ಮಂಗಳವಾರ, ನವೆಂಬರ್ 12, 2019
27 °C
ಪರ್ಯಾಯ ವ್ಯವಸ್ಥೆಯಿಲ್ಲದೇ ಪರಿಹಾರ ಕಾಣದ ಸಮಸ್ಯೆ

ರಸ್ತೆಯಲ್ಲಿ ರಾಶಿ: ವಾಹನ ಸಂಚಾರಕ್ಕೆ ಅಡ್ಡಿ

Published:
Updated:
Prajavani

ಕಮಲನಗರ: ಕಾರ್ಮಿಕರ ಕೊರತೆಯಿಂದ ರೈತರು ಒಂದೆಡೆ ರಸ್ತೆಯಲ್ಲಿ ರಾಶಿ ಹಾಕುತ್ತಿದ್ದರೆ, ಮತ್ತೊಂದೆಡೆ ಅದೇ ಕಾರ್ಯವು ವಾಹನ ಸವಾರರಿಗೆ ಸಂಕಷ್ಟ ದೂಡಿದೆ. ವಾಹನ ಸವಾರರಿಗೆ ಸುಗಮವಾಗಿ ಸಂಚರಿಸಲು ಆಗದಂತಹ ಪರಿಸ್ಥಿತಿ ತಂದೊಡ್ಡಿದೆ. ಎಷ್ಟೇ ಜಾಗರೂಕತೆ ವಹಿಸಿದರೂ ಅಪಘಾತಕ್ಕೀಡಾಗುವ ಭೀತಿ ಅವರಿಗೆ ಮೂಡಿದೆ.

ಮಲನಗರ, ದಾಬಕಾ, ಠಾಣಾಕುಶನೂರು ಹೋಬಳಿ ಕೇಂದ್ರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಲ್ಲದೇ ವಾಡಿ, ತೋರ್ಣಾ, ಡೋಣಗಾಂವ್, ಖತಗಾಂವ್, ಹಕ್ಯಾಳ, ದಾಬಕಾ, ಡೋಂಗರಗಾಂವ್, ಮುಧೋಳ, ಬೆಂಬ್ರಾ, ಠಾಣಾಕುಶನುರು, ಹೊಕರ್ಣಾ, ಖೇರ್ಡಾ, ಭಂಡಾರಕುಮಟಾದ ಬಹುತೇಕ ರಸ್ತೆಗಳು ರಾಶಿ ಕಣವಾಗಿ ಮಾರ್ಪಟ್ಟಿವೆ. 

ರಾಶಿ ಮಾಡುವ ಕಾರ್ಯದಲ್ಲಿ ತೊಡಗಿರುವ ಜನ ರಸ್ತೆಯೇ ಮೇಲೆ ನಿಂತು ರಸ್ತೆ ತುಂಬು ಬೆಳೆಯು ಕಾಲುದಂಟುಗಳು ಹರಡುತ್ತಿದ್ದಾರೆ. ಇದರ ಪರಿಣಾಮ ವಾಹನ ಸವಾರರಿಗೆ ಸುಗಮ ಸಂಚಾರ ಕಷ್ಟವಾಗಿದೆ.

‘ರಸ್ತೆ ಮೇಲೆ ಭಾರಿ ವಾಹನಗಳ ಜೊತೆ ದ್ವಿಚಕ್ರ ವಾಹನಗಳು ಹೆಚ್ಚು ಸಂಚರಿಸುತ್ತವೆ. ಭಾರಿ ವಾಹನ ಬರುತ್ತಲೇ ರೈತರು ಖುಷಿಪಡುತ್ತಾರೆ. ಆದರೆ, ಬೈಕ್ ಸವಾರರು ರಾಶಿ ಮೇಲಿನಿಂದ ಹಾದು ಹೋಗುವಾಗ ಬೈಕ್ ಮೇಲೆ ನಿಯಂತ್ರಣ ಕಳೆದುಕೊಂಡು ಜಾರಿ ಬೀಳುತ್ತಾರೆ. ಕೆಳಗಡೆ ಬಿದ್ದು ಗಾಯಗೊಳ್ಳುತ್ತಾರೆ’ ಎಂದು ವಾಹನ ಸವಾರರು ಹೇಳುತ್ತಾರೆ.

‘ಕೊಯಲು ಮಾಡಿದ ಬೆಳೆ ಕಾಳುಗಳ ಮೇಲಿಂದ ಹಾದು ಹೋಗುವಾಗ ಬೈಕ್ ಸವಾರರು ನಿಯಂತ್ರಣ ತಪ್ಪಿ ಬಿಳುವ ಸಾಧ್ಯತೆ ಹೆಚ್ಚಿದೆ. ವಾಹನ ಸವಾರರ ಮತ್ತು ರಾಶಿ ಮಾಡುವ ಮಾಲೀಕರ ನಡುವೆ ವಾಗ್ವಾದ ನಡೆಯುತ್ತದೆ. ಇದರಿಂದ ವೈಮನಸ್ಸು ಹೆಚ್ಚಾಗಲು ಕಾರಣವಾಗುತ್ತಿದೆ ಎಂದು ಅನಿಲ್‌ ಮತ್ತು ಸುನೀಲ್‌ಕುಮಾರ ಆತಂಕ ವ್ಯಕ್ತಪಡಿಸುತ್ತಾರೆ.

ರಾಶಿ ಕಣಕ್ಕೆ ಸೌಲಭ್ಯ ಕಲ್ಪಿಸುವಂತೆ ಕೃಷಿ ಇಲಾಖೆಗೆ ಹಲವು ಬಾರಿ ಈಗಾಗಲೇ ಮನವಿಪತ್ರ ಸಲ್ಲಿಸಲಾಗಿದೆ. ಹಣ ಇದ್ದವರಿಗೆ ಮಾತ್ರ ಸರ್ಕರದ ಎಲ್ಲಾ ಸೌಲಭ್ಯಗಳು ದೊರೆಯುತ್ತವೆ ಹೊರತು ಸಣ್ಣ ಮತ್ತು ಮಧ್ಯಮ ರೈತರಿಗೆ ಸಿಗುವುದಿಲ್ಲ. ನಮ್ಮ ಸಹಾಯಕ್ಕೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಬರುವುದಿಲ್ಲ’ ಎಂದು ರೈತರು ಹೇಳುತ್ತಾರೆ.

‘ಅಲ್ಲಲ್ಲಿ ರಾಶಿ ಮಾಡುವ ಯಂತ್ರಗಳು ಇವೆ. ಆದರೆ, ಎಲ್ಲರಿಗೂ ಒಂದೇ ಸಲ ರಾಶಿ ಮಾಡಲು ಸಾಧ್ಯವೇ? ಮೊದಲೇ ಕೂಲಿಕಾರ್ಮಿಕರ ಕೊರತೆ ಇದೆ. ಕೃಷಿ ಕಾರ್ಯಕ್ಕೆ ಕೂಲಿಕಾರ್ಮಿಕರು ಸಿಗುತ್ತಿಲ್ಲ. ಅಸಹಾಯಕ ಸ್ಥಿತಿಯಲ್ಲಿ ನಾವು ಕೃಷಿ ಚಟುವಟಿಕೆ ನಡೆಸುತ್ತಿದ್ದೇವೆ’ ಎಂದು ಅವರು ವಾಸ್ತವಾಂಶ ಬಿಚ್ಚಿಡುತ್ತಾರೆ.

‘ರಸ್ತೆಯಲ್ಲಿ ರಾಶಿ ಕಣ ಮಾಡುವ ಬದಲು ರೈತರು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು. ರಸ್ತೆಯಲ್ಲಿ ವಾಹನ ಸವಾರರಿಗೆ ಸುಗಮವಾಗಿ ಸಾಗಲು ಅವಕಾಶ ಮಾಡಿಕೊಡಬೇಕು’ ಎಂದು ಸ್ಥಳೀಯರಾದ ಸೋಮ ಒತ್ತಾಯಿಸಿದ್ದಾರೆ.

ಪ್ರತಿಕ್ರಿಯಿಸಿ (+)