ಮಂಗಳವಾರ, ಜೂನ್ 28, 2022
28 °C
ಬಿತ್ತನೆ ಬೀಜ ವಿತರಣೆಗೆ ಶಾಸಕ ‌ರಾಜಶೇಖರ ಪಾಟೀಲ ‌ಚಾಲನೆ

ರಾಜೇಶ್ವರ: ಕೂರಿಗೆಯಿಂದ ಬಿತ್ತನೆ ಮಾಡಲು ರೈತರಿಗೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಸವಕಲ್ಯಾಣ: ತಾಲ್ಲೂಕಿನ ರಾಜೇಶ್ವರದಲ್ಲಿ ಸೋಮವಾರ ಶಾಸಕ ರಾಜಶೇಖರ ಪಾಟೀಲ ಬಿತ್ತನೆ‌ ಬೀಜ ವಿತರಣೆಗೆ ಚಾಲನೆ ನೀಡಿದರು.

ನಂತರ ಅವರು ಮಾತನಾಡಿ, ‘ಕೋವಿಡ್‌ನಂಥ ಸಂಕಷ್ಟದ ಸ್ಥಿತಿಯಲ್ಲಿ ರೈತರು ಹಲವಾರು ಸಮಸ್ಯೆಗಳಿಂದ ಕಂಗೆಟ್ಟಿದ್ದಾರೆ. ಸರ್ಕಾರ ಕಳೆದ ಹಂಗಾಮಿನಲ್ಲಿ ಕಳಪೆ ಗುಣಮಟ್ಟದ ಬೀಜ ಕೊಟ್ಟು ರೈತರ ಜೊತೆ ಚೆಲ್ಲಾಟವಾಡಿದೆ. ಸಂಪೂರ್ಣ ಕಬ್ಬಿನ ಬಿಲ್ ಪಾವತಿ ಮಾಡಿಲ್ಲ’ ಎಂದರು.

‘ಬೀಜ ಪಡೆದ ರೈತರು ತಜ್ಞರ ಸಲಹೆಯಂತೆ ಕೂರಿಗೆಯಿಂದ ಬಿತ್ತನೆ ಮಾಡಬೇಕು. ಬಿತ್ತನೆಗೆ ಮುಂಚೆ 50 ಬೀಜಗಳನ್ನು ಮಣ್ಣಿನಲ್ಲಿ ಹಾಕಿ ಪರೀಕ್ಷಿಸಿದ ನಂತರ ಬಿತ್ತನೆ ಮಾಡಬೇಕು’ ಎಂದು ಸಲಹೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ, ‌ಮುಖಂಡ ವೀರಣ್ಣ ಪಾಟೀಲ, ಲಕ್ಷ್ಮಣರಾವ್ ಬುಳ್ಳಾ, ಇಒ ಬೀರೇಂದ್ರ ಸಿಂಗ್, ಕೃಷಿ‌ ಸಹಾಯಕ ನಿರ್ದೇಶಕ ವೀರಶೆಟ್ಟಿ‌ ರಾಠೋಡ, ಗುರುರಾಜ ಮೂಲಗೆ, ಸಂತೋಷ ಸೀಗಿ, ಮಾಣಿಕ ಫಾಂಗ್ರೆ, ಅಜೀಂ ಇನಾಮದಾರ್, ಅಹ್ಮದ್ ಸಾಬ್, ಮಂಜುನಾಥ ಹಾಜರಿದ್ದರು.

‘ಮುಂಗಾರು ಆಶಾದಾಯಕ’

ಕಮಲನಗರ: ‘ಪ್ರಸ್ತುತ ವರ್ಷ ಮುಂಗಾರು ಹಂಗಾಮು ಆಶಾದಾಯಕ ವಾಗಿದ್ದು, ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಕೊರತೆ ಆಗದಂತೆ ಕೃಷಿ ಅಧಿಕಾರಿಗಳು ನೋಡಿಕೊಳ್ಳಬೇಕು’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಗಿರೀಶ ಒಡೆಯರ್ ಹೇಳಿದರು.

ತಾಲ್ಲೂಕಿನ ಠಾಣಾಕುಶನೂರು ರೈತ ಸಂಪರ್ಕ ಕೇಂದ್ರದಲ್ಲಿ ಈಚೆಗೆ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಹಾಯಕ ಕೃಷಿ ಅಧಿಕಾರಿ ಕೃಷ್ಣ ಅಮಲಪುರೆ ಮಾತನಾಡಿದರು.

ಗ್ರಾ.ಪಂ ಅಧ್ಯಕ್ಷೆ ಚಂದ್ರಕಲಾ ಧನರಾಜ, ಸದಸ್ಯ ಕಾಶಿನಾಥ ಜಿರ್ಗೆ, ಅಬ್ದುಲ್ಲಾ, ಮನೋಜಕುಮಾರ ಬಿರಾದಾರ, ರಾಜಕುಮಾರ ಬಿರಾದಾರ, ಮಹೇಶ ಕೋಟೆ, ಸೂರ್ಯಕಾಂತ ವಾಗ್ಮಾರೆ, ಎಂ.ಜಲೀಲ, ದಿನೇಶ ಡಿಗ್ಗೆ, ಸಂಜುಕುಮಾರ ಶಾಂತಪ್ಪ, ಗುಂಡಪ್ಪ ಬಿರಾದಾರ ಇದ್ದರು.

‘ಉತ್ತಮ ಮಳೆ ನಂತರ ಬಿತ್ತನೆ ಮಾಡಿ’

ಕಮಲನಗರ: ‘ಸಮರ್ಪಕ ಮಳೆ ಆದ ನಂತರವೇ ರೈತರು ಬಿತ್ತನೆ ಕಾರ್ಯ ಕೈಗೊಳ್ಳಬೇಕು’ ಎಂದು ಗ್ರಾ.ಪಂ ಅಧ್ಯಕ್ಷ ಶಿವರಾಜ ಜುಲ್ಫೆ ಸಲಹೆ ನೀಡಿದರು.

ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಈಚೆಗೆ ಮುಂಗಾರು ಹಂಗಾಮು ಬಿತ್ತನೆ ಬೀಜ ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜ್ಯ ರೈತ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ ಪ್ರವೀಣ ಕುಲಕರ್ಣಿ, ಕೃಷಿ ಅಧಿಕಾರಿ ಇಂದಿರಾಬಾಯಿ ಅಕ್ಕಲಕೋಟ್, ಆರೋಗ್ಯ ಸಲಹಾ ಸಮಿತಿ ಸದಸ್ಯ ಸುಭಾಷ ಮಿರ್ಚೆ, ಮಹಾದೇವ ಬಿರಾದಾರ, ಧರ್ಮೇಂದ್ರ ಬಿರಾದಾರ, ಪಂಡಿತ ಪಾಟೀಲ, ರಾಜಕುಮಾರ ಗಾಯಕವಾಡ್, ಸಾಯಿನಾಥ ಕಾಂಬಳೆ, ಪ್ರವೀಣ ಚಾಂಗೋಣೆ, ರಾಜಶೇಖರ, ಸಂಜೀವಕುಮಾರ ಬೆಣ್ಣೆ, ಯುವರಾಜ ಬಾಲೂರು, ಶಿವಪುತ್ರ ಇದ್ದರು.

‘ರೈತರ ಸುರಕ್ಷತೆಗೆ ಆದ್ಯತೆ ಕೊಡಿ’

ಬೀದರ್: ‘ಕೋವಿಡ್ ಪ್ರಯುಕ್ತ ಜಿಲ್ಲೆಯ ಬಿತ್ತನೆ ಬೀಜ ವಿತರಣಾ ಕೇಂದ್ರಗಳಲ್ಲಿ ರೈತರ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು’ ಎಂದು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ)ಯ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಮುಧೋಳ ಒತ್ತಾಯಿಸಿದ್ದಾರೆ.

‘ಬಿತ್ತನೆ ಬೀಜ ಹಾಗೂ ರಸಗೊಬ್ಬರ ಖರೀದಿಗಾಗಿ ನಿತ್ಯ ನೂರಾರು ಜನ ರೈತ ಸಂಪರ್ಕ ಕೇಂದ್ರ ಹಾಗೂ ಹೆಚ್ಚುವರಿ ಬೀಜ ವಿತರಣೆ ಕೇಂದ್ರಗಳಿಗೆ ತೆರಳುತ್ತಿದ್ದಾರೆ. ಕೋವಿಡ್ ಸೋಂಕು ಹರಡುವಿಕೆ ಭೀತಿಯ ಕಾರಣ ಸುರಕ್ಷತಾ ನಿಯಮಗಳ ಪಾಲನೆಯೊಂದಿಗೆ ಬೀಜ ಹಾಗೂ ರಸಗೊಬ್ಬರ ವಿತರಣೆ ಮಾಡಬೇಕು’ ಎಂದು ಹೇಳಿದ್ದಾರೆ.

‘ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಸೋಯಾಬೀನ್, ಉದ್ದು, ಹೆಸರು ಬೀಜಗಳಿಗೆ ಹೆಚ್ಚು ಬೇಡಿಕೆ ಇದೆ. ಈಚಿನ ವರ್ಷಗಳಲ್ಲಿ ಸೋಯಾಬೀನ್ ಬೆಳೆಯುವ ರೈತರ ಸಂಖ್ಯೆ ಅಧಿಕವಾಗಿದೆ. ಕಾರಣ, ರೈತರಿಗೆ ಯಾವುದೇ ಬೀಜದ ಕೊರತೆಯಾಗದಂತೆ ನೋಡಿಕೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.

ಬಿತ್ತನೆ ಬೀಜ ಸದ್ಬಳಕೆಗೆ ಸಲಹೆ

ಚಿಟಗುಪ್ಪ: ‘ರೈತರು ರೈತ ಸಂಪರ್ಕ ಕೇಂದ್ರಗಳ ಮೂಲಕ ಪಡೆಯುವ ಬಿತ್ತನೆ ಬೀಜಗಳನ್ನು ಇತರರಿಗೆ ದುಬಾರಿ ಬೆಲೆಗೆ ಮಾರಾಟ ಮಾಡಬಾರದು’ ಎಂದು ಗ್ರಾ.ಪಂ ಅಧ್ಯಕ್ಷೆ ಪಾರ್ವತಿ ವಿಠಲರಾವ್‌ ಹೇಳಿದರು.

ತಾಲ್ಲೂಕಿನ ಮುಸ್ತರಿ ಗ್ರಾಮದಲ್ಲಿ ಬೀಜ ವಿತರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ‘ರಿಯಾಯಿತಿ ದರದಲ್ಲಿ ದೊರೆಯುವ ಬೀಜಗಳನ್ನು ತಮಗೆ ಅವಶ್ಯಕತೆ ಇದ್ದಷ್ಟು ಮಾತ್ರ ಖರೀದಿಸಬೇಕು. ಎಲ್ಲರಿಗೂ ಸಮರ್ಪಕವಾಗಿ ಲಭ್ಯವಾಗುವ ಹಾಗೆ ಸಹಕರಿಸಬೇಕು’ ಎಂದರು.

ಟಿಎಪಿಸಿಎಂಎಸ್ ನಿರ್ದೇಶಕ ವೀರೇಶ್ ತುಗಾಂವ್‌, ಗ್ರಾಮ ಪಂಚಾಯಿತಿ ಸದಸ್ಯರಾದ ಮೊಯಿನೊದ್ದಿನ್‌ ಸಾಬ್‌, ಈರಪ್ಪ ತುಗಾಂವ್, ಸಿದ್ದು, ಭೀಮರಾವ್ ಬಿರಾದಾರ, ಎಂ.ಡಿ. ಗೌಸ್, ನಾಗಶೆಟ್ಟಿ ಈಟಿ, ಪ್ರಾಥಮಿಕ ಪತ್ತಿನ ಸಹಕಾರ ಸಂಘದ ಸದಸ್ಯ ನೂರೊಂದಪ್ಪ ಪಾಟೀಲ, ಗಣ್ಯರಾದ ಗುಂಡೆರಾವ್ ಕುಲಕರ್ಣಿ, ಪ್ರಕಾಶ್ ಬ್ಯಾಲಳ್ಳಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು