ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೋಷಿತ ವರ್ಗಗಳ ಸಮಾವೇಶ: ಯಾರಿಗಾಯ್ತು ಲಾಭ?

ಕಾಂಗ್ರೆಸ್‌ ಮುಖಂಡರ ಚರ್ಚೆಗೆ ಗ್ರಾಸವಾದ ಒಕ್ಕೂಟ
Last Updated 4 ನವೆಂಬರ್ 2019, 19:45 IST
ಅಕ್ಷರ ಗಾತ್ರ

ಬೀದರ್‌: ಶೋಷಿತ ವರ್ಗಗಳ ಒಕ್ಕೂಟದ ವತಿಯಿಂದ ನಗರದಲ್ಲಿ ಆಯೋಜಿಸಿದ್ದ ಶೋಷಿತ ವರ್ಗಗಳ ಜನಜಾಗೃತಿ ಸಮಾವೇಶದಿಂದ ಜಿಲ್ಲೆಯ ಯಾವ ನಾಯಕರಿಗೆ ಲಾಭವಾಯಿತು, ಯಾವ ಪಕ್ಷಕ್ಕೆ ನೆರವಾಯಿತು ಎನ್ನುವ ಲೆಕ್ಕಾಚಾರ ಶುರುವಾಗಿದೆ.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಭಾರತಬಾಯಿ ಶೇರಿಕಾರ ಹಾಗೂ ಗೀತಾ ಚಿದ್ರಿ ಮಧ್ಯೆ ಪೈಪೋಟಿ ನಡೆದಿದ್ದಾಗ ಭಾರತಬಾಯಿ ಅವರು ಸಿದ್ದರಾಮಯ್ಯ ಅವರ ಮೇಲೆ ಪ್ರಭಾವ ಬೀರುವಲ್ಲಿ ಯಶಸ್ವಿಯಾಗಿದ್ದರು. ಇಬ್ಬರನ್ನು ಸಮಾಧಾನ ಪಡಿಸಲು ಅಧಿಕಾರ ಅವಧಿಯನ್ನು ವಿಭಜಿಸಿ ಮೊದಲ 30 ತಿಂಗಳ ಅವಧಿಗೆ ಭಾರತಬಾಯಿ ಅವರನ್ನು ಅಧ್ಯಕ್ಷೆಯನ್ನಾಗಿ ಮಾಡಲಾಗಿತ್ತು. ನಂತರ ಅವರು ಅಧಿಕಾರ ಬಿಟ್ಟು ಕೊಡಲು ಒಪ್ಪದಿದ್ದಾಗ ಪಕ್ಷದಿಂದಲೇ ಉಚ್ಛಾಟಿಸಲಾಯಿತು. ಒಪ್ಪಂದದಂತೆ ಎರಡನೇ ಅವಧಿಗೆ ಗೀತಾ ಅವರಿಗೆ ಅವಕಾಶ ಮಾಡಿಕೊಡಲಾಯಿತು.

ಈ ನಡುವೆ ಸಿದ್ದರಾಮಯ್ಯ ಹಾಗೂ ಪಂಡಿತ ಚಿದ್ರಿ ನಡುವಿನ ಸಂಬಂಧ ಸಡಿಲಗೊಂಡಿತ್ತು. ಹೀಗಾಗಿ ರಾಜಕೀಯ ಸಂಬಂಧವನ್ನು ಗಟ್ಟಿಗೊಳಿಸುವುದು ಪಂಡಿತ ಚಿದ್ರಿ ಅವರಿಗೆ ಅನಿವಾರ್ಯ ಆಗಿತ್ತು. ಅಂತೆಯೇ ಅವರು ಗ್ರಾಮ ಪಂಚಾಯಿತಿಗಳ ಚುನಾವಣೆಯನ್ನು ಮುನ್ನಲೆಯಾಗಿಟ್ಟುಕೊಂಡು ಸಮಾವೇಶ ನಡೆಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಪಂಡಿತ ಚಿದ್ರಿ ಹಾಗೂ ಸಮಾನ ಮನಸ್ಕರು ಶೋಷಿತ ಸಮಾಜದ ಮುಖಂಡರ ಎದುರು ಸಮಾವೇಶ ಮಾಡುವ ಪ್ರಸ್ತಾವ ಮುಂದಿಟ್ಟಿದ್ದರು. ಅದಕ್ಕೆ ಮುಖಂಡರ ಬೆಂಬಲ ದೊರೆಯಿತು. ಇದೇ ವೇದಿಕೆಯನ್ನು ಬಳಸಿಕೊಂಡು ಚಿದ್ರಿ ಅವರು ಸಿದ್ದರಾಮಯ್ಯ ಅವರಿಗೆ ಕೃತಜ್ಞತೆ ಸಲ್ಲಿಸಲು ಯೋಜನೆ ರೂಪಿಸಿದ್ದರು.

ಸಮಾವೇಶದಲ್ಲಿ ಕಾಂಗ್ರೆಸ್‌ ಬ್ಯಾನರ್‌ ಇಲ್ಲದಿದ್ದರೂ ಕಾಂಗ್ರೆಸ್‌ನ ನಾಯಕರೇ ವೇದಿಕೆ ಮೇಲಿದ್ದರು. ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆಹ್ವಾನ ಇರಲಿಲ್ಲ. ಹೀಗಾಗಿ ಕೆಲ ಮುಖಂಡರು ಸಮಾವೇಶದಲ್ಲಿ ಗುರುತಿಸಿಕೊಳ್ಳಲು ಇಷ್ಟಪಡಲಿಲ್ಲ. 14 ಸಮುದಾಯಗಳ ಮುಖಂಡರು ಮಾತ್ರ ವೇದಿಕೆಯಲ್ಲಿದ್ದರು. ಶೋಷಿತ ಸಮುದಾಯಗಳ ಕೆಲ ಮುಖಂಡರು ಅಂತರ ಕಾಯ್ದುಕೊಂಡಿದ್ದು ಕಂಡು ಬಂದಿತು.

ಈ ಸಮಾವೇಶವನ್ನು ಅವಲೋಕಿಸಿದರೆ ಮುಂದಿನ ವಿಧಾನಸಭೆ ಚುನಾವಣೆಗೆ ಬೀದರ್‌ನಿಂದ ಸಿದ್ಧತೆ ಆರಂಭಿಸಿದಂತೆ ಭಾಸವಾಯಿತು. ಈ ಸಮಾವೇಶವು ಜಿಲ್ಲೆಯ ಶೋಷಿತ ಸಮುದಾಯಗಳ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರಿದೆ ಎನ್ನುವುದು ನಿಗೂಢವಾಗಿದೆ.


ಬೀದರ್‌ ದಕ್ಷಿಣ ಕ್ಷೇತ್ರದ ಮೇಲೆ ಚಿದ್ರಿ ಕಣ್ಣು

ಬೀದರ್: ರಾಜ್ಯದ ರಾಜಕೀಯ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿರುವ ಚಿದ್ರಿ ಕುಟುಂಬ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿದೆ. ಈ ಕ್ಷೇತ್ರದಲ್ಲಿ ಅಹಿಂದ ಮತಗಳೇ ಅಧಿಕ ಸಂಖ್ಯೆಯಲ್ಲಿ ಇರುವುದನ್ನು ಮನಗಂಡಿರುವ ಗೀತಾ ಚಿದ್ರಿ ಬರುವ ವಿಧಾನಸಭೆ ಚುನಾವಣೆಯಲ್ಲಿ ಬೀದರ್‌ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಮಹಿಳೆ ಕೋಟಾದಲ್ಲಿ ಕಾಂಗ್ರೆಸ್‌ ಟಿಕೆಟ್‌ ಪಡೆಯಲು ತಯಾರಿ ನಡೆಸಿರುವುದು ಮೇಲ್ನೋಟಕ್ಕೆ ಕಂಡು ಬಂದಿತು.

ಚಿದ್ರಿ ಅವರು ಶೋಷಿತ ವರ್ಗಗಳ ಜನಜಾಗೃತಿ ಸಮಾವೇಶ ನಡೆಸುವ ಮೂಲಕ ಕಾಂಗ್ರೆಸ್‌ ನಾಯಕರ ಮುಂದೆ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ‘ಗೀತಾ ಚಿದ್ರಿ ಮುಂದೆ ಶಾಸಕರೂ ಆಗಲಿದ್ದಾರೆ’ ಎಂದು ಭವಿಷ್ಯ ನುಡಿದಿದ್ದಾರೆ. ಇದು ರಾಜಕೀಯ ವಲಯದಲ್ಲಿ ಚರ್ಚೆಗೆ ಅನುವು ಮಾಡಿಕೊಟ್ಟಿದೆ.

ಗ್ರಾಮ ಪಂಚಾಯಿತಿ ಚುನಾವಣೆಗಳೂ ಹತ್ತಿರ ಬರುತ್ತಿರುವ ಕಾರಣ ರಾಜಕೀಯ ಬೇರುಗಳನ್ನು ತಳಮಟ್ಟದಲ್ಲಿ ಗಟ್ಟಿಗೊಳಿಸಲು ಪ್ರಯತ್ನ ಆರಂಭಿಸಿದ್ದಾರೆ ಎಂದೂ ಕಾಂಗ್ರೆಸ್‌ ವಲಯದಲ್ಲಿ ಕೇಳಿ ಬರುತ್ತಿದೆ.

‘ರಾಜಕೀಯದಲ್ಲಿ ಇರುವವರಿಗೆ ಆಸೆ, ಆಕಾಂಕ್ಷೆಗಳು ಸಹಜ. 20 ತಿಂಗಳ ಅವಧಿಗೆ ನನ್ನನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯನ್ನಾಗಿ ಮಾಡಲಾಗಿದೆ. ಪಕ್ಷದ ಮುಖಂಡರು ಬಯಸಿದರೆ ಹಾಗೂ ಮಹಿಳಾ ಕೋಟಾದಲ್ಲಿ ಅವಕಾಶ ದೊರೆತರೆ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಹಿಂಜರಿಯುವುದಿಲ್ಲ’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಚಿದ್ರಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT