ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಗಾಲದಲ್ಲೂ ಬತ್ತದ ರಾಚೋಟೇಶ್ವರ ಮಠದ ಬಾವಿ

ಹಲಬರ್ಗಾ: ಭಕ್ತರ ಶ್ರದ್ಧಾ ಕೇಂದ್ರ ರಾಚೋಟೇಶ್ವರ ಮಠ
Last Updated 21 ಫೆಬ್ರುವರಿ 2021, 4:30 IST
ಅಕ್ಷರ ಗಾತ್ರ

ಭಾಲ್ಕಿ: ತಾಲ್ಲೂಕಿನ ಹಲಬರ್ಗಾ ಗ್ರಾಮದಲ್ಲಿರುವ ಐತಿಹಾಸಿಕ ರಾಚೋಟೇಶ್ವರ ಮಠ ಧಾರ್ಮಿಕ ಕಾರ್ಯಕ್ರಮ ಗಳಿಂದ ಮತ್ತು ಭೀಕರ ಬರಗಾಲದಲ್ಲೂ ಬತ್ತದ ಬಾವಿಯಿಂದ ಪ್ರಸಿದ್ಧಿ ಪಡೆದಿದ್ದು, ಸುತ್ತಮುತ್ತಲಿನ ಗ್ರಾಮಗಳ ಜನರನ್ನು ಶ್ರೀಮಠದತ್ತ ಸೆಳೆಯುತ್ತಿದೆ.

ಗ್ರಾಮದ ಭಾವೈಕ್ಯತೆಯ ಕೇಂದ್ರವಾದ ಹುಲಿಸಿದ್ಧ ಮಂದಿರದಿಂದ ಸಮೀಪವಿರುವ ರಾಚೋಟೇಶ್ವರ ಮಠವೂ ಪ್ರಶಾಂತ ಸ್ಥಳವಾಗಿದ್ದು, ಪ್ರತಿನಿತ್ಯ ನೂರಾರು ಭಕ್ತರು ಶ್ರೀ ಮಠಕ್ಕೆ ಆಗಮಿಸಿ ಸಿದ್ದರಾಮೇಶ್ವರ, ರಾಚೋಟೇಶ್ವರ ಮೂರ್ತಿ, ಬೆಲ್ಲದ ಗಣಪತಿಯ ವಿಗ್ರಹದ ದರ್ಶನ ಪಡೆದು ಪುನೀತರಾಗುತ್ತಾರೆ.

ಗುರು ರಾಚೋಟೇಶ್ವರ ಸಂಸ್ಥಾನ ಮಠಕ್ಕೆ ಐದುನೂರು ವರ್ಷದ ಇತಿಹಾಸವಿದೆ. ಈ ಮಠದ ಸ್ಥಾಪಕರು ಶ್ರೀ ಗುರು ರಾಚೋಟೇಶ್ವರ ಶಿವಯೋಗಿ. ನಂತರ ಬಂದ ಸಿದ್ದರಾಮೇಶ್ವರ ಶಿವಯೋಗಿ, ಕರಿಬಸವೇಶ್ವರ ಶಿವಯೋಗಿ ಭಕ್ತರಿಗೆ ಜ್ಞಾನ ದಾಸೋಹ ನೀಡುತ್ತ ಗುರು ರಾಚೋಟೇಶ್ವರ ಭಕ್ತರ ಉದ್ಧಾರಕ್ಕಾಗಿ ಜೀವಂತ ಸಮಾಧಿ ಆಗಿದ್ದಾರೆ.

‘ಇಂದಿಗೂ ಕೂಡ ನಮ್ಮ ಭಾಗದಲ್ಲಿ ಮಳೆ ಬಾರದೆ ಇದ್ದಾಗ ಗುರು ರಾಚೋಟೇಶ್ವರ ಕರ್ತೃ ಗದ್ದುಗೆಗೆ ಲಕ್ಷ ಬಿಲ್ವಾರ್ಚನೆ ಮಾಡಿದರೆ ಮಳೆ ಬರುತ್ತದೆ. ಕರ್ತೃ ಗದ್ದುಗೆ ಅಂತಹ ಅಪಾರ, ಅದ್ಭುತ ಶಕ್ತಿಯನ್ನು ಹೊಂದಿದೆ’ ಎಂದು ಮಠದ ಪೀಠಾಧಿಪತಿ ಹಾವಗಿಲಿಂಗೇಶ್ವರ ಶಿವಾಚಾರ್ಯರು ತಿಳಿಸುತ್ತಾರೆ.

‘ಗ್ರಾಮದಲ್ಲಿ ನೀರಿನ ಕೊರತೆ ಇದ್ದಾಗ ಸ್ವತಃ ಸಿದ್ದರಾಮೇಶ್ವರರು ತಮ್ಮ ಅಮೃತ ಹಸ್ತದಿಂದ ಬಾವಿಯನ್ನು ತೋಡಿ ಜನರಿಗೆ ನೀರು ಕುಡಿಸಿದ್ದರು. ಈ ಬಾವಿ ಇಂದಿಗೂ ಬತ್ತಿಲ್ಲ. ಎಂತಹುದೇ ಭೀಕರ ಬರಗಾಲ ಬಂದು ಗ್ರಾಮದ ಎಲ್ಲ ಕೊಳವೆಬಾವಿ, ತೆರೆದ ಬಾವಿ ಒಣಗಿದರೂ ರಾಚೋಟೇಶ್ವರ ಮಠದ ಬಾವಿ ನೀರಿಲ್ಲದೆ ಒಣಗಿಲ್ಲ. ಇದು ಶರಣರ ಅದ್ಭುತ ಸಿದ್ಧಿಯ ಫಲ’ ಎಂದು ರಾಚೋಟೇಶ್ವರ ಮಠದ ಮಹಿಮೆ ಕುರಿತು ವಿವರಿಸಿದರು.

ಪ್ರತಿ ವರ್ಷ ಜನವರಿ ತಿಂಗಳು ಗ್ರಾಮದಲ್ಲಿ 11 ದಿನಗಳ ಕಾಲ ನಡೆಯುವನಮ್ಮೂರ ಸಿದ್ದರಾಮೇಶ್ವರ ಜಾತ್ರೆಯಲ್ಲಿ ನಿತ್ಯದ ಜ್ಞಾನ ದಾಸೋಹದ ನಂತರ ಪ್ರಸಾದ ದಾಸೋಹದ ಜವಾಬ್ದಾರಿಯನ್ನು ಸುತ್ತಮುತ್ತಲಿನ ಗ್ರಾಮಗಳಾದ ತೇಗಂಪೂರ, ಜೈನಾಪೂರ, ಕರಡ್ಯಾಳ, ಜ್ಯಾಂತಿ, ಬೀರಿ (ಕೆ) ಭಕ್ತರು ವಹಿಸಿಕೊಳ್ಳುವುದು ವಿಶೇಷ.

ಜಾತ್ರೆ ನಿಮಿತ್ತ ನಿತ್ಯ ಗುರು ರಾಚೋಟೇಶ್ವರ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಗಂಗಾಪೂಜೆ ನಡೆಯುತ್ತವೆ.

‘ಕೇದಾರದ ಭೀಮಾಶಂಕರ ಜಗದ್ಗುರು, ಜಗದ್ಗುರು ನಾಡೋಜ ಡಾ.ಅನ್ನದಾನೀಶ್ವರ ಮಹಾಶಿವಯೋಗಿ, ಜಡೆಶಾಂತಲಿಂಗೇಶ್ವರ ಸ್ವಾಮೀಜಿ, ಅವಧೂತಗಿರಿ ಮಹಾರಾಜ ಸೇರಿದಂತೆ ಅನೇಕ ಪ್ರಸಿದ್ಧ ಮಠಾಧೀಶರು ಶ್ರೀ ಮಠಕ್ಕೆ ಭೇಟಿ ನೀಡಿ, ಭಕ್ತರಿಗೆ ಸನ್ಮಾರ್ಗದತ್ತ ನಡೆಯಲು ಆಶೀರ್ವಚನ ನೀಡಿದ್ದಾರೆ’ ಎಂದು ಗ್ರಾಮದ ಪ್ರಮುಖರಾದ ರಾಜಕುಮಾರ ಚಲುವಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT