ಶನಿವಾರ, ಸೆಪ್ಟೆಂಬರ್ 26, 2020
27 °C
ನಿರ್ವಹಣಾ ಕ್ರಮ ಅನುಸರಿಸಲು ರೈತರಿಗೆ ಕೃಷಿ ವಿಜ್ಞಾನಿಗಳ ಸಲಹೆ

ಬೀದರ್ | ಸೋಯಾ ಬೆಳೆಗೆ ಹಸಿರು ಹೇನಿನ ಬಾಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜನವಾಡ: ಬೀದರ್ ತಾಲ್ಲೂಕು ಸೇರಿದಂತೆ ಜಿಲ್ಲೆಯ ವಿವಿಧೆಡೆ ಸೋಯಾ ಅವರೆಯಲ್ಲಿ ಹಸಿರು ಹೇನಿನ ಬಾಧೆ ಕಂಡು ಬಂದಿದೆ.

ಜನವಾಡ, ಕಮಲನಗರ, ಸಂತಪುರ, ಲಖ್ಖನಗಾಂವ, ಖಟಕಚಿಂಚೋಳಿ, ಹುಲಸೂರು, ನಿರ್ಣಾ, ಹಳ್ಳಿಖೇಡ(ಬಿ), ಬೇಮಳಖೇಡ ಮೊದಲಾದ ರೈತ ಸಂಪರ್ಕ ಕೇಂದ್ರಗಳ ವ್ಯಾಪ್ತಿಯ ಗ್ರಾಮಗಳಲ್ಲಿ ನಾಲ್ಕು ಐದು ದಿನಗಳಿಂದ ಸೋಯಾಗೆ ಹಸಿರು ಹೇನು ಬಾಧಿಸುತ್ತಿರುವುದನ್ನು ಬೆಳೆ ಸಮೀಕ್ಷೆ ನಡೆಸಿದ ಜನವಾಡದ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ತಂಡ ಪತ್ತೆ ಹಚ್ಚಿದೆ.

ಪ್ರಸಕ್ತ ಹಂಗಾಮಿನಲ್ಲಿ ಉತ್ತಮ ಮಳೆಯಾಗಿದೆ. ಜಿಲ್ಲೆಯ 1.79 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸೋಯಾ ಅವರೆ ಬೆಳೆಯಲಾಗಿದೆ. ಬೆಳೆ ಸುಮಾರು 55 ರಿಂದ 60 ದಿನಗಳ ಅವಧಿಯದ್ದಾಗಿದೆ. ಆದರೆ, ಹಸಿರು ಹೇನಿನ ಕಾಟ ರೈತರನ್ನು ಚಿಂತೆಗೀಡು ಮಾಡಿದೆ.

ಹಸಿರು ಹೇನನ್ನು ವೈಜ್ಞಾನಿಕವಾಗಿ ಎಫಿಸ್ ಗ್ಲೈಸಿನ್ಸ್ ಎಂದು ಕರೆಯಲಾಗುತ್ತದೆ. ಪ್ರೌಢಕೀಟಗಳು ತಿಳಿ ಹಸಿರು ಬಣ್ಣದ್ದಾಗಿರುತ್ತವೆ. ರೆಕ್ಕೆಗಳನ್ನು ಹೊಂದಿದ್ದು, 2 ಮಿ.ಮೀ ಉದ್ದ ಇರುತ್ತವೆ. ಮರಿಕೀಟಗಳು ಚಿಕ್ಕದ್ದಾಗಿರುತ್ತವೆ. ಗಂಡು ಮತ್ತು ಹೆಣ್ಣಿನ ಸಂಯೋಗ ಹೊಂದದೆ ಇವುಗಳ ಸಂತಾನೋತ್ಪತ್ತಿ ಆಗುತ್ತದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಸುನೀಲಕುಮಾರ ಎನ್.ಎಂ. ತಿಳಿಸಿದರು.

ಬಾಧೆಯ ಲಕ್ಷಣ: ಹೇನುಗಳು ಎಳೆಯ ಕಾಂಡ, ಸುಳಿ, ಹೂವು ಮತ್ತು ಕಾಯಿಗಳ ಮೇಲೆ ಗುಂಪು ಗುಂಪಾಗಿ ನೆಲೆಸುತ್ತವೆ. ಬೆಳೆಯ ಮೃದುವಾದ ಭಾಗದಿಂದ ಮರಿಗಳು ಹಾಗೂ ಪ್ರೌಢ ಕೀಟಗಳು ರಸ ಹೀರಿ ಬೆಳವಣಿಗೆ ಕುಗ್ಗಿಸುತ್ತವೆ ಎಂದು ಹೇಳಿದರು.

ಈ ಕೀಟಗಳು ಬಾಧಿತ ಗಿಡದಿಂದ ರಸಹೀರಿ ಜೇನಿನಂತಹ ದ್ರವವನ್ನು ವಿಸರ್ಜಿಸುವುದರಿಂದ ಕೆಳ ಭಾಗದ ಎಲೆಗಳು ಮಿಂಚುವಂತೆ ಕಂಡು ಬರುತ್ತದೆ. ಅವುಗಳ ಮೇಲೆ ಕಪ್ಪು ಬೂಸ್ಟ್ ಬೆಳೆದು ಸಸ್ಯಗಳ ಆಹಾರ ತಯಾರಿಕೆ ಕಾರ್ಯದಲ್ಲಿ ವ್ಯತ್ಯಯ ಉಂಟಾಗಿ, ಇಳುವರಿಯಲ್ಲಿ ಗಣನೀಯ ಇಳಿಕೆ ಕಂಡು ಬರುತ್ತದೆ. ಅಧಿಕ ಬಾಧೆಗೆ ಒಳಗಾದ ಸಸ್ಯಗಳ ಎಲೆಗಳು ಮುಟುರಿಕೊಳ್ಳುತ್ತವೆ ಎಂದು ತಿಳಿಸಿದರು.

ಕೀಟಗಳ ನಿರ್ವಹಣೆಗಾಗಿ ಡೈಮಿಥೊಯೇಟ್ ಪ್ರತಿ ಲೀಟರ್‌ ನೀರಿಗೆ 1.75 ಮಿ.ಲೀ. ಅಥವಾ ಇಮಿಡಾಕ್ಲೋಪ್ರಿಡ್ 17.8 ಎಸ್.ಎಲ್. ಪ್ರತಿ ಲೀಟರ್‌ ನೀರಿಗೆ 0.3 ಮಿ.ಲೀ ಅಥವಾ ಅಸಿಟಾವಪ್ರಿಡ್ ಪ್ರತಿ ಲೀಟರ್‌ ನೀರಿಗೆ 0.2 ಗ್ರಾಂ ಅಥವಾ ಅಸಿಫೇಟ್ ಪ್ರತಿ ಲೀಟರ್‌ ನೀರಿಗೆ 1.0 ಗ್ರಾಂ ಬೆರೆಸಿ ಸಿಂಪಡಿಸಬೇಕು. ಅಥವಾ ಜೈವಿಕ ಶಿಲೀಂದ್ರ ಕೀಟನಾಶಕ ಲೆಕ್ಯಾನಿಸಿಲಿಯಮ್ ಲೆಕ್ಯಾನಿ 4 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಇಲ್ಲವೇ ಶೇ 5ರ ಬೇವಿನ ಬೀಜದ ಕಶಾಯವನ್ನು ಸಿಂಪಡಿಸಬೇಕು ಎಂದು ಸಲಹೆ ಮಾಡಿದರು.

ಕ್ಷೇತ್ರ ವೀಕ್ಷಣೆ ತಂಡದಲ್ಲಿ ಕೃಷಿ ವಿಜ್ಞಾನಿಗಳಾದ ಡಾ. ಆರ್.ಎಲ್. ಜಾಧವ್, ಡಾ. ಮಲ್ಲಿಕಾರ್ಜುನ ನಿಂಗದಳ್ಳಿ, ಡಾ. ಅಕ್ಷಯಕುಮಾರ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು