ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮರೇಶ್ವರ ಜಾತ್ರೆ; ಭಕ್ತರ ಹರ್ಷೋದ್ಗಾರ ಮಧ್ಯೆ ಅಗ್ನಿಪೂಜೆ

Last Updated 3 ಮಾರ್ಚ್ 2022, 4:55 IST
ಅಕ್ಷರ ಗಾತ್ರ

ಔರಾದ್: ಇಲ್ಲಿನ ಅಮರೇಶ್ವರ ಜಾತ್ರೆಯ ಪ್ರಯುಕ್ತ ಬುಧವಾರ ನಡೆದ ಅಗ್ನಿಪೂಜೆಯಲ್ಲಿ ಸಾವಿರಾರು ಭಕ್ತರು ಸಂಭ್ರಮದಿಂದ ಪಾಲ್ಗೊಂಡರು.

ಕೋವಿಡ್ ಸೋಂಕು ಕಡಿಮೆಯಾದ ಹಿನ್ನೆಲೆಯಲ್ಲಿ ಅದ್ಧೂರಿಯಾಗಿ ಜಾತ್ರೆ ನಡೆಯಿತು. ನೆರೆಯ ತೆಲಂಗಾಣ, ಮಹಾ ರಾಷ್ಟ್ರ ಹಾಗೂ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ ಭಕ್ತರ ಹರ್ಷೊಲ್ಲಾಸದ ನಡುವೆ ಬೆಳಿಗ್ಗೆ ರಥೋತ್ಸವ ಜರುಗಿತು.

ರಾತ್ರಿ 1ಕ್ಕೆ ಹೊರಟ ಅಮರೇಶ್ವರ ಮೆರವಣಿಗೆ ನಗರದ ಹಳೆ ಭಾಗದ ಎಲ್ಲ ಬಡಾವಣೆಗಳಲ್ಲಿ ಸುತ್ತಾಡಿ ಬೆಳಿಗ್ಗೆ 8ಕ್ಕೆ ಅಗ್ನಿಕುಂಡ ತಲುಪಿತು. ಈ ವೇಳೆ ಭಕ್ತರ ‘ಓಂ ಭಲಾ ಶಂಕರ ಭಲಾ’, ಅಮರೇಶ್ವರ ಮಹಾರಾಜ ಕೀ ಜೈ’ ಎಂಬ ಜಯಘೋಷಗಳ ನಡುವೆ ಅಗ್ನಿ ಪೂಜೆ ನೆರವೇರಿತು.

ಮಹಿಳೆಯರು ಮಕ್ಕಳಾದಿಯಾಗಿ ಎಲ್ಲರೂ ಅಗ್ನಿ ಕುಂಡಕ್ಕೆ ಸುತ್ತು ಹಾಕಿದರು. ಭಕ್ತರ ಸಂಖ್ಯೆ ಜಾಸ್ತಿಯಾದ ಹಿನ್ನೆಲೆಯಲ್ಲಿ ಪೊಲೀಸರು ಮಧ್ಯೆ ಪ್ರವೇಶಿಸಿ, ಸಾಲುಗಟ್ಟಿ ಅಗ್ನಿ ದರ್ಶನ ಪಡೆಯಲು ಅನುವು ಮಾಡಿಕೊಟ್ಟರು.

ಅಗ್ನಿ ಪೂಜೆಗೂ ಮುನ್ನ ನಡೆದ ಮೆರವಣಿಗೆಯಲ್ಲಿ ಯುವಕರು ಕುಣಿದು ಸಂಭ್ರಮಿಸಿದರು. ಭಜನೆ, ಕೋಲಾಟ ತಂಡ ಮೆರವಣಿಗೆಯ ಕಳೆ ಹೆಚ್ಚಿಸಿತ್ತು. ಮೆರವಣಿಗೆಯ ದಾರಿಯೂದ್ದಕ್ಕೂ ಭಕ್ತರು ತಮ್ಮ ಮನೆ ಮುಂದೆ ರಂಗೋಲಿ ಹಾಕಿದ್ದರು. ಅಮರೇಶ್ವರ ಪ್ರತಿಮೆಗೆ ಶಲ್ಯ ತೊಡಿಸಿ, ಕಾಯಿ ಒಡೆದು ತಮ್ಮ ಇಷ್ಟಾರ್ಥ ಪೂರೈಸಿದರು. ಅಲ್ಲಲ್ಲಿ ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡಲಾಗಿದೆ.

ಪಶು ಸಂಗೋಪನಾ ಸಚಿವ ಪ್ರಭು ಚವಾಣ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಾರುತಿ ಚವ್ಹಾಣ, ತಹಶೀಲ್ದಾರ್ ಅರುಣಕುಮಾರ ಕುಲಕರ್ಣಿ, ಮುಖಂಡ ಬಂಡೆಪ್ಪ ಕಂಟೆ, ಬಸವರಾಜ ದೇಶಮುಖ, ಶರಣಪ್ಪ ಪಂಚಾಕ್ಷರಿ, ಶಿವರಾಜ ಅಲ್ಮಾಜೆ, ಪ್ರಕಾಶ ಘುಳೆ, ಧೊಂಡಿಬಾ ನರೋಟೆ, ರಾಮಶೆಟ್ಟಿ ಪನ್ನಾಳೆ, ಸುನಿಲ್ ಕುಮಾರ ದೇಶಮುಖ, ರಾಮ ನರೋಟೆ, ಅಶೋಕ ಅಲ್ಮಾಜೆ, ಚಂದ್ರಪಾಲ ವಕೀಲ, ಕಾಂಗ್ರೆಸ್ ಮುಖಂಡ ಡಾ. ಲಕ್ಷ್ಮಣ ಸೋರಳ್ಳಿ, ಶರಣಪ್ಪ ಪಾಟೀಲ, ಸುಧಾಕರ ಕೊಳ್ಳೂರ್, ಕನ್ನಡ ಪರ ಹೋರಾಟಗಾರ ಬಸವರಾಜ ಶೆಟಕಾರ, ರಾಜಕುಮಾರ ಯಡವೆ ಇದ್ದರು.

ರಥೋತ್ಸವಕ್ಕೆ ಸಕಲ ಸಿದ್ಧತೆ: ಗುರುವಾರ ಬೆಳಿಗ್ಗೆ ರಥೋತ್ಸವ ನಡೆಯಲಿದ್ದು, ದೇವಸ್ಥಾನ ದೀಪ ಗಳಿಂದ ಅಲಂಕರಿಸಲಾಗಿದೆ. ರಥ ವನ್ನು ಬಣ್ಣದ ಹೂಗಳಿಂದ ಅಲಂಕರಿಸಲಾಗಿದೆ. ರಥ ಹೊರಡುವ ದಾರಿಯೂದ್ದಕ್ಕೂ ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ವಿವಿಧೆಡೆಯ ಜಾನಪದ ಕಲಾ, ಭಜನಾ, ಸೌಟ್ಸ್, ಗೈಡ್ಸ್ ತಂಡಗಳು ಪಾಲ್ಗೊಳ್ಳಲಿವೆ.

‘ರಥೋತ್ಸವ ಶಾಂತಿಯುತವಾಗಿ ನಡೆಯಲು ಸ್ವಯಂ ಸೇವಕರ ತಂಡ ಕೆಲಸ ಮಾಡಲಿದೆ. ಜಿಲ್ಲೆಯ ವಿವಿಧೆಡೆಯಿಂದ ಹೆಚ್ಚುವರಿ ಪೊಲೀಸರನ್ನು ಕರೆಸಲಾಗಿದೆ. ಎಲ್ಲರೂ ಶಾಂತಿಯಿಂದ ಉತ್ಸವದಲ್ಲಿ ಪಾಲ್ಗೊಳ್ಳಬೇಕು’ ಎಂದು ತಹಶೀಲ್ದಾರ್ ಎಂ. ಚಂದ್ರಶೇಖರ, ಸಿಪಿಐ ರವೀಂದ್ರನಾಥ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಜಾತ್ರಾ ವಿಶೇಷತೆಗೆ ಮೆಚ್ಚುಗೆ

ಅಮರೇಶ್ವರ ಜಾತ್ರೆ ಹಾಗೂ ಮಹಾ ಶಿವರಾತ್ರಿ ಪ್ರಯುಕ್ತ ಪ್ರಜಾವಾಣಿ ‘ಮಹಾ ಶಿವರಾತ್ರಿ ಶಿವೋತ್ಸವ’ ಶೀರ್ಷಿಕೆಯಡಿ ಹೊರತರಲಾದ ವಿಶೇಷ ಪುಟಕ್ಕೆ ಭಕ್ತರು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲೆಯಾದ್ಯಂತ ನಡೆದ ಶಿವರಾತ್ರಿ ಉತ್ಸವ ಹಾಗೂ ಉದ್ಭವಲಿಂಗ ಅಮರೇಶ್ವರ ಕುರಿತ ಮೂರು ಪುಟದ ವರ್ಣರಂಜಿತ ವಿಶಿಷ್ಟ ವಿನ್ಯಾಸದ ವರದಿಗೆ ಶಿವ ಭಕ್ತರು ಪ್ರಶಂಸಿಸಿದರು.

ಪಶು ಸಂಗೋಪನಾ ಸಚಿವ ಪ್ರಭು ಚವಾಣ್ ಮಾತನಾಡಿ, ‘ಪ್ರಜಾವಾಣಿ ಸದಾ ಹೊಸತನದೊಂದಿಗೆ ಓದುಗರನ್ನು ಪ್ರೇರಣೆ ನೀಡುತ್ತದೆ. ಉದ್ಭವಲಿಂಗ ಅಮರೇಶ್ವರ ಕುರಿತ ವರದಿ ಉತ್ತಮ ರೀತಿ ಮೂಡಿ ಬಂದಿದೆ’ ಎಂದರು.

ತಹಶೀಲ್ದಾರ್ ಅರುಣಕುಮಾರ ಕುಲಕರ್ಣಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಾರುತಿ ಚವಾಣ್, ಪಟ್ಟಣ ಪಂಚಾಯಿತಿ ಸದಸ್ಯ ಧೊಂಡಿಬಾ ನರೋಟೆ, ಶರಣಪ್ಪ ಪಂಚಾಕ್ಷರಿ, ಕೇರಬಾ ಪವಾರ್, ರಾಮಶೆಟ್ಟಿ ಪನ್ನಾಳೆ, ಅಶೋಕ ಅಲ್ಮಾಜೆ, ಬಂಡೆಪ್ಪ ಕಂಟೆ, ಚಂದ್ರಪಾಲ ವಕೀಲ, ಪತ್ರಕರ್ತ ಮನ್ಮಥಪ್ಪ ಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT