ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗತ್ತು ಪರಿವರ್ತಿಸುವ ಒಳ್ಳೆಯ ಕೃತಿ

10 ಕೃತಿಗಳ ಮರು ಬಿಡುಗಡೆ: ಸಾಹಿತಿ ಪ್ರೊ.ಸಿದ್ರಾಮಪ್ಪ ಮಾಸಿಮಾಡೆ ಅಭಿಮತ
Last Updated 3 ಜುಲೈ 2022, 1:48 IST
ಅಕ್ಷರ ಗಾತ್ರ

ಬೀದರ್: ‘ಒಳ್ಳೆಯ ಕೃತಿಗಳಿಗೆ ಜಗತ್ತನ್ನು ಪರಿವರ್ತಿಸುವ ಸಾಮರ್ಥ್ಯವಿದೆ’ ಎಂದು ಸಾಹಿತಿ ಪ್ರೊ.ಸಿದ್ರಾಮಪ್ಪ ಮಾಸಿಮಾಡೆ ಹೇಳಿದರು.

ನಗರದ ಪೂಜ್ಯ ಡಾ.ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಬೆಂಗಳೂರಿನ ವೀರಲೋಕ ಬುಕ್ಸ್ ಪ್ರೈವೇಟ್ ಲಿಮಿಟೆಡ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಆಶ್ರಯದಲ್ಲಿ ಡಾ.ವಿಷ್ಣು ಸೇನಾ ಸಮಿತಿ ಹಾಗೂ ಮಾತೃಭೂಮಿ ಸೇವಾ ಪ್ರತಿಷ್ಠಾನದ ಸಹಯೋಗದೊಂದಿಗೆ ಏರ್ಪಡಿಸಿದ್ದ 10 ಕೃತಿಗಳ ಮರು ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಒಳ್ಳೆಯ ಪುಸ್ತಕಗಳಿಂದ ಹಿಂಸೆ, ಭ್ರಷ್ಟಾಚಾರ ಹಾಗೂ ಉಕ್ರೇನಂತಹ ಯುದ್ಧವನ್ನು ನಿಲ್ಲಿಸಲು ಸಾಧ್ಯವಿದೆ. ಬಸವಣ್ಣ, ಪಂಪನ ಒಂದು ಸಾಲಿಗೂ ಪರಿವರ್ತನೆ ಶಕ್ತಿ ಇದೆ. ಸಾಹಿತ್ಯ ಆಸಕ್ತರು ಇಂತಹ ಕೃತಿಗಳನ್ನು ಹೆಚ್ಚು ಹೆಚ್ಚು ಓದಬೇಕಿದೆ’ ಎಂದರು.

‘ಕನ್ನಡ ಜಗತ್ತು ಪಂಪ, ಹರಿಹರ, ಕುಮಾರವ್ಯಾಸ, ಮುದ್ದಣ್ಣ, ಬಸವಣ್ಣ, ಕುವೆಂಪು, ಕಾರಂತ, ವೆಂಕಟೇಶ, ತೇಜಸ್ವಿ ಕೊಟ್ಟಿರುವ ಸಾಹಿತ್ಯ ಭಂಡಾರವನ್ನು ಬಳಸಿಕೊಳ್ಳಬೇಕಿದೆ. ಈ ದಿಸೆಯಲ್ಲಿ ವೀರಲೋಕ ಪ್ರಕಾಶನವು ಬಹುದೊಡ್ಡ ಹೆಜ್ಜೆ ಇಟ್ಟಿದ್ದಾರೆ. ಕನ್ನಡ ನಾಡಿನ ಚರಿತ್ರೆಯಲ್ಲಿ ಹೊಸದೊಂದು ತಿರುವು ಆಗಿದೆ’ ಎಂದು ಬಣ್ಣಿಸಿದರು.

’ಓದುಗರನ್ನು ಬೆಳೆಸುವ ಪ್ರಯತ್ನಗಳು 1920ರಿಂದಲೂ ನಡೆದಿವೆ. ಪ್ರಗತಿಶೀಲ ಸಾಹಿತ್ಯ, ಬಂಡಾಯ ಸಾಹಿತ್ಯ ಹಾಗೂ ಗೋಕಾಕ ಚಳವಳಿ ಕನ್ನಡ ಸಾಹಿತ್ಯ ಹಾಗೂ ಸಂಸ್ಕೃತಿಯ ಅಭಿವೃದ್ಧಿಗೆ ನೆರವಾಗಿವೆ. ಬೆಂಗಳೂರು, ಮೈಸೂರು ನಂತರ ಬೀದರ್‌ನಲ್ಲಿ ಕೃತಿಗಳು ಬಿಡುಗಡೆಯಾಗುತ್ತಿವುದು ಸಂತಸ ತಂದಿದೆ’ ಎಂದು ಹೇಳಿದರು.

‘ಬೀದರ್‌ನಲ್ಲಿ ಸಾಹಿತ್ಯ ಆಸಕ್ತರ ಸಂಖ್ಯೆ ಹೆಚ್ಚಾಗಿದೆ. ಮನೆಗೆ ಉಪಾಹಾರ, ಊಟ ತರಿಸಿಕೊಳ್ಳುವ ಮಾದರಿಯಲ್ಲಿ ಪುಸ್ತಕಗಳನ್ನು ಮನೆಗೆ ತರಿಸಿಕೊಳ್ಳುವ ಪ್ರಯತ್ನ ಮಾಡಲಾಗಿದೆ. ಬರುವ ದಿನಗಳಲ್ಲಿ ಹೊಸದೊಂದು ಚಳವಳಿ ಆರಂಭವಾಗಲಿದೆ. ಪುಸ್ತಕ ಮನೆಗೆ ತರಿಸಿಕೊಂಡು ಓದುವ ಪರಿಪಾಠ ಶುರವಾಗಲಿದೆ’ ಎಂದು
ವಿಶ್ವಾಸ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಗಳಾಗಿ ಸಾಹಿತಿ ವಿಶ್ವೇಶ್ವರ ಭಟ್, ಜೋಗಿ, ವಿ. ನಾಗೇಂದ್ರ ಪ್ರಸಾದ್, ಗಣೇಶ ಕಾಸರಗೋಡು, ರಂಗಸ್ವಾಮಿ ಮೂಕನಹಳ್ಳಿ, ಎಚ್.ಕೆ.ಇ ಶಿಕ್ಷಣ ಸಂಸ್ಥೆಯ ನಿರ್ದೇಶಕ ಡಾ.ರಜನೀಶ ವಾಲಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲಾ ಘಟಕದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಪಾಲ್ಗೊಂಡಿದ್ದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ವಿಶ್ವೇಶ್ವರ ಭಟ್ ಅವರ ‘ಕೈ ಹಿಡಿದು ನೀ ನಡೆಸು ತಂದೆ’, ಕುಂ.ವೀರಭದ್ರಪ್ಪ -‘ವಿಶ್ವಸುಂದರಿ’, ಜೋಗಿ-‘ಇವರು ಅವರು ದೇವರು’, ರವಿ ಕೃಷ್ಣಾರೆಡ್ಡಿ-‘ಒಳ್ಳೆಯ ಬದುಕಿನ ಸೂತ್ರಗಳು’, ದೀಪಾ ಹಿರೇಗುತ್ತಿ-‘ಸೋಲೆಂಬ ಗೆಲುವು’, ಗಣೇಶ ಕಾಸರಗೋಡು-‘ಲಾಸ್ಟ್ ಡೇಸ್ ಆಫ್ ಲೆಜೆಂಡ್ಸ್’ ಹಾಗೂ ‘ಬೆಳ್ಳಿತೆರೆಯ ಬಂಗಾರದ ಗೆರೆ’, ರಂಗಸ್ವಾಮಿ ಮೂಕನಹಳ್ಳಿ-‘ಮನಿ ಮನಿ ಎಕಾನಮಿ’, ಅನಂತ ಹುದೆಂಗಜೆ-‘ನಿಮಗೆಷ್ಟು ಹಣ ಬೇಕು?’ ಹಾಗೂ ರಮೇಶ ಅರವಿಂದ- ‘ಆರ್ಟ್ ಆಫ್ ಸಕ್ಸಸ್’ ಎಂಬ ಕೃತಿಗಳನ್ನು ಮರು ಬಿಡುಗಡೆ ಮಾಡಲಾಯಿತು.

ವೀರಲೋಕ ಬುಕ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥಾಪಕ ವೀರಕಪುತ್ರ ಶ್ರೀನಿವಾಸ ಪ್ರಾಸ್ತಾವಿಕ ಮಾತನಾಡಿದರು. ಮಾತೃಭೂಮಿ ಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ಗುರುನಾಥ ರಾಜಗೀರಾ ಸ್ವಾಗತಿಸಿದರು. ಕಸಾಪ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಶಿವಕುಮಾರ ಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT