ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯರ ಸಾಧನೆ, ಕಿರಿಯರಿಗೆ ಪ್ರೇರಣೆ

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚೆನಶೆಟ್ಟಿ ಅಭಿಮತ
Last Updated 4 ಅಕ್ಟೋಬರ್ 2020, 14:22 IST
ಅಕ್ಷರ ಗಾತ್ರ

ಬೀದರ್: ‘ನಮ್ಮ ಹಿರಿಯ ಜೀವಿಗಳು ಅನುಭವಿಸಿದಂತಹ ಕಷ್ಟ ಹಾಗೂ ಸಾಧನೆಗಳು ಇಂದಿನ ಯುವಕರಿಗೆ ಮನವರಿಕೆ ಮಾಡಿಕೊಡಲು ‘ಮನೆಯಂಗಳದಲ್ಲಿ ಮಾತು’ ಕಾರ್ಯಕ್ರಮ ವೇದಿಕೆಯನ್ನು ಕಲ್ಪಿಸಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚೆನಶೆಟ್ಟಿ ಹೇಳಿದರು.

ನಗರದಲ್ಲಿ ಟಿ.ಜೆ.ಹಾದಿಮನಿ ನಿವಾಸದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಹಾಗೂ ತಾಲ್ಲೂಕು ಘಟಕದ ಆಶ್ರಯದಲ್ಲಿ ಹಮ್ಮಿಕೊಂಡ ‘ಮನೆಯಂಗಳದಲ್ಲಿ ಮಾತು’ 22ನೇ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸಾಹಿತಿಗಳ ಮತ್ತು ಸಾಧಕರ ಮನೆಗೆ ತೆರಳಿ ಕಾರ್ಯಕ್ರಮ ಆಯೋಸಿಜಿಸುವ ಮೂಲಕ ಅವರ ಸಾಧನೆಯ ಬದುಕು-ಬರಹ ಕುರಿತು ಜನರಿಗೆ ತಲುಪಿಸುವ ಕಾರ್ಯ ಕನ್ನಡ ಸಾಹಿತ್ಯ ಪರಿಷತ್ತು ಮಾಡುತ್ತಿದೆ. ಹಿರಿಯರ ಸಾಧನೆ, ಕಿರಿಯರಿಗೆ ಪ್ರೇರಣೆ ನೀಡುತ್ತಿದೆ. ಈ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗುತ್ತಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.

ಸಾಹಿತಿ ಟಿ.ಜೆ. ಹಾದಿಮನಿ ಮಾತನಾಡಿ, ‘ಹುಮನಾಬಾದ್‌ ತಾಲ್ಲೂಕಿನ ಹುಡುಗಿ ಗ್ರಾಮದಲ್ಲಿ ಒಂದರಿಂದ ಏಳನೇ ತರಗತಿ ವರೆಗೆ ಶಿಕ್ಷಣ ಪಡೆದೆ. ನನ್ನ ಮೊದಲ ಗುರು ಸಾಹಿತಿ ದೇಶಾಂಶ ಹುಡುಗಿ ಅವರ ಮೂಲಕ ಅಕ್ಷರ ಜ್ಞಾನ ಹಾಗೂ ಉತ್ತಮ ಸಂಸ್ಕಾರ ಪಡೆದುಕೊಂಡೆ’ ಎಂದು ತಿಳಿಸಿದರು.

‘ಆಗಿನ ಕಾಲದಲ್ಲಿ ಜಾತಿ ಪದ್ಧತಿ ಬಲವಾಗಿ ಬೇರೂರಿತ್ತು. ಮೇಲು-ಕೀಳು ಎನ್ನುವ ತಾರತಮ್ಯಗಳು ಇರುವ ಸಂದರ್ಭದಲ್ಲಿ ಎಲ್ಲ ಸಂಕಷ್ಟಗಳನ್ನು ಬದಿಗೊತ್ತಿ ಶಿಕ್ಷಣ ಮುಂದುವರೆಸಿದೆ. 8ರಿಂದ 10 ನೇ ತರಗತಿ ಚಿಟಗುಪ್ಪದಲ್ಲಿ ವಸತಿ ಶಾಲೆಯಲ್ಲಿ ಉಳಿದು ಪ್ರಥಮವಾಗಿ ಪಾಸಾದೆ’ ಎಂದು ಹೇಳಿದರು.

‘ಶಿಕ್ಷಣ ಪಡೆಯುತ್ತಿರುವಾಗ ಡಾ.ಬಿ.ಆರ್.ಅಂಬೇಡ್ಕರ್ ಕುರಿತ ಒಂದು ನಾಟಕದಲ್ಲಿ ಶಿಕ್ಷಕನ ಪಾತ್ರ ಮಾಡಿದೆ. ಅದಕ್ಕೆ ಅನೇಕ ಜನರು ಮೆಚ್ಚುಗೆ ವ್ಯಕ್ತಪಡಿಸಿದರು. ಇದರಿಂದ ಸಾಹಿತ್ಯ ಕ್ಷೇತ್ರಕ್ಕೆ ಧುಮುಕಲು ಪ್ರೇರಣೆ ದೊರೆಯಿತು’ ಎಂದು ತಿಳಿಸಿದರು.

‘ಭಾಲ್ಕಿಯಲ್ಲಿ ಪದವಿ ಪೂರ್ಣಗೊಳಿಸಿ ಬಿ.ಇಡಿ ಮತ್ತು ಎಂ.ಎ. ಪಾಸಾದೆ. ನಂತರ ಶಿಕ್ಷಕ ವೃತ್ತಿಗೆ ಸೇರಿಕೊಂಡೆ. ಬಿಡುವಿನ ಅವಧಿಯಲ್ಲಿ ಬರೆಯುತ್ತಿದ್ದ ಕವನಗಳನ್ನು ಸಂಗ್ರಹಿಸಿ ‘ಸತ್ಯ’ ಎನ್ನುವ ಕವನ ಸಂಕಲನವನ್ನು ಪ್ರಕಟಿಸಿದೆ. ತದ ನಂತರ ಕವನ ಹಾಗೂ ಬರಹ ಹವ್ಯಾಸವೇ ಆಯಿತು’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್. ಮನೋಹರ ಮಾತನಾಡಿ, ‘ಬಡತನ ಹಾಗೂ ಜಾತಿಯ ಅವಮಾನಗಳನ್ನು ಸಹಿಸಿಕೊಂಡು ಹೊಸ ಬದುಕನ್ನು ಕಟ್ಟಿಕೊಳ್ಳುವಂತಹ ಸಾಮರ್ಥ್ಯ ಇರುವವರೇ ರಾಷ್ಟ್ರಕ್ಕೆ ಮಾರ್ಗದರ್ಶಕರಾಗುತ್ತಾರೆ’ ಎಂದರು.

ಕಸಾಪ ಜಿಲ್ಲಾ ಘಟಕದ ಕೋಶಾಧ್ಯಕ್ಷ ಟಿ.ಎಂ.ಮಚ್ಛೆ, ಶಂಭುಲಿಂಗ ವಾಲ್ದೊಡ್ಡಿ, ಗೌರವ ಕಾರ್ಯದರ್ಶಿ ಡಾ.ಬಸವರಾಜ ಬಲ್ಲೂರ ಸಂವಾದ ನಡೆಸಿಕೊಟ್ಟರು. ಜಗನ್ನಾಥ ಕಮಲಾಪೂರೆ ನಿರೂಪಿಸಿದರು. ಶಿರೋಮಣಿ ತಾರೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT