪ್ರಚಾರ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ವಾಗ್ದಾಳಿ
Last Updated 26 ಮಾರ್ಚ್ 2021, 3:10 IST
ಅಕ್ಷರ ಗಾತ್ರ

ಬಸವಕಲ್ಯಾಣ: ‘ರಾಜ್ಯ ಸರ್ಕಾರ ಹೆಸರಿಗೆ ಮಾತ್ರ ಜಾತಿಗೊಂದು ಪ್ರಾಧಿಕಾರ ರಚಿಸುತ್ತಿದ್ದು, ಜನರ ಉದ್ಧಾರದ ಉದ್ದೇಶ ಅವರದಾಗಿಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ನಗರದ ಅಕ್ಕ ಮಹಾದೇವಿ ಕಾಲೇಜು ಮೈದಾನದಲ್ಲಿ ಗುರುವಾರ ನಡೆದ ಈ ಕ್ಷೇತ್ರದ ಉಪ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಯಸ್ರಬ್ ಅಲಿ ಖಾದ್ರಿ ಅವರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಬಸವಾದಿ ಶರಣರ ನಾಡಿನ ಸಮಗ್ರ ವಿಕಾಸಕ್ಕಾಗಿ ನಾನು ಮುಖ್ಯಮಂತ್ರಿ ಆಗಿದ್ದಾಗಲೇ ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ರಚಿಸಲಾಯಿತು. ಈ ತಾಲ್ಲೂಕಿನ ಗಡಿ ಭಾಗದ ಮರಾಠಿ ಜನರಿರುವ ಉಜಳಂಬದಲ್ಲಿ ಗ್ರಾಮ ವಾಸ್ತವ್ಯ ಮಾಡಿ ಆ ಭಾಗದವರ ಸಮಸ್ಯೆ ಬಗೆಹರಿಸಿದ್ದೇನೆ. ಈ ತಾಲ್ಲೂಕಿನ 14 ಸಾವಿರ ರೈತರ ₹90 ಕೋಟಿ ಸಾಲ ಮನ್ನಾ ಮಾಡಿದ್ದೇನೆ. ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ನಷ್ಟ ಭರ್ತಿಗೆ ₹20 ಕೋಟಿ ಮಂಜೂರು ಮಾಡಲಾಗಿತ್ತು. ಆದರೆ, ಬಿಜೆಪಿ ಸರ್ಕಾರ ರೈತರ ಜೀವನಾಡಿಯಾದ ಈ ಕಾರ್ಖಾನೆ ಮುಚ್ಚಿದರೂ ಕ್ರಮ ತೆಗೆದುಕೊಳ್ಳುತ್ತಿಲ್ಲ. ಸರ್ಕಾರಕ್ಕೆ ರೈತರ ಹಾಗೂ ಯಾವುದೇ ಸಮುದಾಯದ ಹಿತ ಬೇಕಾಗಿಲ್ಲ. ಬರೀ ಪ್ರಾಧಿಕಾರಗಳನ್ನು ಘೋಷಿಸಿ ಕಣ್ಣೊರೆಸುವ ತಂತ್ರ ಅನುಸರಿಸಲಾಗುತ್ತಿದೆ’ ಎಂದರು.

‘ಕೇಂದ್ರ ಸರ್ಕಾರ ಉಜ್ವಲಾ ಯೋಜನೆ ನೀಡಿ ಸಿಲೆಂಡರ್ ಬೆಲೆ ಹೆಚ್ಚಿಸಿದೆ. ಪೆಟ್ರೋಲ್ ಬೆಲೆ ಹಾಗೂ ಇತರೆ ಬೆಲೆ ಏರಿಕೆ ಮಾಡಿ ಬಡವರನ್ನು ಸಂಕಟದಲ್ಲಿ ದೂಡಿದ್ದಾರೆ. ರೈತ ವಿರೋಧಿ ನೀತಿ ಅನುಸರಿಸಲಾಗುತ್ತಿದೆ. ಕೋವಿಡ್‌ನಲ್ಲೂ ಹಣ ಲೂಡಿ ಹೊಡೆಯಲಾಗಿದೆ. ಸವಿತಾ ಸಮಾಜದವರಿಗೆ, ಮಡಿವಾಳರಿಗೆ ಕೋವಿಡ್‌ನಲ್ಲಿ ತಲಾ ₹5000 ನೀಡುತ್ತೇವೆ ಎಂದು ಸುಳ್ಳು ಭರವಸೆ ನೀಡಲಾಯಿತು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿರೋಧ ಪಕ್ಷಗಳನ್ನು ಹಣೆಯುವ ದಮನಕಾರಿ ನೀತಿ ಅನುಸರಿಸುತ್ತಿವೆ. ಭಯದ ವಾತಾವರಣ ಸೃಷ್ಟಿಸಿ ವಿರೋಧಿಗಳ ಬಾಯಿ ಮುಚ್ಚಿಸಲಾಗುತ್ತಿದೆ. ಈ ಕ್ಷೇತ್ರದಲ್ಲಿ ಬಿಜೆಪಿಗೆ ಅನುಕೂಲ ಆಗಲೆಂದು ಜೆಡಿಎಸ್ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಜನವಿರೋಧಿ ನೀತಿ ಅನುಸರಿಸುವ ಬಿಜೆಪಿ ಜತೆ ನಾನು ಕೈಜೋಡಿಸಲು ಸಾಧ್ಯವೇ. ಆದ್ದರಿಂದ ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ಗೆ ಬಹುಮತ ದೊರಕುವುದಕ್ಕೆ ನಾಂದಿ ಆಗುವಂತಾಗಲು ಈ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲಿಸಬೇಕು ಎಂದು ಕೈ ಮುಗಿದು ಕೇಳಿಕೊಳ್ಳುತ್ತೇನೆ’ ಎಂದರು.

ಅಭ್ಯರ್ಥಿ ಯಸ್ರಬ್ ಅಲಿ ಖಾದ್ರಿ, ಶಾಸಕರಾದ ಬಂಡೆಪ್ಪ ಕಾಶೆಂಪುರ, ವೆಂಕಟರಾವ್ ನಾಡಗೌಡ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ ಸೋಲಪುರೆ, ತಾಲ್ಲೂಕು ಘಟಕದ ಅಧ್ಯಕ್ಷ ಶಬ್ಬೀರಪಾಶಾ ಮುಜಾವರ್, ಪ್ರವಕ್ತಾ ಆಕಾಶ ಖಂಡಾಳೆ, ಜಿಲ್ಲಾ ಪಂಚಾಯಿತಿ ಸದಸ್ಯ ಆನಂದ ಪಾಟೀಲ, ಐಲಿನ್ ಜಾನ್ ಮಠಪತಿ, ನಾಸೀರ ಹುಸೇನ್, ಯಶಪಾಲ್ ಗೋರೆ ಮಾತನಾಡಿದರು.

ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ತುಕಾರಾಮ ಮಲ್ಲಪ್ಪ, ಸುಶೀಲ ಆವಸ್ಥಿ, ರಾಜೀವ ಸುಗೂರೆ, ಗೋವಿಂದ ಬಿರಾದಾರ, ಬಂಡೆಪ್ಪ ಮೇತ್ರೆ, ಶರಣಪ್ಪ ಪರೆಪ್ಪ, ಸಂದೀಪ ಪಾಟೀಲ, ಮಹೇಶ ಅಗಡಿ ಪಾಲ್ಗೊಂಡಿದ್ದರು.

ಜೆಡಿಎಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ

ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಯಸ್ರಬ್ ಅಲಿ ಖಾದ್ರಿ ಶುಕ್ರವಾರ ಬೈಕ್‌ ರ್‍ಯಾಲಿಯಲ್ಲಿ ತೆರಳಿ ನಾಮಪತ್ರ ಸಲ್ಲಿಸಿದರು.

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಶಾಸಕ ಬಂಡೆಪ್ಪ ಕಾಶೆಂಪೂರ, ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ ಸೋಲಪುರ, ತಾಲ್ಲೂಕು ಘಟಕದ ಅಧ್ಯಕ್ಷ ಶಬ್ಬೀರ್‌ಪಾಶಾ ನೇತೃತ್ವದಲ್ಲಿ ಹೈದರಾಬಾದ್– ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಸಮೀಪದ ಸಸ್ತಾಪುರ ಬಂಗ್ಲಾದಿಂದ ಬೈಕ್ ರ್‍ಯಾಲಿ ಮೂಲಕ ಮಿನಿ ವಿಧಾನಸೌಧಕ್ಕೆ ಬಂದು ನಾಮಪತ್ರ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT