ಬುಧವಾರ, ಜನವರಿ 20, 2021
16 °C
ಬಡ ಕುಟುಂಬಗಳ ಆರ್ಥಿಕ ಭದ್ರತೆಗೆ ಗ್ರಾಮ ಪಂಚಾಯಿತಿಯಿಂದ ವಿನೂತನ ಪ್ರಯತ್ನ

800 ಕುಟುಂಬಗಳಿಗೆ ವಿಮಾ ಸೌಲಭ್ಯ ಗುರಿ

ಮನ್ಮಥಪ್ಪ ಸ್ವಾಮಿ Updated:

ಅಕ್ಷರ ಗಾತ್ರ : | |

Prajavani

ಔರಾದ್: ದುಡಿಯುವ ಕುಟುಂಬಗಳಿಗೆ ಆರ್ಥಿಕ ಭದ್ರತೆ ಒದಗಿಸಲು ತಾಲ್ಲೂಕಿನ ಧುಪತಮಹಾಗಾಂವ್ ಗ್ರಾಮ ಪಂಚಾಯಿತಿ ವಿನೂತನ ಅಭಿಯಾನ ಆರಂಭಿಸಿದೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ 800 ಕುಟುಂಬಗಳಿಗೆ ವಿಮಾ ಸೌಲಭ್ಯ ಕಲ್ಪಿಸುವ ಈ ಮಹತ್ವಾಕಾಂಕ್ಷಿ ಅಭಿಯಾನಕ್ಕೆ ಈಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಚಾಲನೆ ನೀಡಿದರು.

ಗ್ರಾಮೀಣ ಭಾಗದ ದುಡಿಯುವ ವರ್ಗದ ಕುಟುಂಬದ ಯಜಮಾನ ಅಥವಾ ಸದಸ್ಯ ಅಕಾಲಿಕ ಮರಣ ಹೊಂದಿದರೆ ಆ ಕುಟುಂಬ ಆರ್ಥಿಕ ಸಂಕಷ್ಟ ಎದುರಿಸುವುದು ಸರ್ವ ಸಾಮಾನ್ಯ. ಜನರನ್ನು ಈ ರೀತಿಯ ನಷ್ಟದಿಂದ ಪಾರು ಮಾಡಲು ಗ್ರಾಮ ಪಂಚಾಯಿತಿಯವರು ವಿಮಾ ಅಭಿಯಾನ ಆರಂಭಿಸಿದ್ದಾರೆ.

ಕೇಂದ್ರ ಸರ್ಕಾರ ಪ್ರಾಯೋಜಿತ ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಜೀವನ ಸುರಕ್ಷಾ ಬಿಮಾ ಯೋಜನೆಗಳ ವ್ಯಾಪ್ತಿಗೆ ಜನರನ್ನು ಒಳಪಡಿಸುವುದು. 18 ರಿಂದ 50 ವರ್ಷದೊಳಗಿನವರನ್ನು ಗುರುತಿಸಿ ಅವರನ್ನು ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ವ್ಯಾಪ್ತಿಗೆ ಸೇರಿಸುವುದು. ಅವರ ಹೆಸರಿನಲ್ಲಿ ವರ್ಷಕ್ಕೆ ₹330 ತುಂಬಿದರೆ ಆ ಕುಟುಂಬಕ್ಕೆ ₹2 ಲಕ್ಷದ ವಿಮೆ ಸುರಕ್ಷಾ ಸೌಲಭ್ಯ ಸಿಗುತ್ತದೆ.

ಇನ್ನು ಪ್ರಧಾನ ಮಂತ್ರಿ ಜೀವನ ಸುರಕ್ಷಾ ಬಿಮಾ ಯೋಜನೆ ಅಡಿ 18 ರಿಂದ 70 ವರ್ಷದೊಳಗಿನವರು ₹2 ಲಕ್ಷ ವಿಮೆ ಸೌಲಭ್ಯ ಪಡೆಯಲು ಅವಕಾಶವಿದೆ. ಇಲ್ಲಿ ವರ್ಷಕ್ಕೆ ₹12 ಕಟ್ಟಿದರೆ ಸಾಕು.

‘ಈ ಕುರಿತಂತೆ ಈಗಾಗಲೇ ಗ್ರಾಮದ ಮುಖಂಡರು ಹಾಗೂ ಬ್ಯಾಂಕ್‌ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಲಾಗಿದೆ. ಎಸ್‌ಬಿಐ, ಕೆನರಾ ಹಾಗೂ ಡಿಸಿಸಿ ಬ್ಯಾಂಕ್‌ನವರು ಮನಸಾರೆ ಒಪ್ಪಿಕೊಂಡಿದ್ದಾರೆ. ಆಯಾ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವವರು ಒಂದು ಅರ್ಜಿ ತುಂಬಿ ಕೊಟ್ಟರೆ ಸಾಕು ಅವರನ್ನು ವಿಮಾ ವ್ಯಾಪ್ತಿಗೆ ಒಳಪಡಿಸಲಾಗುತ್ತದೆ’ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಾನಂದ ಔರಾದೆ ತಿಳಿಸಿದ್ದಾರೆ.

‘ಈಗಾಗಲೇ ಗ್ರಾಮ ಪಂಚಾಯಿತಿಯ ಎಲ್ಲ 14 ಜನ ಸಿಬ್ಬಂದಿಯನ್ನು ವಿಮೆ ವ್ಯಾಪ್ತಿಗೆ ಸೇರಿಸಲಾಗಿದೆ. ಪಂಚಾಯಿತಿ ವ್ಯಾಪ್ತಿಗೆ ನಾಲ್ಕು ಗ್ರಾಮಗಳು ಹಾಗೂ ಎರಡು ತಾಂಡಾಗಳು ಬರುತ್ತವೆ. ಒಟ್ಟು 800 ಕುಟುಂಬಗಳು ಬರುತ್ತವೆ. ಅವುಗಳಲ್ಲಿ ಬಹುತೇಕ ಕುಟುಂಬಗಳು ದುಡಿಯುವ ವರ್ಗಕ್ಕೆ ಸೇರಿವೆ. ಈ ಕುಟುಂಬದ ಒಬ್ಬ ಸದಸ್ಯನನ್ನಾದರೂ ವಿಮೆ ವ್ಯಾಪ್ತಿಗೆ ಸೇರಿಸುವ ಗುರಿ ಹೊಂದಲಾಗಿದೆ. ಈಗಾಗಲೇ 100 ಜನ ಬ್ಯಾಂಕ್‌ಗೆ ಹೋಗಿ ಅರ್ಜಿ ತುಂಬಿ ಕೊಟ್ಟಿದ್ದಾರೆ. ಮಾರ್ಚ್‌ವರೆಗೆ ಎಲ್ಲ 800 ಕುಟುಂಬಗಳನ್ನು ವಿಮಾ ವ್ಯಾಪ್ತಿಗೆ ಸೇರಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಮೇಲಾಧಿಕಾರಿಗಳು, ಗ್ರಾಮದ ವಿದ್ಯಾವಂತ ಯುವಕರು, ಜನಪ್ರತಿನಿಧಿಗಳ ಸಹಕಾರವೂ ದೊರೆಯುತ್ತಿದೆ’ ಎಂದು ಅವರು ತಿಳಿಸಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು