ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ನಷ್ಟದಲ್ಲಿ ಟೊಮೆಟೊ ಬೆಳೆದ ರೈತ: 25 ಕೆ.ಜಿ.ಗೆ ₹300ರಿಂದ ₹100ಕ್ಕೆ ಕುಸಿತ

ನೆರವಿನ ನಿರೀಕ್ಷೆಯಲ್ಲಿ ಪಾಟೀಲ
Last Updated 4 ಮೇ 2021, 3:37 IST
ಅಕ್ಷರ ಗಾತ್ರ

ಖಟಕಚಿಂಚೋಳಿ: ಇಲ್ಲಿಗೆ ಸಮೀಪದ ಸಿಂದಬಂದಗಿ ಗ್ರಾಮದ ರೈತ ದಯಾನಂದ ಪಾಟೀಲ ಅವರು ತಮ್ಮ ಎರಡು ಎಕರೆ ಜಮೀನಿನಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡಿ ಟೊಮೆಟೊ ಬೆಳೆದಿದ್ದು, ಬೆಲೆ ಕುಸಿದಿರುವುದರಿಂದ ಸುಮಾರು ₹3 ಲಕ್ಷ ನಷ್ಟ ಅನುಭವಿಸುವಂತಾಗಿದೆ.

ರಾಜ್ಯದಾದ್ಯಂತ ಕೋವಿಡ್‌ ಕಾರಣ ಹದಿನಾಲ್ಕು ದಿನಗಳ ಕರ್ಫ್ಯೂ ಜಾರಿಯಲ್ಲಿರುವುದರಿಂದ ರೈತರು ಬೆಳೆದ ಟೊಮೆಟೊ ಬೆಲೆ ಕುಸಿದಿದೆ. ಇದರಿಂದ ಹೊಲದಲ್ಲಿರುವ ಬೆಳೆಯನ್ನು ಮಾರಾಟ ಮಾಡಲಾಗದೇ ನಷ್ಟ ಅನುಭವಿಸುತ್ತಿದ್ದಾರೆ.

ಸರ್ಕಾರದ ಹೊಸ ಮಾರ್ಗಸೂಚಿ ಅನ್ವಯ ಬೆಳಿಗ್ಗೆ 6ರಿಂದ ಸಂಜೆ 6ರ ವರೆಗೂ ತರಕಾರಿ ಹಾಗೂ ಹಣ್ಣುಗಳ ಮಾರಾಟಕ್ಕೆ ಅವಕಾಶ ದೊರೆತಿದೆ. ಆದರೆ, ನೆರೆಯ ಆಂಧ್ರಪ್ರದೇಶ, ತೆಲಂಗಾಣ ಹಾಗೂ ಮಹಾರಾಷ್ಟ್ರದ ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಪಾತಾಳಕ್ಕೆ ಕುಸಿದಿದೆ. ಪ್ರತಿ ವರ್ಷ 25 ಕೆ.ಜಿ ಗೆ ₹300 ಮಾರಾಟವಾಗುತ್ತಿತ್ತು. ಪ್ರಸ್ತುತ ₹100ರಂತೆ ಮಾರಾಟವಾಗುತ್ತಿದೆ. ಇದರಿಂದ ಸಾಗಣೆ ಮಾಡಿದ ವೆಚ್ಚ ಕೂಡ ಮರಳದಂತಾಗಿದೆ.

‘ಟೊಮೆಟೊ, ಈರುಳ್ಳಿ ದರ ಹೆಚ್ಚಾದಾಗ ಸಾಕಷ್ಟು ಪ್ರಚಾರ ಮಾಡಲಾಗುತ್ತದೆ. ಅದೇ ರೀತಿ ದರ ಇಳಿಕೆಯಾದಾಗ ಅಗತ್ಯ ಕ್ರಮ ಕೈಗೊಳ್ಳಬೇಕು. ಸರ್ಕಾರವೇ ಟೊಮೆಟೊಗೆ ಬೆಂಬಲ ಬೆಲೆ ಕೊಟ್ಟು ಖರೀದಿಸಬೇಕು’ ಎಂದು ರೈತ ರಫಿಕ್ ಆಗ್ರಹಿಸುತ್ತಾರೆ.

‘ಹೊಲದಲ್ಲಿ ಟೊಮೆಟೊ ತೆಗೆದವರ ಕೂಲಿ ಹಾಗೂ ಬಾಡಿಗೆ ಕಟ್ಟಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿದ್ದ ವಾಹನದ ಬಾಡಿಗೆ ಹಣವು ಬರುತ್ತಿಲ್ಲ’ ಎಂದು ರೈತ ದಯಾನಂದ ಅಳಲು ತೋಡಿಕೊಂಡರು.

‘ಕರ್ಫ್ಯೂ ಜಾರಿಯಲ್ಲಿರದಿದ್ದರೆ ಮಾರುಕಟ್ಟೆಯಲ್ಲಿ ಟೊಮೆಟೊಗೆ ಬೆಂಬಲ ಬೆಲೆ ದೊರಕುತ್ತಿತ್ತು. ಅದರಿಂದ ₹3 ಲಕ್ಕಕ್ಕೂ ಅಧಿಕ ಲಾಭ ಆಗುತ್ತಿತ್ತು. ಆದರೆ, ಈಗ ಹೊಲದಲ್ಲಿನ ಬೆಳೆ ತೆಗೆದು ಮಾರಾಟ ಮಾಡಲು ಮನಸ್ಸಾಗುತ್ತಿಲ್ಲ. ಅಲ್ಲದೇ ಅದನ್ನು ಹೊಲದಲ್ಲಿ ಹಾಗೆಯೇ ಬಿಡಲು ಆಗುತ್ತಿಲ್ಲ’ ಎಂದರು.

‘ಲಾಕ್‌ಡೌನ್ ಇರದೇ ಇದ್ದರೆ ಎಲ್ಲೆಡೆ ಮಾರುಕಟ್ಟೆ ತೆರೆದಿರುತ್ತಿದ್ದವು. ಮದುವೆ, ಚಿಕ್ಕಪುಟ್ಟ ಕಾರ್ಯಕ್ರಮಗಳು ನಡೆಯುತ್ತಿದ್ದವು. ಇದರಿಂದ ಟೊಮೆಟೊಗೆ ಹೆಚ್ಚಿನ ಬೇಡಿಕೆ ಬರುತ್ತಿತ್ತು. ಇದರಿಂದ ಈ ವರ್ಷ ಅಧಿಕ ಆದಾಯದ ನಿರೀಕ್ಷೆ ಇಟ್ಟುಕೊಂಡಿದ್ದೆ. ಆದರೆ ಈಗ ನಾನು ಖರ್ಚು ಮಾಡಿದ ಹಣ ಸಹ ವಾಪಸ್‌ ಬರುವುದಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT