ಔರಾದ್: ‘ಹದಿಹರೆಯದ ಯುವಕ ಯುವತಿಯರಲ್ಲಿ ಚಂಚಲ ಮನಸ್ಸು ಇರುತ್ತದೆ. ಹೀಗಾಗಿ ಅದನ್ನು ನಿಗ್ರಹಿಸಿ ಗುರಿ ಮುಟ್ಟುವ ಕುರಿತು ಶಿಕ್ಷಕರು ಸೂಕ್ತ ತಿಳಿವಳಿಕೆ ನೀಡಬೇಕು’ ಎಂದು ಶಾರದಾ ರುಡ್‌ಸೆಟ್ ಜಿಲ್ಲಾ ನಿರ್ದೇಶಕ ಸುಬ್ರಹ್ಮಣ್ಯ ಪ್ರಭು ಹೇಳಿದರು.
ತಾಲ್ಲೂಕಿನ ಸಂತಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಗುರುವಾರ ಫ್ಯಾಮಿಲಿ ಪ್ಲ್ಯಾನಿಂಗ್ ಇಂಡಿಯಾ ಬೀದರ್ ಶಾಖೆ ಹದಿಹರೆಯದ ಯುವಕ ಯುವತಿಯರಿಗಾಗಿ ಆಯೋಜಿಸಿದ ಸಮಗ್ರ ಶಿಕ್ಷಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಯುವಕರಲ್ಲಿ ದೈಹಿಕ, ಮಾನಸಿಕ ಬೆಳವಣಿಗೆ ಸಹಜ. ಇಂತಹ ಸಮಯದಲ್ಲಿ ಸೂಕ್ತ ತಿಳಿವಳಿಕೆ ನೀಡಿ ಬದುಕಿನ ನೈಜತೆ ಅರ್ಥ ಮಾಡಿಸಬೇಕು’ ಎಂದು ಹೇಳಿದರು.
ಎಫ್‌ಪಿಎಐ ಬೀದರ್ ಶಾಖಾ ವ್ಯವಸ್ಥಾಪಕ ಶ್ರೀನಿವಾಸ ಬಿರಾದಾರ,‘ಹದಿಹರೆಯ ವಯಸ್ಸಿನಲ್ಲಿ ಯುವಕರು ದುಶ್ಚಟಗಳಿಂದ ದೂರ ಇರಬೇಕು. ಇಲ್ಲವಾದಲ್ಲಿ ಭವಿಷ್ಯ ಹಾಳಾಗುತ್ತದೆ’ ಎಂದು ಸಲಹೆ ನೀಡಿದರು.
ಸಂಪನ್ಮೂಲ ಅಧಿಕಾರಿ ವಿಜಯಲಕ್ಷ್ಮಿ ಮಾತನಾಡಿ,‘ಯುವಕ-ಯುವತಿಯರಿಗೆ ಈ ವಯಸ್ಸಿನಲ್ಲಿ ತಂದೆ-ತಾಯಿ ಹಾಗೂ ಗುರು ಹಿರಿಯರ ಮಾರ್ಗದರ್ಶನ ಅಗತ್ಯ. ಯಾವುದೇ ಕಾರಣಕ್ಕೂ ಅವರ ಸಲಹೆ ಸೂಚನೆ ಹಗುರವಾಗಿ ಪರಿಗಣಿಸಬಾರದು’ ಎಂದು ಹೇಳಿದರು.