ಮಂಗಳವಾರ, ಮೇ 17, 2022
25 °C
ಈಸ್ಟರ್ ಹಬ್ಬ; ಕ್ರೈಸ್ತರಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಕೆ, ದೈವ ಸಂದೇಶ

ಚರ್ಚ್‌ನಲ್ಲಿ ಬೆಳಗಿದ ಹೊಸ ದೀಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಯೇಸು ಕ್ರಿಸ್ತ ಭಕ್ತರಿಗಾಗಿ ಮತ್ತೆ ಅವತರಿಸಿದ್ದಾನೆ ಎನ್ನುವ ನಂಬಿಕೆಯೊಂದಿಗೆ ಕ್ರೈಸ್ತರು ಇಲ್ಲಿಯ ಮರ್ಜಾಪುರ ಗವಿ ಆವರಣದಲ್ಲಿ ಈಸ್ಟರ್ ಹಬ್ಬವನ್ನು ಸಡಗರದಿಂದ ಆಚರಿಸಿದರು.

ಯೇಸುವಿನ ಅನುಯಾಯಿಗಳು ಫೆಬ್ರುವರಿ ಎರಡನೇ ವಾರ ಆರಂಭಿಸಿದ್ದ 40 ದಿನಗಳ ಉಪವಾಸ ವ್ರತವು ಈಸ್ಟರ್ ಹಬ್ಬದ ಮೂಲಕ ಮುಕ್ತಾಯಗೊಂಡಿತು.

ಶನಿವಾರ ರಾತ್ರಿ ಬಲಿಪೂಜೆಗೆ ಮುಂಚಿತವಾಗಿ ಗವಿಯ ಆವರಣದಲ್ಲಿ ಹೊತ್ತಿಸಿದ್ದ ಬೆಂಕಿಯ ಸುತ್ತ ಜಮಾಯಿಸಿದರು. ಧರ್ಮಗುರುಗಳು ಪ್ರಾರ್ಥನೆ ಸಲ್ಲಿಸುತ್ತ ಆ ಬೆಂಕಿಯಿಂದ ತಮ್ಮ ಕೈಯಲ್ಲಿರುವ ದೊಡ್ಡ ಮೇಣದ ಬತ್ತಿಯನ್ನು ಬೆಳಗಿಸಿದರು. ನಂತರ ಉಳಿದವರು ಅದರಿಂದ ಮೇಣದಬತ್ತಿಯನ್ನು ಹೊತ್ತಿಸಿ ಚರ್ಚ್‌ನ ಒಳಗೆ ಪ್ರವೇಶಿಸಿದರು.

ಚರ್ಚ್‌ನ ಒಳಗಿನ ವಿದ್ಯುತ್ ದೀಪಗಳನ್ನು ಸ್ವಿಚ್‌ ಆಫ್‌ ಮಾಡಲಾಗಿತ್ತು. ಧರ್ಮಗುರುಗಳು ಹೊಸ ಬೆಳಕಿನೊಂದಿಗೆ ಜನ ಒಳಪ್ರವೇಶಿಸಿದ ಬಳಿಕ ಚರ್ಚ್‌ನ ದೀಪಗಳನ್ನು ಹೊತ್ತಿಸಲಾಯಿತು. ನಂತರ ಎಲ್ಲರೂ ಪರಸ್ಪರ ಶುಭ ಕೋರಿದರು.

ಶಿಲುಬೆಯಲ್ಲಿ ದೇಹವನ್ನು ತೊರೆದ ನಂತರ ಯೇಸು ಕ್ರಿಸ್ತ ಮೂರನೆಯ ದಿನ ಮತ್ತೆ ಜೀವಂತವಾಗಿ ಎದ್ದು ಬಂದು ತಮ್ಮ ದೈವತ್ವವನ್ನು ಪ್ರದರ್ಶಿಸಿದರು ಎನ್ನುವ ನಂಬಿಕೆ ಇದೆ. ಹೀಗಾಗಿ ಶುಕ್ರವಾರ ದುಖಃದ ದಿನವಾಗಿ ಪ್ರಾರ್ಥನೆ ಸಲ್ಲಿಸಿದರೆ, ಭಾನುವಾರ ಸಂಭ್ರಮದ ದಿನವಾಗಿ ಆಚರಿಸಿದರು.

ಭಾನುವಾರ ಬೆಳಗಿನ ಜಾವ ಮರ್ಜಾಪುರ ಗವಿ ಆವರಣದಲ್ಲಿ ಪ್ರಾರ್ಥನೆ ಹಾಗೂ ಧಾರ್ಮಿಕ ವಿಧಿ ವಿಧಾನಗಳು ಜರುಗಿದವು. ಈಸ್ಟರ್‌ ಹಬ್ಬದ ಪ್ರಯುಕ್ತ ಗವಿಯ ಆವರಣದಲ್ಲಿ ಪೆಂಡಾಲ್‌ ಹಾಕಲಾಗಿತ್ತು. ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳುವಂತಾಗಲು ಚರ್ಚ್ ಆವರಣದಲ್ಲೇ ವೇದಿಕೆ ಸಿದ್ಧಪಡಿಸಿ ದೈವ ಸಂದೇಶ ನೀಡಲಾಯಿತು.

ಬಿಷಪ್‌ ಎನ್.ಎಲ್.ಕರ್ಕರೆ ಮಾತನಾಡಿ, ‘ಯೇಸು ನಮ್ಮೆಲ್ಲರ ಪಾಪಗಳಿಗಾಗಿ ತನ್ನ ಪ್ರಾಣ ಕೊಟ್ಟನು. ನಾವೆಲ್ಲರೂ ಪಾಪಗಳಿಂದ ಬಿಡುಗಡೆ ಹೊಂದಿದ್ದೇವೆ. ಮನುಕುಲದ ಕಲ್ಯಾಣಕ್ಕಾಗಿ ಇಹಲೋಕ ತ್ಯಜಿಸಿದ. ಸಾವಿನ ನಂತರ ಮತ್ತೆ ಮೂರನೇ ದಿನ ಕಾಣಿಸಿಕೊಂಡಿದ್ದು, ಒಂದು ವಿಸ್ಮಯ’ ಎಂದರು.

‘ದಾಸ್ಯತ್ವದಿಂದ ಬಳಲುತ್ತಿದ್ದ ತನ್ನ ಜನರನ್ನು ದೇವರು ಬಿಡಿಸಿ ಅವರನ್ನು ಹೊಸ ಬದುಕಿನೆಡೆಗೆ ಕರೆದೊಯ್ದ ಸಂಗತಿಯ ಬೆಳಕಿನ ಹಬ್ಬವಾಗಿ ಗುರುತಿಸಿಕೊಂಡಿದೆ. ಈಸ್ಟರ್ ದೈವತ್ವದ ಪ್ರತಿಪಾದನೆ ಮಾತ್ರವಲ್ಲದೆ, ಹೊಸ ಜೀವನ, ಹೊಸ ಸಷ್ಟಿ, ನಮ್ಮೊಳಗಿನ ಹೊಸ ಅನ್ವೇಷಣೆಯಾಗಿದೆ’ ಎಂದು ತಿಳಿಸಿದರು.

ಮಂಗಲಪೇಟ್‌ನ ಸೇಂಟ್‌ ಪೌಲ್‌ ಮೆಥೋಡಿಸ್ಟ್‌ ಸೆಂಟ್ರಲ್‌ ಚರ್ಚ್‌ನ ಜಿಲ್ಲಾ ಮೇಲ್ವಿಚಾರಕ ರೆವರೆಂಡ್ ಎಂ.ಪಿ.ಜೈಪಾಲ್‌, ಡೇವಿಡ್‌ ಕ್ರಿಸ್ಟೋಫರ್‌, ಸೈಮನ್‌ ಮಾರ್ಕ್, ರೆ. ಇಮಾನುವೆಲ್‌ ಇದ್ದರು.

ವಿದ್ಯಾನಗರದ ಸೇಂಟ್‌ ಪೌಲ್‌ ಮೆಥೋಡಿಸ್ಟ್ ಚರ್ಚ್, ನಾವದಗೇರಿಯ ಇಮ್ಯಾನುವೆಲ್‌ ಮೆಥೋಡಿಸ್ಟ್‌ ಚರ್ಚ್‌, ಕುಂಬಾರವಾಡದ ಚಿಯೋನ್‌ ಮೆಥೋಡಿಸ್ಟ್ ಚರ್ಚ್, ರೋಸ್‌ ಮೆಮೊರಿಯಲ್‌ ಚರ್ಚ್‌, ಶಹಾಪುರ ಗೇಟ್‌ನ ಸೇಂಟ್‌ ಜೋಸೆಫ್‌ ಚರ್ಚ್, ಆಣದೂರಿನ ಸೇಂಟ್‌ ಪೌಲ್ ಮೆಥೋಡಿಸ್ಟ್‌ ಚರ್ಚ್‌, ಚಿಟಗುಪ್ಪದ ಮೆಥೋಡಿಸ್ಟ್‌ ಚರ್ಚ್‌ಗಳಲ್ಲಿ ಕ್ರೈಸ್ತರು ಈಸ್ಟರ್ ಹಬ್ಬ ಆಚರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.