ಬುಧವಾರ, ನವೆಂಬರ್ 25, 2020
19 °C

ಔರಾದ್‌ ಪಟ್ಟಣ ಪಂಚಾಯಿತಿಗೆ ಅವಿರೋಧ ಆಯ್ಕೆ: ಅಂಬಿಕಾ ಅಧ್ಯಕ್ಷೆ, ಸಂತೋಷ ಉಪಾಧ್ಯಕ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಔರಾದ್: ಇಲ್ಲಿಯ ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಅಂಬಿಕಾ ಕೇರಬಾ ಪವಾರ್, ಉಪಾಧ್ಯಕ್ಷರಾಗಿ ಸಂತೋಷ ಪೋಕಲವಾರ ಅವಿರೋಧವಾಗಿ ಆಯ್ಕೆಯಾದರು.

ನಿಗದಿತ ಸಮಯದೊಳಗೆ ಇಬ್ಬರೇ ನಾಮಪತ್ರ ಸಲ್ಲಿಸಿರುವ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ತಹಶೀಲ್ದಾರ್ ಎಂ.ಚಂದ್ರಶೇಖರ್ ಸಾಮಾನ್ಯ ಮಹಿಳೆಗೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಅಂಬಿಕಾ ಪವಾರ್, ಸಾಮಾನ್ಯ ವರ್ಗಕ್ಕೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ಸಂತೋಷ ಪೋಕಲವಾರ ಅವರ ಹೆಸರು ಘೋಷಣೆ ಮಾಡಿದರು.

ಒಟ್ಟು 20 ಸದಸ್ಯ ಬಲದ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ 12 ಸ್ಥಾನ ಪಡೆದು ಆಡಳಿತದ ಚುಕ್ಕಾಣಿ ಹಿಡಿದಿದೆ. ಆದರೆ, ಸೋಮವಾರ ನಡೆದ ಸಭೆಯಲ್ಲಿ ಬಿಜೆಪಿಯ ಇಬ್ಬರು ಸದಸ್ಯರು ಗೈರು ಹಾಜರಾಗುವ ಮೂಲಕ ಪಕ್ಷದಲ್ಲಿ ಅಸಮಾಧಾನ ಇದೆ ಎಂಬುದನ್ನು ತೋರಿಸಿಕೊಟ್ಟರು. ಸಭೆಯಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷ ಸೇರಿ 10 ಬಿಜೆಪಿ ಹಾಗೂ ಒಬ್ಬರು ಪಕ್ಷೇತರ ಸದಸ್ಯ ದಯಾನಂದ ಘುಳೆ ಹಾಜರಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಕೂಡ ಸಭೆಯಲ್ಲಿ ಭಾಗವಹಿಸಿ ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಶುಭ ಕೋರಿದರು.

ಸಭೆಯ ನಂತರ ನೂತನ ಅಧ್ಯಕ್ಷ, ಉಪಾಧ್ಯಕ್ಷರು ಬಿಜೆಪಿ ಕಾರ್ಯಕರ್ತರೊಂದಿಗೆ ಮೆರವಣಿಗೆ ಮೂಲಕ ಅಮರೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ನಂತರ ಪಕ್ಷದ ವತಿಯಿಂದ ನಡೆದ ಸಭೆಯಲ್ಲೂ ಭಾಗವಹಿಸಿದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್, ತಾಲ್ಲೂಕು ಘಟಕದ ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ, ಧುರೀಣ ಬಂಡೆಪ್ಪ ಕಂಟೆ, ವಿಜಯಕುಮಾರ ಪಾಟೀಲ, ಶಿವರಾಜ ಅಲ್ಮಾಜೆ, ವಸಂತ ಬಿರಾದಾರ, ಅರಹಂತ ಸಾವಳೆ, ಶಿವಾಜಿ ಚವಾಣ್, ಕಿರಣ ಪಾಟೀಲ ಇದ್ದರು.

ಪಟ್ಟಣದ ಅಭಿವೃದ್ಧಿಗೆ ನೂತನ ಆಡಳಿತ ಮಂಡಳಿ ಶ್ರಮಿಸಬೇಕಿದೆ. ಕುಡಿಯುವ ನೀರು, ಚರಂಡಿ ವ್ಯವಸ್ಥೆ, ಉದ್ಯಾನ ನಿರ್ಮಾಣ ಸೇರಿದಂತೆ ಪಟ್ಟಣದಲ್ಲಿ ಮೂಲ ಸೌಲಭ್ಯ ಕಲ್ಪಿಸುವುದರ ಕಡೆಗೆ ಆದ್ಯತೆ ನೀಡಬೇಕಿದೆ. ಇದಕ್ಕಾಗಿ ಸರ್ಕಾರದಿಂದ ಅನುದಾನ ಕೊಡಿಸುವುದಾಗಿ ಸಚಿವ ಪ್ರಭು ಚವಾಣ್ ಭರವಸೆ ನೀಡಿದರು.

ಸಭೆಗೆ ಗೈರಾದ ಇಬ್ಬರು ಬಿಜೆಪಿ ಸದಸ್ಯರು

ಔರಾದ್: ಸೋಮವಾರ ಇಲ್ಲಿ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿಯ ಇಬ್ಬರು ಸದಸ್ಯರು ಗೈರು ಹಾಜರಾಗುವ ಮೂಲಕ ಪಕ್ಷದಲ್ಲಿ ಎಲ್ಲವು ಸರಿಯಿಲ್ಲ ಎಂಬ ಮಾತು ಕೇಳಿಬಂದಿತು.

ಮೂರನೇ ವಾರ್ಡ್‌ ಸದಸ್ಯ ಸುನೀಲಕುಮಾರ ದೇಶಮುಖ ಹಾಗೂ ನಾಲ್ಕನೇ ವಾರ್ಡ್‌ನ ಅಬಜಲ್ ಪಠಾಣ ಚುನಾವಣೆಯಿಂದ ದೂರ ಉಳಿದರು. ಅಧ್ಯಕ್ಷ-ಉಪಾಧ್ಯಕ್ಷರ ಹೆಸರು ಘೋಷಿಸಲು ಅವರಿಗಾಗಿ ಅರ್ಧ ಗಂಟೆ ಕಾದರೂ ಅವರು ಸಭೆಗೆ ಬಾರದಿರುವುದು ಅಲ್ಲಿದ್ದ ಸಚಿವ ಪ್ರಭು ಚವಾಣ್ ಅವರು ಮುಜುಗರಪಡಬೇಕಾಯಿತು.

‘ಬೆಳಿಗ್ಗೆ ಅವರೆಲ್ಲರೂ ನಮ್ಮ ಜೊತೆಯಲ್ಲೇ ಇದ್ದರು. ಆದರೆ ಏಕಾಏಕಿ ಏನಾಯಿತು ಗೊತ್ತಿಲ್ಲ. ಆ ಇಬ್ಬರು ಸದಸ್ಯರನ್ನು ಕರೆಸಿ ಮಾತನಾಡುತ್ತೇನೆ’ ಎಂದು ಸಚಿವ ಪ್ರಭು ಚವಾಣ್ ತಿಳಿಸಿದರು.

‘ಈ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಪಕ್ಷದ ನಿಯಮದಂತೆ ನಡೆದಿಲ್ಲ. ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಹೀಗಾಗಿ ಸಭೆಗೆ ಹೋಗಲು ನಮಗೆ ಮನಸಾಗಿಲ್ಲ’ ಸಭೆಗೆ ಗೈರಾದ ಸದಸ್ಯ ಸುನೀಲಕುಮಾರ ದೇಶಮುಖ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.