ಸೋಮವಾರ, ಏಪ್ರಿಲ್ 19, 2021
32 °C

ಜಾಗೃತಿಯಿಂದ ಏಡ್ಸ್ ನಿಯಂತ್ರಣ: ನ್ಯಾಯಾಧೀಶ ಆರ್. ರಾಘವೇಂದ್ರ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೀದರ್: ‘ಎಚ್ಐವಿ ಹಾಗೂ ಏಡ್ಸ್ ನಿಯಂತ್ರಣಕ್ಕೆ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಎಚ್‌ಐವಿ ಸೋಂಕಿನ ತಿಳಿವಳಿಕೆ ಇದ್ದರೆ ಅದು ಹರಡದಂತೆ ತಡೆಯಬಹುದು. ರೋಗಿಗಳು ಸಹ ಹತಾಶೆಗೆ ಒಳಗಾಗದೆ ಚಿಕಿತ್ಸೆ ಪಡೆದು ಗುಣಮುಖರಾಗಲು ಪ್ರಯತ್ನಿಸಬೇಕು’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ರಾಘವೇಂದ್ರ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಜಿಲ್ಲಾ ಆರೋಗ್ಯ
ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಿಶ್ವ ಏಡ್ಸ್ ಜಾಗೃತಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಎಚ್‍ಐವಿ ಸೋಂಕಿತರು ಕಾನೂನು ಸೇವೆಗಳನ್ನು ಪಡೆಯಲು ಹೆದರಬೇಕಾಗಿಲ್ಲ. ಜಿಲ್ಲೆಯ ಎಆರ್‌ಟಿ ಕೇಂದ್ರದಲ್ಲಿ ಇಬ್ಬರು ಪ್ಯಾನಲ್ ವಕೀಲರನ್ನು ಸರ್ಕಾರದ ವತಿಯಿಂದ ನಿಯೋಜಿಸಲಾಗಿದೆ. ಎಚ್ಐವಿ ಬಾಧಿತರು ಇವರಿಂದ ಕಾನೂನು ಸೇವೆಯನ್ನು ಪಡೆಯಬಹುದಾಗಿದೆ’ ಎಂದು ಹೇಳಿದರು.

ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಾರ್ತಾಂಡರಾವ್ ಖಾಶೆಂಪೂರಕರ್ ಮಾತನಾಡಿ, ‘ಎಚ್‍ಐವಿ ರೋಗವು ವೈರಾಣುವಿನಿಂದ ಬರುವ ರೋಗವಾಗಿದೆ. ಜಾಗೃತಿ ಮೂಡಿಸುವುದರಿಂದ ಮಾತ್ರ ಅದನ್ನು ನಿಯಂತ್ರಿಸಬಹುದಾಗಿದೆ. ಈ ರೋಗಕ್ಕೆ ಔಷಧ ಲಭ್ಯವಿಲ್ಲ ಆದರೆ ಜೀವನ ಶೈಲಿಯನ್ನು ಉತ್ತಮಗೊಳಿಸಿಕೊಳ್ಳುವ ಮೂಲಕ ರೋಗ ಬಾರದಂತೆ ನೋಡಿಕೊಳ್ಳಬಹುದು’ ಎಂದರು.

ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಸಿ.ಎಸ್ ರಗಟೆ ಮಾತನಾಡಿ, ‘ಎಚ್ಐವಿ ರೋಗಿಗಳಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಉಚಿತ ತಪಾಸಣೆ ಮತ್ತು ಚಿಕಿತ್ಸೆ ಸೌಲಭ್ಯವಿದೆ. ರೋಗಿಗಳು ಇದರ ಸದುಪಯೋಗ ಪಡೆಯಬೇಕು’ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎ.ಜಬ್ಬಾರ್ ಮಾತನಾಡಿ, ‘ಎಚ್ಐವಿ ಬಾಧಿತರಿಗೆ ಚಿಕಿತ್ಸೆಯ ಜತೆಗೆ ಬೆಂಬಲದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಹಾಗೂ ಸ್ವಯಂ ಸೇವಾ ಸಂಸ್ಥೆಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ’ ಎಂದರು.

ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ದೀಪಾ ಖಂಡ್ರೆ, ಜಿಲ್ಲಾ ಮಟ್ಟದ ಕಾರ್ಯಕ್ರಮ ಅಧಿಕಾರಿ ಡಾ.ರಾಜಶೇಖರ ಪಾಟೀಲ, ಡಾ.ಇಂದುಮತಿ ಪಾಟೀಲ, ಡಾ.ಶಿವಶಂಕರ.ಬಿ, ಡಾ.ಕೃಷ್ಣರೆಡ್ಡಿ, ಡಾ.ರವೀಂದ್ರ ಸಿರ್ಸೆ, ಡಾ.ಸಂಗಾರೆಡ್ಡಿ, ಎನ್.ಕೆ.ಜಾಬಶೆಟ್ಟಿ, ಆಯುರ್ವೇದಿಕ್ ಮೆಡಿಕಲ್ ಕಾಲೇಜ್, ಸರ್ಕಾರಿ ನರ್ಸಿಂಗ್ ಕಾಲೇಜು, ಬ್ರಿಮ್ಸ್ ವಿದ್ಯಾರ್ಥಿಗಳು, ಐಸಿಟಿಸಿ, ಎಆರ್‌ಟಿ, ಬ್ಲಡ್ ಬ್ಯಾಂಕ್, ಶರಣ ತತ್ವ, ಪ್ರವರ್ಧ, ಬೆಳದಿಂಗಳು ನೆಟ್‌ವರ್ಕ್ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಇದ್ದರು.

ಏಡ್ಸ್ ನಿಯಂತ್ರಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ವಿಜಯಕುಮಾರ ವಾಘಮೋರೆ, ದಿಲೀಪ, ಸಂತೋಷ ಸಿಂಧೆ, ಮಹಾನಂದಾ, ವಿಶ್ವನಾಥ ಸ್ವಾಮಿ ಹಾಗೂ ಶಿವಕುಮಾರ ವಾಲ್ದೊಡ್ಡಿ ಅವರನ್ನು ಸನ್ಮಾನಿಸಲಾಯಿತು. ಉಪ ಆರೋಗ್ಯ ಶಿಕ್ಷಣಾಧಿಕಾರಿ ಸಂಗಪ್ಪ ಕಾಂಬಳೆ ನಿರೂಪಿಸಿದರು. ಜಿಲ್ಲಾ ಆರೋಗ್ಯ ಮತ್ತು ಶಿಕ್ಷಣಾಧಿಕಾರಿ ಸುಭಾಷ ಮುಧಾಳೆ ಸ್ವಾಗತಿಸಿದರು.

ಜಾಗೃತಿ ಜಾಥಾ:
ಆರೋಗ್ಯ ಇಲಾಖೆಯ ಆವರಣದಲ್ಲಿ ಶನಿವಾರ ಏಡ್ಸ್‌ ಜಾಗೃತಿ ಜಾಥಾಕ್ಕೆ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕಿಶೋರಕುಮಾರ ದುಬೆ ಚಾಲನೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿ ಆವರಣದಿಂದ ಹೊರಟ ಜಾಥಾ ಅಂಬೇಡ್ಕರ್ ವೃತ್ತ, ಭಗತ್‌ಸಿಂಗ್ ವೃತ್ತ ಸೇರಿದಂತೆ ನಗರದ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು