ಗುರುವಾರ , ಜನವರಿ 21, 2021
23 °C
ಬ್ರಿಮ್ಸ್ ಅವ್ಯವಹಾರ: ರಘುಪತಿ ಭಟ್ ಹೇಳಿಕೆ

ತಿಂಗಳಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬ್ರಿಮ್ಸ್) ಯಲ್ಲಿ ನಡೆದ ನೇಮಕಾತಿ ಹಾಗೂ ಉಪಕರಣ ಖರೀದಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ತಿಂಗಳೊಳಗೆ ತಪ್ಪಿತಸ್ಥರ ವಿರುದ್ಧ ಕ್ರಮ ನಿಶ್ಚಿತ ಎಂದು ವಿಧಾನಸಭೆ ಭರವಸೆಗಳ ಸಮಿತಿಯ ಅಧ್ಯಕ್ಷ ಕೆ. ರಘುಪತಿ ಭಟ್ ತಿಳಿಸಿದರು.

ಸಮಿತಿ ಸದಸ್ಯರೊಂದಿಗೆ ಇಲ್ಲಿಯ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬ್ರಿಮ್ಸ್)ಗೆ ಭೇಟಿ ನೀಡಿ, ಅವ್ಯವಹಾರದ ಪರಿಶೀಲನೆ ನಡೆಸಿದ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಮುಂದಿನ ವಾರ ಬೆಂಗಳೂರಿನಲ್ಲಿ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳ ಸಭೆ ನಡೆಸಲಾಗುವುದು. 12 ವರ್ಷಗಳಾದರೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದಿರಲು ಕಾರಣ ಏನು ಎನ್ನುವ ಕುರಿತು ಚರ್ಚಿಸಲಾಗುವುದು. ಭರವಸೆ ಈಡೇರಿಸುವ ದಿಸೆಯಲ್ಲಿ ಕ್ರಮ ಕೈಗೊಳ್ಳುವಂತೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಿಗೆ ತಿಳಿಸಲಾಗುವುದು ಎಂದು ಹೇಳಿದರು.

ಬ್ರಿಮ್ಸ್‍ನಲ್ಲಿ ಭಾರಿ ಅವ್ಯವಹಾರ ನಡೆದಿರುವುದು ತನಿಖಾ ವರದಿಗಳಿಂದ ಸ್ಪಷ್ಟವಾಗುತ್ತದೆ. ಸಮಿತಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ತಿಳಿಸಿದರು.

ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯ ಆರ್ಥಿಕ ಸಲಹೆಗಾರ ವಿ.ಡಿ. ನಿಶ್ಚಿತ್ ಹಾಗೂ ಜಿಲ್ಲಾ ಪಂಚಾಯಿತಿಯ ಹಿಂದಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಜ್ವಲ್‍ಕುಮಾರ ಘೋಷ್ ಅವರ ಸಮಿತಿಗಳು ಅವ್ಯವಹಾರ ಆರೋಪಗಳ ಕುರಿತು ಪ್ರತ್ಯೇಕ ತನಿಖೆ ನಡೆಸಿ ವರದಿ ಸಲ್ಲಿಸಿದ್ದವು. ಅವುಗಳಲ್ಲಿ ಅನೇಕ ಅವ್ಯವ ಹಾರಗಳು ಬಯಲಾಗಿವೆ ಎಂದರು.

2008ರಲ್ಲಿ ಈಶ್ವರ ಖಂಡ್ರೆ ಹಾಗೂ ಗುರುಪಾದಪ್ಪ ನಾಗಮಾರಪಳ್ಳಿ ಅವರು ಬ್ರಿಮ್ಸ್‌ನ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಕೋಟ್ಯಂತರ ಅವ್ಯವಹಾರ ನಡೆಸಿದ್ದರ ಬಗ್ಗೆ ವಿಧಾನಸಭೆಯಲ್ಲಿ ಪ್ರಶ್ನೆ ಕೇಳಿದ್ದರು. ಆಗಿನ ಸಚಿವರು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವ ಭರವಸೆ ನೀಡಿದ್ದರು. ಬ್ರಿಮ್ಸ್‌ನ 139 ಸಿಬ್ಬಂದಿ ಸಹ ದೂರು ಕೊಟ್ಟಿದ್ದಾರೆ ಎಂದು ತಿಳಿಸಿದರು.

ಹಿಂದಿನ ನಿರ್ದೇಶಕ ಡಾ.ಚೆನ್ನಣ್ಣ, ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ ಶೆಟಕಾರ್, ಹಿಂದಿನ ಸಿಇಒ ಡಾ.ಆನಂದ ಸಾಗರ ರೆಡ್ಡಿ, ಸಹಾಯಕ ಆಡಳಿತ ಅಧಿಕಾರಿ ಅನುಸೂಯಾ, ಕಚೇರಿ ಅಧೀಕ್ಷಕ ಬಾಬು ಕೋಟಿ, ಕಚೇರಿ ಅಧೀಕ್ಷಕ ಪ್ರಕಾಶ ಶರಣಪ್ಪ ಮಡಿವಾಳ, ಪ್ರಥಮ ದರ್ಜೆ ಸಹಾಯಕರಾದ ಪ್ರಕಾಶ ಮಾಳಗೆ, ವರ್ಷಾ ದೇಶಮುಖ, ನಿವೃತ್ತ ಅಧೀಕ್ಷಕ ಕಲ್ಲಪ್ಪ, ದ್ವಿತೀಯ ದರ್ಜೆ ಸಹಾಯಕ ಶಿವಾಜಿ ವಿರುದ್ಧ ಆರೋಪಗಳಿವೆ ಎಂದು ಹೇಳಿದರು.

ತಪ್ಪಿತಸ್ಥರ ವಿರುದ್ಧ ಎಸಿಬಿ ಪ್ರಕರಣ ದಾಖಲಿಸಿದ್ದರೂ ಅವರನ್ನು ಅಮಾನತು ಸಹ ಮಾಡಿಲ್ಲ. ಕೆಲವರು ಬ್ರಿಮ್ಸ್‍ನಲ್ಲಿ ಸೇವೆ ಮುಂದುವರಿಸಿದ್ದಾರೆ. ಅವ್ಯವ ಹಾರದಲ್ಲಿ ಭಾಗಿಯಾದವರನ್ನು ರಕ್ಷಿಸುವ ಕೆಲಸ ನಡೆದಿದೆ ಎಂದು ತಿಳಿಸಿದರು.

ವಿಧಾನಸಭೆ ಭರವಸೆಗಳ ಸಮಿತಿ ಬ್ರಿಮ್ಸ್‍ಗೆ ಭೇಟಿ ಕೊಟ್ಟ ಕಾರಣ ಸರ್ಕಾರ ಈಗ ನಿವೃತ್ತ ನ್ಯಾಯಾಧೀಶ ಸಂಗಪ್ಪ ಎಚ್. ಅವರ ನೇತೃತ್ವದಲ್ಲಿ ಸಮಿತಿ ರಚಿಸಿದ್ದು, ಸಮಿತಿಗೆ ಹೆಚ್ಚುವರಿ ಜಿಲ್ಲಾಧಿಕಾರಿಯನ್ನು ದಂಡಾಧಿಕಾರಿಯಾಗಿ ನೇಮಕ ಮಾಡಲಾಗಿದೆ ಎಂದು ಹೇಳಿದರು.

ವಿಧಾನಸಭೆ ಭರವಸೆಗಳ ಸಮಿತಿಯ ಸದಸ್ಯರಾದ ಸೋಮನಗೌಡ ಪಾಟೀಲ, ಹರೀಶ ಪುಂಜ, ಡಾ. ಕೆ. ಶ್ರೀನಿವಾಸಮೂರ್ತಿ, ದತ್ತಾತ್ರೇಯ ಪಾಟೀಲ ರೇವೂರ, ಸಂಜೀವ ಮಠಂದೂರ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.