ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ನಂತರ ರಾಜಕೀಯ ಚಿತ್ರಣ ಬದಲು: ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ

Last Updated 26 ಜನವರಿ 2019, 15:14 IST
ಅಕ್ಷರ ಗಾತ್ರ

ಬೀದರ್‌: ‘ದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದ್ದು, ಸ್ವಲ್ಪ ದಿನಗಳಲ್ಲಿ ಬಿರುಗಾಳಿ ಎಬ್ಬಿಸಲಿದೆ. ಲೋಕಸಭೆ ಚುನಾವಣೆಯಲ್ಲಿ ಸುನಾಮಿಯಾಗಿ ಪರಿವರ್ತನೆಗೊಂಡು ದೇಶದ ರಾಜಕೀಯ ಚಿತ್ರಣವನ್ನೇ ಬದಲಿಸಲಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.

ಜಿಲ್ಲೆಯ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಡಾ.ಬಿ.ಆರ್.ಅಂಬೇಡ್ಕರ್‌ ವೃತ್ತದಲ್ಲಿ ಶನಿವಾರ ಏರ್ಪಡಿಸಿದ್ದ ‘ಸಂವಿಧಾನ ಸಂರಕ್ಷಿಸಿ ಪ್ರಜಾಪ್ರಭುತ್ವ ಉಳಿಸಿ’ ಸಮಾವೇಶದಲ್ಲಿ ಅವರು ಮಾತನಾಡಿದರು.

‘ದೇಶದಲ್ಲಿ ಬೇರೂರಿರುವ ಕೋಮುವಾದಿ ಹಾಗೂ ಜಾತಿವಾದಿ ಶಕ್ತಿಯನ್ನು ಬೇರು ಸಹಿತ ಕಿತ್ತೆಸೆಯಲು ಪ್ರತಿಯೊಬ್ಬರು ಸಂಕಲ್ಪ ಮಾಡಬೇಕಿದೆ. ಅಂದಾಗ ಮಾತ್ರ 2019ರಲ್ಲಿ ಒಳ್ಳೆಯ ದಿನಗಳನ್ನು ಕಾಣಲು ಸಾಧ್ಯವಿದೆ’ ಎಂದರು.

‘ಆಳುವ ಸರ್ಕಾರಗಳು ಸಂವಿಧಾನದ ಆಶಯ ಈಡೇರಿಸಿದರೆ ದೇಶದಲ್ಲಿ ಬಡತನ ಹಾಗೂ ಜಾತೀಯತೆ ಇರಲಾರದು. ಕೋಮುವಾದಿ ಶಕ್ತಿಗಳು ಸಂವಿಧಾನ ವಿರೋಧಿ ಮಾರ್ಗದಲ್ಲಿ ಸಾಗುತ್ತಿರುವುದರಿಂದ ಸಮಸ್ಯೆಗಳು ಜಟಿಲಗೊಳ್ಳುತ್ತಿವೆ’ ಎಂದು ಟೀಕಿಸಿದರು.

‘ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸೇಡಿನ ರಾಜಕೀಯ ಮಾಡುತ್ತಿದೆ. ವಾಕ್‌ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿದೆ. ಪತ್ರಿಕಾ ಸ್ವಾತಂತ್ರ್ಯದ ಮೇಲೂ ದಾಳಿ ಮಾಡುತ್ತಿದೆ. ಒಳ್ಳೆಯವರ ಕೈಯಲ್ಲಿ ಆಡಳಿತ ಕೊಟ್ಟರೆ ಮಾತ್ರ ದೇಶ ಪ್ರಗತಿ ಸಾಧಿಸಲು ಸಾಧ್ಯವಿದೆ ಎಂದು ಅಂಬೇಡ್ಕರ್‌ ಅವರೇ ಹೇಳಿದ್ದಾರೆ. ಆದ್ದರಿಂದ ಬರುವ ಚುನಾವಣೆಯಲ್ಲಿ ಒಳ್ಳೆಯ ವ್ಯಕ್ತಿಗಳನ್ನು ಆಯ್ಕೆ ಮಾಡಲು ಪಣ ತೊಡಬೇಕು’ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ ಮಾತನಾಡಿ, ‘ಡಾ.ಅಂಬೇಡ್ಕರ್‌ ಅವರು ಮೀಸಲಾತಿ ಇಲ್ಲದ ಸಮಯದಲ್ಲಿ ಪರಿಶ್ರಮದಿಂದ ಅಧ್ಯಯನ ಮಾಡಿ ಅನೇಕ ಪದವಿಗಳನ್ನು ಪಡೆದು ಸಂವಿಧಾನವನ್ನೂ ಬರೆದರು. ಅವರು ನಮಗೆ ಪ್ರೇರಕ ಶಕ್ತಿಯಾಗಿದ್ದಾರೆ’ ಎಂದು ಬಣ್ಣಿಸಿದರು.

‘ಬಿಜೆಪಿಯವರು ಸಂವಿಧಾನ ಬದಲಾವಣೆ ಕುರಿತು ಮಾತನಾಡಿದ್ದಾರೆ. ಪ್ರಚೋದನಕಾರಿ ಹೇಳಿಕೆ ನೀಡುವವರು ಹತ್ತು ಜನ್ಮ ಪಡೆದರೂ ಸಂವಿಧಾನ ಬದಲಾವಣೆ ಮಾಡಲು ಸಾಧ್ಯವಿಲ್ಲ’ ಎಂದರು.

ಡಾ.ಬಿ.ಆರ್. ಅಂಬೇಡ್ಕರ್ ಅವರ ಮರಿಮೊಮ್ಮಗ ರಾಜರತ್ನ ಅಂಬೇಡ್ಕರ್ ಮಾತನಾಡಿ, ‘ಛತ್ರಪತಿ ಶಿವಾಜಿ ಮಹಾರಾಜರು ಜನತೆಯ ರಾಜನಾಗಿ ಗುರುತಿಸಿಕೊಂಡಿದ್ದರು. ಎಲ್ಲ ಸಮಾಜದ ಹಿತ ಬಯಸಿದ್ದರು. ಬಾಬಾಸಾಹೇಬ ಅಂಬೇಡ್ಕರ್ ಅವರು ಬಡ, ಶೋಷಿತ ಸಮಾಜದ ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು ಸಂವಿಧಾನ ರಚಿಸಿದ್ದಾರೆ. ಪ್ರತಿಯೊಬ್ಬ ವ್ಯಕ್ತಿ, ಸಮಾಜ ಹಾಗೂ ಧರ್ಮಕ್ಕೆ ಸಮಾನತೆಯನ್ನು ಕಲ್ಪಿಸಿದ್ದಾರೆ. ಅಂತೆಯೇ ಇದು ವಿಶ್ವದ ಶ್ರೇಷ್ಠ ಸಂವಿಧಾನವಾಗಿ ಗುರುತಿಸಿಕೊಂಡಿದೆ’ ಎಂದು ತಿಳಿಸಿದರು.

ರಾಜ್ಯಸಭಾ ಸದಸ್ಯ ಎಚ್. ಹಣಮಂತಯ್ಯ, ‘ವಿಶ್ವದ ಶ್ರೇಷ್ಠ ಸಂವಿಧಾನ ನಮ್ಮದಾಗಿದೆ. ಪ್ರತಿಯೊಬ್ಬರಿಗೂ ಆಡಳಿತದಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಶ್ರೀಮಂತ ಹಾಗೂ ಬಡವ ಎನ್ನದೆ ಎಲ್ಲರಿಗೂ ಒಂದೇ ಮತಮೌಲ್ಯವನ್ನು ನೀಡಿದೆ. ಸರ್ಕಾರವನ್ನು ರಚಿಸುವ ಹಾಗೂ ಉರುಳಿಸುವ ಪ್ರಬಲವಾದ ಮತ ಅಸ್ತ್ರವನ್ನು ಜನ ಸಾಮಾನ್ಯನ ಕೈಗೆ ನೀಡಿದೆ’ ಎಂದು ಹೇಳಿದರು.

ಮೌಲಾನಾ ಅಸ್ಜದ್ ಖಾಸ್ಮಿ ನದ್ವಿ ಮದಾನಿ ಮಾತನಾಡಿ, ‘ಬಾಬಾಸಾಹೇಬರು ಮನುಷ್ಯತ್ವದ ಮೌಲ್ಯವನ್ನು ಅರಿತುಕೊಂಡು ಸಂವಿಧಾನ ಬರೆದಿದ್ದಾರೆ. ಸಂವಿಧಾನದಲ್ಲಿ ಮಾನವೀಯ ಕಳಕಳಿ , ಪ್ರೀತಿ ಹಾಗೂ ಭ್ರಾತೃತ್ವಕ್ಕೆ ಮಹತ್ವ ನೀಡಲಾಗಿದೆ’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ, ವಿಧಾನ ಪರಿಷತ್‌ ಸದಸ್ಯ ವಿಜಯಸಿಂಗ್,
ಕಾಂಗ್ರೆಸ್‌ ಮುಖಂಡ ಬಸವರಾಜ ಬುಳ್ಳಾ, ಜಿಲ್ಲಾ ಪಂಚಾಯಿತಿ ಸದಸ್ಯೆ ಗೀತಾ ಚಿದ್ರಿ, ಮನ್ನಾನ್‌ ಸೇಠ, ಸಮಿತಿಯ ಗೌರವ ಅಧ್ಯಕ್ಷ ಆನಂದ ದೇವಪ್ಪ ಹಾಗೂ ಅಧ್ಯಕ್ಷ ಅಮೃತರಾವ್‌ ಚಿಮಕೋಡ, ಸಮಿತಿಯ ಮಹಾ ಪ್ರಧಾನ ಕಾರ್ಯಾದರ್ಶಿ ಅನಿಲಕುಮಾರ ಬೆಲ್ದಾರ್, ಪ್ರಚಾರ ಸಮಿತಿ ಅಧ್ಯಕ್ಷ ಬಾಬುರಾವ್ ಪಾಸ್ವಾನ್, ಇರ್ಷಾದ್‌ಅಲಿ ಪೈಲ್ವಾನ್, ಮಹೇಶ ಗೋರನಾಳಕರ್, ಅಶೋಕ ಮಾಳಗೆ, ಸುಬ್ಬಣ್ಣ ಕರಕನಳ್ಳಿ, ಪಂಡಿತ ಚಿದ್ರಿ , ಗಂಗಮ್ಮ ಪುಲೆ ಹಾಗೂ ಲಿಂಗಾಯತ ಸಮಾಜದ ಶಾಂತಾಬಾಯಿ ಬಿರಾದಾರ್ ಹಾರೂರಗೇರಿ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT