ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌| ಬಹುಸಂಸ್ಕೃತಿಯ ನೆಲದಲ್ಲಿ ವಿಶಿಷ್ಟ ನವರಾತ್ರಿ ಆಚರಣೆ

ಬಹು ಸಂಸ್ಕೃತಿಯ ನೆಲದಲ್ಲಿ ವಿಶಿಷ್ಟ ಆಚರಣೆ
Last Updated 2 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

ಬೀದರ್‌: ಎರಡು ವರ್ಷ ಎಡೆಬಿಡದೆ ಕಾಡಿದ ಕೋವಿಡ್‌ ಸೋಂಕು ತೊಲಗಿದ ನಂತರ ಜಿಲ್ಲೆಯ ಜನ ನಿರಾಳ ಭಾವ ತಾಳಿ ಸಕಲ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ. ಈಚೆಗಷ್ಟೇ ಗಣೇಶನಿಗೆ ವಿದಾಯ ಹೇಳಿ ಇದೀಗ ಜಗದಂಬೆಯನ್ನು ಬರ ಮಾಡಿಕೊಂಡಿದ್ದಾರೆ. ಬಹು ಸಂಸ್ಕೃತಿಯ ನೆಲದಲ್ಲಿ ವಿಶಿಷ್ಟ ಆಚರಣೆ ಮತ್ತೆ ನೆಲೆಗೊಂಡಿದೆ. ಹಿಂದಿನ ವರ್ಷಗಳಿಗಿಂತ ಈ ಬಾರಿ ನವರಾತ್ರಿ ಸಂಭ್ರಮ ಮುಗಿಲು ಮುಟ್ಟಿದೆ.

ಪರಂಪರೆ ನಗರದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ನಗರದ ದೊಡ್ಡ ಬಡಾವಣೆಗಳಲ್ಲಿ ಭವಾನಿದೇವಿ, ದುರ್ಗಾಮಾತೆಯ ಪ್ರತಿಮೆ ಪ್ರತಿಷ್ಠಾಪಿಸಿ ಭಕ್ತರು ನಿತ್ಯ ಭಕ್ತಿಭಾವದೊಂದಿಗೆ ಪೂಜೆ ಸಲ್ಲಿಸುತ್ತಿದ್ದಾರೆ. ಇದರೊಂದಿಗೆ ಸಾಂಸ್ಕೃತಿಕ, ಸಂಗೀತ, ನೃತ್ಯ ಕಾರ್ಯಕ್ರಮಗಳು ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿವೆ.

ಬೀದರ್‌ನ ವಿದ್ಯಾನಗರದ 11ನೇ ಕ್ರಾಸ್‌ನಲ್ಲಿರುವ ವೈಷ್ಣವಿ ದೇವಿ ಮಂದಿರದ ಆವರಣ, ಮಂಗಲಪೇಟೆಯ ಭವಾನಿ ದೇವಿ ಮಂದಿರ, ಜನರಲ್‌ ಕಾರ್ಯಪ್ಪ ವೃತ್ತ ಸಮೀಪದ ಭವಾನಿ ಮಂದಿರ, ಕೇಂದ್ರ ಬಸ್‌ ನಿಲ್ದಾಣ ಸಮೀಪದ ದೇವಿ ಮಂದಿರ, ಓಲ್ಡ್‌ಸಿಟಿ ದರ್ಜಿ ಗಲ್ಲಿ, ಪ್ರತಾಪನಗರ, ಕುಂಬಾರವಾಡಾ, ಲಾಡಗೇರಿ, ಹಳ್ಳದಕೇರಿ, ಒಳಕೋಟೆ, ಚೌಬಾರಾ, ತಳಘಾಟ್‌, ಅಗ್ರಹಾರ, ಚಿದ್ರಿ ರಸ್ತೆಯಲ್ಲಿ ದುರ್ಗಾದೇವಿಯ ಮೂರ್ತಿ ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸಲಾಗುತ್ತಿದೆ.

ನಗರದ ಝೀರಾ ಫಂಕ್ಷನ್‌ ಹಾಲ್, ಮಂಗಲಪೇಟೆ ಭವಾನಿ ಮಂದಿರ, ವೈಷ್ಣವಿ ದೇವಿ ಮಂದಿರದ ಆವರಣ, ಗುಂಪಾ, ಜ್ಯೋತಿ ಕಾಲೊನಿಯಲ್ಲಿ ಮಹಿಳೆಯರು ಹಾಗೂ ಮಕ್ಕಳು ದಾಂಡಿಯಾ ನೃತ್ಯ ಕಾರ್ಯಕ್ರಮ ನಡೆಸುತ್ತಿದ್ದಾರೆ.

ಮಹಿಳೆಯರು ಸಾಂಪ್ರದಾಯಿಕ ಪೋಷಾಕು ಧರಿಸಿ ನಿತ್ಯ ಕೋಲಾಟ ಆಡಿ ಸಂಭ್ರಮಿಸುತ್ತಿದ್ದಾರೆ. ನಾಟ್ಯಶ್ರೀ ನೃತ್ಯಾಲಯದ ಕಲಾವಿದರು ನಿತ್ಯ ಜಿಲ್ಲೆಯ ವಿವಿಧೆಡೆ ನೃತ್ಯ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ.

ಉತ್ತರ ಭಾರತದಲ್ಲಿ ದಸರಾ ಸಂಭ್ರಮ ಹತ್ತು ದಿನ ನಡೆಯುತ್ತದೆ. ನಗರದಲ್ಲಿ ಉತ್ತರ ಭಾರತದವರು ರಾಮಲೀಲಾ ಆಯೋಜಿಸಿದ್ದಾರೆ. ನಾಟಕದ ಮೂಲಕ ರಾಮಾಯಣದ ಘಟನೆಗಳನ್ನು ಮೆಲುಕು ಹಾಕುತ್ತಿದ್ದಾರೆ. ವಿಜಯದಶಮಿ ದಿನ ಬೀದರ್‌ ಹಾಗೂ ಹುಮನಾಬಾದ್‌ನಲ್ಲಿ ರಾವಣ ದಹನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ರಾಮಲೀಲಾ ಸಮಿತಿಯವರು ಈ ಬಾರಿ ಅದ್ದೂರಿ ಆಚರಣೆಗೆ ತಯಾರಿ ನಡೆಸಿದ್ದಾರೆ.

ರಾವಣ ಪ್ರತಿಕೃತಿ ದಹನ

ಹುಮನಾಬಾದ್: ಪ್ರತಿ ವರ್ಷ ವಿಜಯದಶಮಿ ದಿನ ಪಟ್ಟಣದ ಬಾಲಾಜಿ ಮಂದಿರ ಸೇವಾ ಸಮಿತಿಯಿಂದ ರಾವಣ ಪ್ರತಿಕೃತಿ ದಹನ ಮಾಡುವ ಕಾರ್ಯಕ್ರಮ ನಡೆಯುತ್ತದೆ.

1965 ರಲ್ಲಿ ಇಲ್ಲಿನ ಚಿತ್ರಕಲಾವಿದ ಕಿಶನ್ ಪೇಂಟರ್ ಅವರು ಚಿಕ್ಕದಾಗಿ ಹಾಳೆ ಮೇಲೆ ಚಿತ್ರ ಬಿಡಿಸಿ ರಾವಣ ಸುಡಲು ಶುರು ಮಾಡಿದರು. ನಂತರ ಬಟ್ಟೆಗಳ ಮೇಲೆ ದೊಡ್ಡ ಚಿತ್ರ ಬಿಡಿಸಿ, ಪ್ರತಿಕೃತಿ ತಯಾರಿಸಿ ಮೆರವಣಿಗೆಯಲ್ಲಿ ತಂದು ದಹನ ಮಾಡುವ ಪದ್ಧತಿ ಆರಂಭಿಸಲಾಯಿತು. ಈ ದೃಶ್ಯ ನೋಡಲು ಗ್ರಾಮೀಣ ಪ್ರದೇಶದಿಂದಲೂ ಜನ ಬರಲು ಆರಂಭಿಸಲು ಶುರು ಮಾಡಿದ್ದರಿಂದ ಅದು ವಿರಾಟ ರೂಪ ಪಡೆಯಿತು.

ಈ ಬಾರಿ 26 ಅಡಿ ಎತ್ತರದ ಬಿದಿರಿನಿಂದ ರಾವಣ ಪ್ರತಿಕೃತಿ ನಿರ್ಮಿಸಲಾಗಿದೆ. ಅದಕ್ಕೆ ಚೆಂದದ ಬಟ್ಟೆ ತೊಡಿಸಿ ಅಲಂಕಾರ ಮಾಡಲಾಗಿದೆ. ವಿಜಯದಶಮಿ ದಿನ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ ಕೊನೆಯಲ್ಲಿ ರಾವಣ ದಹನ ಮಾಡಲಾಗುತ್ತದೆ ಎಂದು ದೇವಸ್ಥಾನದ ಕಾರ್ಯದರ್ಶಿ ಗೋಪಾಲ ಕೃಷ್ಣ ಹೇಳುತ್ತಾರೆ.

ಸಹಕಾರ: ಗುಂಡು ಅತಿವಾಳ, ಮಾಣಿಕ ಭೂರೆ, ಮನ್ಮಥ ಸ್ವಾಮಿ, ಬಸವರಾಜ ಪ್ರಭಾ, ಮನೋಜ ಹಿರೇಮಠ, ನಾಗೇಶ ಪ್ರಭಾ, ಬಸವಕುಮಾರ ಕವಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT