ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆಯಿಂದ ಕವಯತ್ರಿಯರ ಸಮ್ಮೇಳನ

ಸಾಂಪ್ರದಾಯಿಕ ಉಡುಗೆಯಲ್ಲಿ ಮೆರವಣಿಗೆ, 4 ಸಾವಿರ ಜನ ಸೇರುವ ನಿರೀಕ್ಷೆ
Last Updated 24 ಅಕ್ಟೋಬರ್ 2018, 14:29 IST
ಅಕ್ಷರ ಗಾತ್ರ

ಬೀದರ್‌: ‘ಅಕ್ಟೋಬರ್‌ 26ರಿಂದ ಮೂರು ದಿನಗಳ ವರೆಗೆ ನಡೆಯಲಿರುವ 18ನೆಯ ಅಖಿಲ ಭಾರತ ಕವಯತ್ರಿಯರ ಸಮ್ಮೇಳನದಲ್ಲಿ ನಾಲ್ಕು ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಈಗಾಗಲೇ ಸಕಲ ಸಿದ್ಧತೆ ಮಾಡಿ ಕೊಳ್ಳಲಾಗಿದೆ’ ಎಂದು ಅಖಿಲ ಭಾರತ ಕವಯತ್ರಿಯರ ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ಮಂಗಲಾ ಕಪರೆ ಹಾಗೂ ಸ್ವಾಗತ ಸಮಿತಿಯ ಅಧ್ಯಕ್ಷೆ ಜಿ. ಪೂರ್ಣಿಮಾ ಹೇಳಿದರು.

‘ರಾಜ್ಯದ 120 ಪ್ರತಿನಿಧಿಗಳು ಸೇರಿ ದೇಶದ ವಿವಿಧೆಡೆಯಿಂದ 350 ಪ್ರತಿನಿಧಿಗಳು ಭಾಗವಹಿಸುವರು. ಈಗಾಗಲೇ ಕೆಲವು ಕವಯಿತ್ರಿಯರು ಹಾಗೂ ಪ್ರತಿನಿಧಿಗಳು ನಗರಕ್ಕೆ ಬಂದಿದ್ದು, ಅವರಿಗೆ ಗುರುದ್ವಾರದ ಯಾತ್ರಿನಿವಾಸದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ’ ಎಂದು ತಿಳಿಸಿದರು.

‘ಬೀದರ್ ಜಿಲ್ಲಾ ಲೇಖಕಿಯರ ಸಂಘ, ರೋಟರಿ ಕ್ವೀನ್, ಇನ್ನರ್‌ವೀಲ್‌ ಕ್ಲಬ್‌, ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕದ ಸಹಯೋಗದೊಂದಿಗೆ ಬೆಳಿಗ್ಗೆ 8.30ಕ್ಕೆ ಸಮ್ಮೇಳನದ ಮೆರವಣಿಗೆ ನಡೆಯಲಿದೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ್ ಉದ್ಘಾಟಿಸುವರು. ದೇಶದ ವಿವಿಧೆಡೆಯಿಂದ ಬರುವ ಕವಯಿತ್ರಿಯರು ಆಯಾ ರಾಜ್ಯಗಳ ಸಾಂಪ್ರದಾಯಿಕ ಪೋಷಾಕಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ’ ಎಂದು ಹೇಳಿದರು.

‘ಜಿಲ್ಲಾ ರಂಗ ಮಂದಿರದಲ್ಲಿ ಮಧ್ಯಾಹ್ನ 2 ಗಂಟೆಗೆ ಸಮ್ಮೇಳನದ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ಗಂಗೂಬಾಯಿ ಹಾನಗಲ್‌ ಸಂಗೀತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಸರ್ವಮಂಗಳಾ ಶಂಕರ ಉದ್ಘಾಟಿಸುವರು. ಅಖಿಲ ಭಾರತ ಕವಯಿತ್ರಿಯರ ಸಮ್ಮೇಳನದ ಸಂಸ್ಥಾಪಕ ಅಧ್ಯಕ್ಷ ಲಾರಿ ಆಜಾದ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಹಿತಿ ಶಿವಗಂಗಾ ರುಮ್ಮಾ ಸಮ್ಮೇಳನ ಭಾಷಣ ಮಾಡುವರು’ ಎಂದು ತಿಳಿಸಿದರು.

‘ಸಮ್ಮೇಳನ ದಲ್ಲಿ ಕನ್ನಡ ಕಾವ್ಯಧಾರೆ, ಬಹುಭಾಷಾ ಕವಿಗೋಷ್ಠಿ, ಸಾಂಸ್ಕೃತಿಕ ಸಂಜೆ, ಮುಕ್ತ ಪ್ರಬಂಧ ಮಂಡನೆ, ಚುಟುಕು ಕವಿಗೋಷ್ಠಿ, ಮುಷಯರಾ ಆಯೋಜಿಸಲಾಗಿದೆ. 28 ರಂದು ಬೆಳಿಗ್ಗೆ 9.30ಕ್ಕೆ ‘ಆಧುನಿಕ ಜಗತ್ತು ಮಹಿಳಾ ತಲ್ಲಣಗಳು’ ಕುರಿತ ಗೋಷ್ಠಿ ನಡೆಯಲಿದೆ. ಮಹಿಳೆಯರ ಮೇಲಿನ ಗುಂಪು ಹಲ್ಲೆ, ಅತ್ಯಾಚಾರ, ಮೀಟೂ ಮತ್ತಿತರ ಪ್ರಚಲಿತ ವಿದ್ಯಾಮಾನಗಳು ಚರ್ಚೆಗೆ ಬರಲಿವೆ’ ಎಂದರು.

‘ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ವಿನಿಮಯ ಮಾಡಿಕೊಳ್ಳುವುದು ಸಮ್ಮೇಳನದ ಮುಖ್ಯ ಉದ್ದೇಶವಾಗಿದೆ. ಸ್ಥಳೀಯರಿಗೆ ಪ್ರೋತ್ಸಾಹ ನೀಡುವ ದಿಸೆಯಲ್ಲಿ ಹೆಚ್ಚು ಜನರಿಗೆ ವೇದಿಕೆ ಕಲ್ಪಿಸಲಾಗಿದೆ. ಇದೇ ವೇದಿಕೆಯಲ್ಲಿ ಗಣ್ಯರ ಸನ್ಮಾನ ಸಹ ನಡೆಯಲಿದೆ’ ಎಂದು ವಿವರಿಸಿದರು.

ಪ್ರಚಾರ ಸಮಿತಿಯ ಅಧ್ಯಕ್ಷೆ ಡಾ.ಅನುಪಮಾ ಎರೋಳಕರ್, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚೆನಶೆಟ್ಟಿ, ಶ್ಯಾಮಲಾ ಕುಲಕರ್ಣಿ, ವಜ್ರಾ ಪಾಟೀಲ, ರತ್ನಾ ಪಾಟೀಲ,ಪಾರ್ವತಿ ಸೋನಾರೆ, ಮಲ್ಲೇಶ್ವರಿ ಉದಯಗಿರಿ, ವಿಜಯಕುಮಾರ ಸೋನಾರೆ, ಅಮರ್ ಎರೋಳಕರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT