ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಪತ್ರೆಗಳಿಂದ ಸುಲಿಗೆ ಕಡಿವಾಣ ಅಗತ್ಯ

Last Updated 22 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಬೆಲೆ ನಿಯಂತ್ರಣಕ್ಕೆ ಒಳಪಡದ ವಸ್ತುಗಳನ್ನು ಸಾವಿರಾರು ಪಟ್ಟು ಹೆಚ್ಚು ಲಾಭಕ್ಕೆ ಖಾಸಗಿ ಆಸ್ಪತ್ರೆಗಳು ಮಾರುತ್ತಿವೆ ಎಂದು ‘ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರ’ (ಎನ್‌ಪಿಪಿಎ) ನೀಡಿರುವ ವರದಿ ದೇಶದ ಆರೋಗ್ಯಕ್ಷೇತ್ರ ಅನಾರೋಗ್ಯಕ್ಕೆ ಒಳಗಾಗಿರುವುದನ್ನು ಸೂಚಿಸುವಂತಿದೆ. ಆಸ್ಪತ್ರೆಗಳ ಸುಲಿಗೆಕೋರತನವನ್ನು ಬಯಲು ಮಾಡುವಂತಿರುವ ಈ ವರದಿಯು ವೈದ್ಯಕೀಯ ಮಾಫಿಯಾದ ಕರಾಳಮುಖವನ್ನು ಅನಾವರಣಗೊಳಿಸಿದೆ.
₹ 13.64  ಬೆಲೆಯ ಇಂಜೆಕ್ಷನ್‍ಗೆ ಆಸ್ಪತ್ರೆಯೊಂದು ₹ 190 ವಸೂಲಿ ಮಾಡಿರುವುದನ್ನು ವರದಿ ಉದಾಹರಿಸಿದೆ. ಕೈಗವಸುಗಳು, ಸಿರಿಂಜ್‍ಗಳು, ಗ್ಲುಕೋಸ್‍ ನೀಡಲು ಬಳಸುವ ಐ.ವಿ. ಸೆಟ್‍, ಸಲೈನ್‍, ಇ.ಸಿ.ಜಿ. ಎಲೆಕ್ಟ್ರೋಡ್‍, ಇಂಜೆಕ್ಷನ್ ನಂತರ ಬಳಸುವ ಹತ್ತಿ, ಆಮ್ಲಿಪ್‍ ಮಾತ್ರೆ ಸೇರಿದಂತೆ ಹೆಚ್ಚು ಬಳಕೆಯ ಅನೇಕ ಔಷಧಿ ಹಾಗೂ ವಸ್ತುಗಳನ್ನು ಆಸ್ಪತ್ರೆಗಳು ನೂರಾರು ಪಟ್ಟು ಲಾಭಕ್ಕೆ, ಕೆಲವೊಮ್ಮೆ ಸಾವಿರಾರು ಪಟ್ಟು ಲಾಭಕ್ಕೆ ಮಾರುತ್ತಿವೆ. ವೈದ್ಯಕೀಯ ಪರೀಕ್ಷೆಗಳಿಗೆ ಹೆಚ್ಚಿನ ಶುಲ್ಕ ವಿಧಿಸಲಾಗುತ್ತಿದೆ. ಔಷಧ ಮತ್ತು ವೈದ್ಯಕೀಯ ಸಲಕರಣೆಗಳ ಉತ್ಪಾದಕರಿಗಿಂತಲೂ ಖಾಸಗಿ ಆಸ್ಪತ್ರೆಗಳೇ ಹೆಚ್ಚಿನ ಲಾಭ ಮಾಡಿಕೊಳ್ಳುತ್ತಿವೆ. ಬಹುತೇಕ ಆಸ್ಪತ್ರೆಗಳು ಉತ್ಪಾದಕರಿಂದ ಕಡಿಮೆ ಬೆಲೆಗೆ ಕೊಂಡು, ತಮ್ಮ ಫಾರ್ಮಸಿಗಳಲ್ಲಿ ಹೆಚ್ಚಿನ ಬೆಲೆಗೆ ವಿತರಿಸುತ್ತಿವೆ ಎಂದು ವರದಿ ಹೇಳಿದೆ. ಈ ವರದಿಯನ್ನು ಗಮನಿಸಿದರೆ, ದೇಶದಲ್ಲಿನ ಆರೋಗ್ಯ ವ್ಯವಸ್ಥೆ ಉಳ್ಳವರ ಕಾಳಜಿಯನ್ನಷ್ಟೇ ಮಾಡುತ್ತಿದ್ದು, ಜನಸಾಮಾನ್ಯರ ಪಾಲಿಗೆ ಮರೀಚಿಕೆಯಾಗುತ್ತಿದೆ ಎನ್ನುವುದನ್ನು ಸ್ಪಷ್ಟವಾಗಿ ಗುರ್ತಿಸಬಹುದು.

ಎನ್‍ಪಿಪಿಎ ವರದಿಯ ಹಿನ್ನೆಲೆಯಲ್ಲಿ 2017ರ ನವೆಂಬರ್‌ನಲ್ಲಿ ದೆಹಲಿಯ ಗುರುಗ್ರಾಮದ ಆಸ್ಪತ್ರೆಯೊಂದರಲ್ಲಿ ಏಳು ವರ್ಷದ ಬಾಲಕಿಯೊಬ್ಬಳು ಸಾವಿಗೀಡಾಗಿದ್ದ ಪ್ರಕರಣವನ್ನು ನೆನಪಿಸಿಕೊಳ್ಳಬಹುದು. ಮಗಳು ಉಳಿಯುವುದಿಲ್ಲವೆಂದು ತಿಳಿದ ನಂತರವೂ ವೈದ್ಯರು ಅನವಶ್ಯಕವಾಗಿ ಸೂಕ್ಷ್ಮ ನಿಗಾ ಘಟಕದಲ್ಲಿ ಇರಿಸಿದ್ದರು ಎಂದು ಬಾಲಕಿಯ ಪೋಷಕರು ಆರೋಪಿಸಿದ್ದರು. 15 ದಿನಗಳ ಚಿಕಿತ್ಸೆಯ ಸಮಯದಲ್ಲಿ 660 ಸಿರಿಂಜ್‍ ಹಾಗೂ 2,700 ಗವಸುಗಳನ್ನು ಬಳಸಿರುವುದಾಗಿ ಶುಲ್ಕ ವಿಧಿಸಿದ್ದ ಆಸ್ಪತ್ರೆ ಒಟ್ಟು ₹ 18 ಲಕ್ಷ ಮೊತ್ತದ ಬಿಲ್‍ ಮಾಡಿತ್ತು. ಈ ಕುರಿತ ಮಾಧ್ಯಮ ವರದಿಯ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ತನಿಖೆಗೆ ಆದೇಶಿಸಿದ್ದರು. ದೆಹಲಿ ಸುತ್ತಮುತ್ತಲಿನ ಕೆಲವು ಆಸ್ಪತ್ರೆಗಳ ವಿರುದ್ಧವೂ ದೂರುಗಳು
ವ್ಯಕ್ತವಾಗಿದ್ದವು. ಈ ದೂರುಗಳ ಹಿನ್ನೆಲೆಯಲ್ಲಿ ತನಿಖೆ ನಡೆಸಿರುವ ಪ್ರಾಧಿಕಾರ, ಆಸ್ಪತ್ರೆಗಳ ಸುಲಿಗೆಕೋರತನವನ್ನು ದೃಢಪಡಿಸಿದೆ. ವಿಶ್ವದಲ್ಲೇ ಬೃಹತ್‍ ಆರೋಗ್ಯ ಸವಲತ್ತು ಎಂದು ಬಣ್ಣಿಸಲಾಗುತ್ತಿರುವ ‘ಆಯುಷ್ಮಾನ್‍ ಭಾರತ’ ಯೋಜನೆಯನ್ನು ಬಜೆಟ್‍ನಲ್ಲಿ ಪ್ರಕಟಿಸಿರುವ ಸಂದರ್ಭದಲ್ಲೇ ಹೊರಬಿದ್ದಿರುವ ಈ ವಂಚನೆಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಔಷಧಿ ಕ್ಷೇತ್ರದಲ್ಲಿನ ಅನೈತಿಕತೆಯನ್ನು ಗಂಭೀರ ಅಪರಾಧವನ್ನಾಗಿ ಪರಿಗಣಿಸಬೇಕು. ರೋಗಿಗಳನ್ನು ಶೋಷಿಸುವ ಆಸ್ಪತ್ರೆಗಳ ಮೇಲೆ ಕಟ್ಟುನಿಟ್ಟು ಕ್ರಮ ಕೈಗೊಳ್ಳಬೇಕಿದೆ. ನಿಯಂತ್ರಣಕ್ಕೆ ಒಳಪಡದ ಔಷಧಿ ಮತ್ತು ವೈದ್ಯಕೀಯ ವಸ್ತುಗಳ ಬೆಲೆಯ ಮೇಲೆ ಹತೋಟಿ ಸಾಧಿಸಬೇಕಾದುದು ತುರ್ತು ಆಗಬೇಕಿರುವ ಕೆಲಸ. ಆಸ್ಪತ್ರೆಯ ಬಿಲ್‍ಗಳ ಬಗ್ಗೆ ಅನುಮಾನ ಉಂಟಾದಾಗ ಪ್ರಶ್ನಿಸುವ, ವಿಮರ್ಶಿಸುವ ಮನೋಭಾವವನ್ನು ಸಾರ್ವಜನಿಕರು ಕೂಡ ಬೆಳೆಸಿಕೊಳ್ಳಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT