ಸೋಮವಾರ, 2 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವ್ಯವಹಾರ ಸಾಬೀತಾದರೆ ನಿರ್ದಾಕ್ಷಿಣ್ಯ ಕ್ರಮ: ಸಚಿವ ಬಿ. ನಾಗೇಂದ್ರ

ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಬಿ. ನಾಗೇಂದ್ರ ಹೇಳಿಕೆ
Published 26 ಜುಲೈ 2023, 14:13 IST
Last Updated 26 ಜುಲೈ 2023, 14:13 IST
ಅಕ್ಷರ ಗಾತ್ರ

ಬೀದರ್‌: ‘ನಗರದ ನೆಹರೂ ಕ್ರೀಡಾಂಗಣದ ನಿರ್ಮಾಣ ಕಾಮಗಾರಿಯಲ್ಲಿ ಒಂದುವೇಳೆ ಅವ್ಯವಹಾರ ನಡೆದಿರುವುದು ಸಾಬೀತಾದರೆ ಸಂಬಂಧಿಸಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು’ ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಬಿ. ನಾಗೇಂದ್ರ ತಿಳಿಸಿದರು.

ನಗರದ ಜಿಲ್ಲಾ ಪಂಚಾಯಿತಿಯಲ್ಲಿ ಬುಧವಾರ ಬೀದರ್‌, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳ ಕ್ರೀಡಾ ಇಲಾಖೆ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಕ್ರೀಡಾಂಗಣದ ನವೀಕರಣ ಕಾಮಗಾರಿಯಲ್ಲಿ ₹8 ಕೋಟಿ ಅವ್ಯವಹಾರ ನಡೆದಿದೆ ಎಂಬ ಆರೋಪಗಳಿದ್ದರೆ ಅದರ ಬಗ್ಗೆ ತನಿಖೆ ನಡೆಸಲಾಗುವುದು. ತನಿಖೆಯಲ್ಲಿ ತಪ್ಪು ಕಂಡು ಬಂದರೆ, ಅವ್ಯವಹಾರ ನಡೆದಿದ್ದರೆ ಖಂಡಿತವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

‌ಸಚಿವನಾದ ನಂತರ ಪ್ರಥಮ ಬಾರಿಗೆ ಬೀದರ್‌ ಜಿಲ್ಲೆಗೆ ಭೇಟಿ ನೀಡಿದ್ದೇನೆ. ಬಸವಣ್ಣನ ನಾಡಿನಿಂದ ನನ್ನ ಕೆಲಸ ಆರಂಭಿಸಿದ್ದೇನೆ. ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿ, ಇಲಾಖೆಯಲ್ಲಿರುವ ನ್ಯೂನತೆಗಳನ್ನು ಸ್ಥಳೀಯ ಜನಪ್ರತಿನಿಧಿಗಳ ಸಹಕಾರದೊಂದಿಗೆ ಬಗೆಹರಿಸಲಾಗುವುದು ಎಂದರು.

ನಗರದ ಜಿಲ್ಲಾ ಒಳ ಕ್ರೀಡಾಂಗಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಲೈಟಿಂಗ್, ಗೋಡೆ ಸೋರುವುದು ಗಮನಕ್ಕೆ ಬಂದಿದೆ. ಜಿಮ್‌ ಕೂಡ ಬಹಳ ಹಳೆಯದಾಗಿದೆ. ಸಮಸ್ಯೆಗಳನ್ನು ಸರಿಪಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಈಜುಕೊಳದ ಸ್ವಚ್ಛತೆಗೆ ಸಂಬಂಧಿಸಿದಂತೆ ದೂರುಗಳು ಬಂದಿವೆ. ಮುಂದಿನ ದಿನಗಳಲ್ಲಿ ಸುಸಜ್ಜಿತ ಒಳ ಕ್ರೀಡಾಂಗಣ ನಿರ್ಮಿಸಿ ಅದರಲ್ಲಿ ಈಜುಕೊಳ ನಿರ್ಮಿಸುವ ಯೋಜನೆ ಇದೆ ಎಂದು ಹೇಳಿದರು.

ಭಾಲ್ಕಿಯಲ್ಲಿ ತಾಲ್ಲೂಕು ಕ್ರೀಡಾಂಗಣ ನಿರ್ಮಿಸಬೇಕೆಂಬ ಬೇಡಿಕೆ ಇದೆ. ಕ್ರೀಡಾಂಗಣಕ್ಕೆ ಈಗಾಗಲೇ ಜಾಗ ಇದೆ. ಅದನ್ನು ಪರಿಶೀಲಿಸಿ, ಅಲ್ಲಿ ತಾಲ್ಲೂಕು ಮಟ್ಟದ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಲಾಗುವುದು ಎಂದರು.

ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಹಾಗೂ ನಿಗಮದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಜನರಿಗೆ ಸಿಗುವಂತಾಗಬೇಕು. ಈ ಇಲಾಖೆಯ ಅಡಿಯಲ್ಲಿರುವ ಯೋಜನೆ ಬಗ್ಗೆ ಜನರಿಗೆ ಹೆಚ್ಚಿನ ಮಾಹಿತಿ ಕೊಡಬೇಕು. ಇಲಾಖೆಯಲ್ಲಿರುವ ಹಣ ಪೋಲಾಗದಂತೆ ನೋಡಿಕೊಳ್ಳಬೇಕು. ಎಲ್ಲಾ ಕೆಲಸಗಳು ಅಚ್ಚುಕಟ್ಟಾಗಿ ನಡೆಯಬೇಕಾದರೆ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಬೇಕು ಎಂದು ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸಿದರು. ನಂತರ ರಾಜಗೊಂಡ ಕಾಲೊನಿಗೆ ಭೇಟಿ ನೀಡಿದರು. ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳ ವಸತಿ ನಿಲಯಕ್ಕೆ ಭೇಟಿ ನೀಡಿ ಮಕ್ಕಳಿಗೆ ನೀಡುತ್ತಿರುವ ಅಹಾರ ಮತ್ತು ಅಲ್ಲಿನ ಸ್ವಚ್ಛತೆಯನ್ನು ಪರಿಶೀಲಿಸಿದರು. ಬೆಳಿಗ್ಗೆ ನಗರದ ನೆಹರೂ ಕ್ರೀಡಾಂಗಣಕ್ಕೆ ಭೇಟಿ ಕೊಟ್ಟು, ಕ್ರೀಡಾಪಟುಗಳಿಂದ ಮಾಹಿತಿ ಪಡೆದರು.

ವಿಧಾನ ಪರಿಷತ್‌ ಸದಸ್ಯರಾದ ಅರವಿಂದಕುಮಾರ ಅರಳಿ, ಡಾ.ಚಂದ್ರಶೇಖರ ಪಾಟೀಲ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಆಯುಕ್ತ ಎನ್.ಶಶಿಕುಮಾರ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ನಿರ್ದೇಶಕ ಕಲ್ಲೇಶಪ್ಪ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಗೌತಮ ಅರಳಿ, ಸಚಿವರ ವಿಶೇಷ ಕರ್ತವ್ಯ ಅಧಿಕಾರಿ ವೆಂಕಟಗಿರಿ ದಳವಾಯಿ, ಮೂರು ಜಿಲ್ಲೆಗಳ ಅಧಿಕಾರಿಗಳು ಹಾಜರಿದ್ದರು.

Quote - ಭ್ರಷ್ಟಾಚಾರ ರಹಿತ ಆಡಳಿತ ನಮ್ಮ ಸರ್ಕಾರದ ಗುರಿ. ಎಲ್ಲರೂ ಒಗ್ಗಟ್ಟಾಗಿದ್ದು ಈ ಸರ್ಕಾರವನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ. –ಬಿ.ನಾಗೇಂದ್ರ ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ

Cut-off box - ‘ಮೆನು ಪ್ರಕಾರ ಆಹಾರ ಕೊಡಿ’ ‘ಹಾಸ್ಟೆಲ್‌ ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ ಕೊಡಬೇಕು. ಮೆನು ಪ್ರಕಾರವೇ ಆಹಾರ ಕೊಡಬೇಕು. ಊಟದಲ್ಲಿ ಹೆಚ್ಚು ಕಮ್ಮಿಯಾದರೆ ಗುತ್ತಿಗೆದಾರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು’ ಎಂದು ಸಚಿವ ಬಿ. ನಾಗೇಂದ್ರ ತಿಳಿಸಿದರು. ಮೆನುವಿನಂತೆ ಗುಣಮಟ್ಟದ ಆಹಾರ ಒದಗಿಸಬೇಕು. ಕಳಪೆ ತರಕಾರಿ ಬಳಸಬಾರದು. ಹಾಸ್ಟೆಲ್‌ನಲ್ಲಿ ಸ್ವಚ್ಛತೆ ಕಾಪಾಡಬೇಕು. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಂದ ದೂರು ಬರದಂತೆ ಎಲ್ಲರೂ ನಿಗಾ ವಹಿಸಬೇಕು. ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಿಂದ ಹೋಬಳಿ ಮಟ್ಟದಲ್ಲಿ ವಾಲ್ಮೀಕಿ ಭವನ ನಿರ್ಮಾಣ ಮಾಡಬೇಕು. ನಿವೇಶನ ಇಲ್ಲದಿದ್ದರೆ ಸರ್ಕಾರಿ ಜಮೀನು ಬಳಸಿಕೊಳ್ಳಬೇಕು. ಅಥವಾ ಸ್ಥಳೀಯ ಶಾಸಕರ ಗಮನಕ್ಕೆ ತಂದು ಬೇರೆ ಕಡೆ ಭವನ ನಿರ್ಮಿಸಬಹುದು ಎಂದರು. ನಗರದ ರಾಜಗೊಂಡ ಕಾಲೊನಿಯ ಹಾಸ್ಟೆಲ್‌ಗೆ ಭೇಟಿ ನೀಡಿ ಸ್ವತಃ ಆಹಾರ ಸೇವಿಸಿ ಆಹಾರದ ಗುಣಮಟ್ಟ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT