ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್ ರೀಡಿಂಗ್ ಮೂಲಕ ಮಕ್ಕಳ ಹಾಜರಾತಿ

ಶೀಘ್ರ ಕಾಗದ ರಹಿತ ಅಂಗನವಾಡಿ ಕೇಂದ್ರ: ಸಚಿವೆ ಶಶಿಕಲಾ ಜೊಲ್ಲೆ
Last Updated 25 ಸೆಪ್ಟೆಂಬರ್ 2019, 15:52 IST
ಅಕ್ಷರ ಗಾತ್ರ

ಬೀದರ್: ‘ಅವ್ಯವಹಾರಗಳನ್ನು ತಡೆಯಲು ಅಂಗನವಾಡಿ ಕೇಂದ್ರಗಳನ್ನು ಕಾಗದ ರಹಿತ ಮಾಡಲು ಯೋಜಿಸಲಾಗಿದೆ. ಫೇಸ್ ರೀಡಿಂಗ್ ಮೂಲಕ ಮಕ್ಕಳ ಹಾಜರಾತಿ ಪಡೆಯಲು ಆ್ಯಪ್‌ ಅಭಿವೃದ್ಧಿಪಡಿಸಲಾಗುತ್ತಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ನಗರದ ಬಿಜೆಪಿ ಜಿಲ್ಲಾ ಘಟಕದ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಹಾಗೂ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

‘ಕೆಲವು ಅಂಗನವಾಡಿಗಳಲ್ಲಿ ಕಾರ್ಯಕರ್ತೆಯರು 10 ಮಕ್ಕಳಿದ್ದರೂ 20 ಮಕ್ಕಳ ಹಾಜರಾತಿ ತೋರಿಸುತ್ತಿದ್ದಾರೆ. ಆ್ಯಪ್‌ ಬಳಕೆಯಿಂದ ಅಕ್ರಮಗಳಿಗೆ ಕಡಿವಾಣ ಹಾಕಲು ಸಾಧ್ಯವಾಗಲಿದೆ. ಅಷ್ಟೇ ಅಲ್ಲ, ಅಂಗನವಾಡಿಗೆ ಪೂರೈಸಲಾಗುವ ಸಾಮಗ್ರಿಗಳನ್ನು ಆನ್‌ಲೈನ್‌ನಲ್ಲೇ ದಾಖಲು ಮಾಡುವುದರಿಂದ ಹಲವು ಸಮಸ್ಯೆಗಳು ನಿವಾರಣೆಯಾಗಲಿವೆ’ ಎಂದು ತಿಳಿಸಿದರು.

‘ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಶೇಕಡ 50ರಷ್ಟು ಹುದ್ದೆಗಳು ಖಾಲಿ ಇವೆ. 53 ಸಿಡಿಪಿಒ ಹುದ್ದೆಗಳಿಗೆ ಪರೀಕ್ಷೆ ಬರೆದು ಪಾಸಾದ ಅಭ್ಯರ್ಥಿಗಳಿಗೆ ಒಂಬತ್ತು ತಿಂಗಳು ಕಳೆದರೂ ನೇಮಕಾತಿ ಆದೇಶ ನೀಡಿರಲಿಲ್ಲ. ಇದೀಗ ಆದೇಶ ಕೊಡಲಾಗಿದೆ’ ಎಂದು ಹೇಳಿದರು.

‘ಈಗಾಗಲೇ ಆಯ್ಕೆ ಮಾಡಲಾಗಿರುವ 265 ಅಂಗನವಾಡಿ ಮೇಲ್ವಿಚಾರಕರಿಗೆ ತರಬೇತಿ ನೀಡಿ ತಕ್ಷಣ ಹುದ್ದೆಗಳಿಗೆ ನಿಯೋಜಿಸಲಾಗುವುದು. ನಾನು ಅಧಿಕಾರ ವಹಿಸಿಕೊಂಡ ತಕ್ಷಣ ಬಡತಿಯಲ್ಲಿನ ಗೊಂದಲ ನಿವಾರಿಸಲಾಗಿದೆ’ ಎಂದು ಹೇಳಿದರು.

‘ರಾಜ್ಯದಲ್ಲಿ ಅನೇಕ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ ಇಲ್ಲ. ಬೀದರ್‌ ನಗರದಲ್ಲಿ ಒಂದು ಅಂಗನವಾಡಿ ಕೇಂದ್ರಕ್ಕೂ ಸ್ವಂತ ಕಟ್ಟಡ ಇಲ್ಲ. ಸ್ವಂತ ಕಟ್ಟಡ ಇದ್ದರೆ ಶುದ್ಧ ಕುಡಿಯುವ ನೀರು, ಗುಣಮಟ್ಟದ ಆಹಾರ ಹಾಗೂ ಇಲಾಖೆಯ ಎಲ್ಲ ಸೌಲಭ್ಯ ಒದಗಿಸಲು ಅನುಕೂಲವಾಗಲಿದೆ’ ಎಂದರು.

‘ಹಿಂದೆ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಹೊಸ ರೂಪ ನೀಡಲಾಗುವುದು. ಈ ಮೂಲಕ ಆದರ್ಶ ಇಲಾಖೆಯನ್ನಾಗಿ ರೂಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT