ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿ 55 ನಿಮಿಷಕ್ಕೆ ಒಬ್ಬ ವಿದ್ಯಾರ್ಥಿ ಆತ್ಮಹತ್ಯೆ: ಡಾ.ರಾಘವೇಂದ್ರ

ಕರ್ನಾಟಕ ಕಾಲೇಜಿನಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ
Last Updated 12 ಅಕ್ಟೋಬರ್ 2022, 14:18 IST
ಅಕ್ಷರ ಗಾತ್ರ

ಬೀದರ್: ‘ನಕಾರಾತ್ಮಕ ವಿಚಾರ, ಖಿನ್ನತೆ, ನಿದ್ರಾಹೀನತೆ, ಮಾದಕ ವಸ್ತುಗಳ ಸೇವನೆ ಹಾಗೂ ಅತಿಯಾದ ಅಂತರ್ಜಾಲ ಬಳಕೆಯ ದುಷ್ಪರಿಣಾಮದಿಂದ ದೇಶದಲ್ಲಿ ಪ್ರತಿ 55 ನಿಮಿಷಕ್ಕೊಬ್ಬರು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ 2020-2021ರಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಅಂಕಿ ಅಂಶಗಳಲ್ಲಿ ಶೇಕಡ 7ರಷ್ಟು ಹೆಚ್ಚಳವಾಗಿದೆ‘ ಎಂದು ಬ್ರಿಮ್ಸನ್‌ ಮನೋರೋಗ ತಜ್ಞ ಡಾ.ರಾಘವೇಂದ್ರ ವಾಘೋಲೆ ತಿಳಿಸಿದರು.

ಕರ್ನಾಟಕ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ ಹಾಗೂ ಭಾರತೀಯ ಕುಟುಂಬ ಯೋಜನಾ ಸಂಸ್ಥೆಯ ಬೀದರ್‌ ಶಾಖೆಯ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಪ್ರಯುಕ್ತ ಮಾನಸಿಕ ಆರೋಗ್ಯದ ಕುರಿತು ಆಯೋಜಿಸಿದ್ದ ವಿಶೇಷ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಆರೋಗ್ಯ ಎಂದರೆ ಕೇವಲ ದೈಹಿಕ ಸದೃಢತೆ ಅಲ್ಲ. ಮಾನಸಿಕ ಆರೋಗ್ಯವೂ ಮಹತ್ವದ್ದಾಗಿದೆ. ಅನಕ್ಷರಸ್ಥರು ಬಹುಬೇಗ ಮಾನಸಿಕ ಆರೋಗ್ಯಕ್ಕೆ ಒಳಗಾಗುತ್ತಾರೆ. ಮಾನಸಿಕವಾಗಿ ದುರ್ಬಲವಾಗಿರುವವರೇ ಮೂಢನಂಬಿಕೆ, ಭಾನಾಮತಿ, ಭೂತ ಪ್ರೇತಗಳ ಮೇಲೆ ಹೆಚ್ಚು ವಿಶ್ವಾಸ ಮಾಡುತ್ತಾರೆ’ ಎಂದು ತಿಳಿಸಿದರು.

‘ವಿದ್ಯಾರ್ಥಿಗಳಲ್ಲಿ ಮಾನಸಿಕ ಸಮತೋಲನ ಕಾಪಾಡುವ ದಿಸೆಯಲ್ಲಿ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸಿ ತಿಳಿವಳಿಕೆ ನೀಡಲಾಗುತ್ತಿದೆ. ಒತ್ತಡವನ್ನು ಸಮರ್ಥವಾಗಿ ನಿಭಾಯಿಸುವ ವ್ಯಕ್ತಿ ಮಾನಸಿಕವಾಗಿ ಆರೋಗ್ಯವಾಗಿರುತ್ತಾನೆ. 100 ವಿದ್ಯಾರ್ಥಿಗಳಲ್ಲಿ 20 ವಿದ್ಯಾರ್ಥಿಗಳು ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ. 15 ರಿಂದ 19 ವರ್ಷದೊಳಗಿನ ವಿದ್ಯಾರ್ಥಿಗಳು ಜಿಗುಪ್ಸೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ಹೇಳಿದರು.

‘ಕುಟುಂಬ ಹಾಗೂ ಸ್ನೇಹಿತರು ವಿದ್ಯಾರ್ಥಿಗಳ ಸ್ವಭಾವಗಳನ್ನು ಸೂಕ್ಷ್ಮವಾಗಿ ಗಮನದಲ್ಲಿರಿಸಿಕೊಂಡು ಪ್ರೋತ್ಸಾಹ ನೀಡುವ ಕೆಲಸ ಮಾಡಬೇಕು. ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಮಾಡಬೇಕು’ ಎಂದು ತಿಳಿಸಿದರು.

ಭಾರತೀಯ ಕುಟುಂಬ ಯೋಜನಾ ಸಂಸ್ಥೆಯ ಬೀದರ್‌ ಶಾಖೆ ಅಧ್ಯಕ್ಷ ಡಾ ನಾಗೇಶ ಪಾಟೀಲ ಮಾತನಾಡಿ, ‘ವಿದ್ಯಾರ್ಥಿಗಳು ನಿತ್ಯ ವ್ಯಾಯಾಮ, ಸಕಾರಾತ್ಮಕ ವಿಚಾರಗಳಲ್ಲಿ ತೊಡಗಿಸಿಕೊಳ್ಳಬೇಕು. ನಿತ್ಯ ಸಮಯಕ್ಕೆ ಸರಿಯಾಗಿ ಉಪಾಹಾರ ಹಾಗೂ ಊಟ ಮಾಡಬೇಕು. ಕನಿಷ್ಠ 30 ನಿಮಿಷವಾದರೂ ವಾಕ್‌ ಮಾಡಬೇಕು’ ಎಂದು ಹೇಳಿದರು.

‘ಓದುವ ಸಂದರ್ಭದಲ್ಲಿ ಪ್ರೀತಿ, ಪ್ರೇಮ ವಿಷಯಗಳ ಕಡೆಗೆ ಗಮನ ಹರಿಸಬಾರದು. ರಾತ್ರಿಯಿಡೀ ನಿದ್ದೆಗೆಟ್ಟು ಮೊಬೈಲ್ ಬಳಸಬಾರದು. ಮನಸ್ಸನ್ನು ಪ್ರಶಾಂತವಾಗಿಟ್ಟುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಕಾಲೇಜಿನ ಪ್ರಾಚಾರ್ಯ ಡಾ. ಎಂ.ಎಸ್.ಚೆಲ್ವಾ ಅಧ್ಯಕ್ಷತೆ ವಹಿಸಿದ್ದರು. ಎಫ್‌ಪಿಎಐ ಬೀದರ್ ಶಾಖೆ ವ್ಯವಸ್ಥಾಪಕ ಶ್ರೀನಿವಾಸ ಬಿರಾದಾರ, ಕಲಾ ವಿಭಾಗದ ಡೀನ್ ಬಸವರಾಜ ಕೊಡಂಬಲ್, ಆಶಾ ಮುದ್ದಾ, ಅನ್ನಪೂರ್ಣ, ವಿಜಯಲಕ್ಷ್ಮಿ, ಮಾದಯ್ಯ ಸ್ವಾಮಿ, ದಿಲೀಪ್, ಜೆಸ್ಸಿಕಾ ಹಾಗೂ ಗೀತಾ ಪೋಸ್ತೆ ಇದ್ದರು.

ಶಿವಾನಿ ಸ್ವಾಮಿ ಪ್ರಾರ್ಥಿಸಿದರು. ಜ್ಯೋತಿ ಎಸ್.ಕರ್ಪೂರ ಸ್ವಾಗತಿಸಿದರು. ಸಿರಾಜೋದ್ದಿನ್ ನಿರೂಪಿಸಿದರು. ಪ್ರೊ. ಪರಮೇಶ್ವರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT